ಮನೋರಂಜನೆ

ಗಾಂಧೀನಗರ ಎಂಬ ಮಾಯಾನಗರಿ ಗತವೈಭವ!

Pinterest LinkedIn Tumblr

gata-vaibhava-1ಗಾಂಧೀನಗರ ಹಾಗಂದರೆ ಕನ್ನಡ ಚಿತ್ರರಂಗ ಅನ್ನುವ ಕಾಲವೊಂದಿತ್ತು. ಗಾಂಧೀನಗರದ ಗಲ್ಲಿಗಲ್ಲಿಗಳಲ್ಲಿ ನಿರ್ಮಾಪಕರ ಕಛೇರಿಗಳು, ನಿರ್ದೇಶಕರ ಆಫೀಸುಗಳು, ಹಂಚಿಕೆದಾರರ ಕಾರ್ಯಾಲಯಗಳೇ ತುಂಬಿದ್ದವು. ಒಂದೊಂದು ಹಂಚಿಕೆದಾರರ ಕಾರ್ಯಾಲಯಕ್ಕೆ ಕಾಲಿಟ್ಟರೂ ಅಲ್ಲಿ ಸಿನಿಮಾಗಳ ಪೋಸ್ಟರುಗಳು, ಶತದಿನೋತ್ಸವ ಆಚರಿಸಿದ ಫ‌ಲಕಗಳು, ಅವರು ಹಂಚಿಕೆ ಮಾಡಿದ ವಿವಿಧ ಚಿತ್ರಗಳ ಸ್ಟಿಕ್ಕರುಗಳೇ ಕಾಣಿಸುತ್ತಿದ್ದವು. ಕಛೇರಿಯ ಮುಂದೆ ದೊಡ್ಡದಾಗಿ ಅಂಬಿಕಾ ಪಿಲ್ಮ್ಸ್, ಚಾಮುಂಡೀಶ್ವರಿ ಫಿಲ್ಮ್ಸ್, ವಜ್ರೆàಶ್ವರಿ ಕಂಬೈನ್ಸ್‌, ರಾಮು ಎಂಟರ್‌ಪ್ರೈಸಸ್‌, ಆರ್‌ಕೆ ಮೂವೀಸ್‌- ಎಂಬಿತ್ಯಾದಿ ಬೋರ್ಡುಗಳು ರಾರಾಜಿಸುತ್ತಿದ್ದವು. ಗಾಂಧೀನಗರದಲ್ಲೇ ಇರುವ ಕಾನಿಷ್ಕ ಹೊಟೆಲಿನ ಅಂಗಳದಲ್ಲಿ ಚಿತ್ರರಂಗದ ಮಂದಿಯೆಲ್ಲ ಸೇರುತ್ತಿದ್ದರು. ಅವಕಾಶ ಬಯಸುವವರು ಅಲ್ಲಿ ಹೋಗಿ ಕೈ ಕಟ್ಟಿ ನಿಂತುಕೊಂಡು ನಿರ್ಮಾಪಕರ, ನಿರ್ದೇಶಕರ ಕಣ್ಣಿಗೆ ಬೀಳುವುದಕ್ಕೆ ಹಾತೊರೆಯುತ್ತಿದ್ದರು.

ಅಲ್ಲೇ ನಿರ್ಮಾಪಕರೂ ನಿರ್ದೇಶಕರೂ ಭೇಟಿಯಾಗುತ್ತಿದ್ದರು. ನಿರ್ದೇಶಕರು ನಟರನ್ನು ಅಲ್ಲೇ ಯಾವುದಾದರೂ ಹೊಟೆಲಿಗೆ ಕರೆಸಿ ಮಾತುಕತೆ ನಡೆಸುತ್ತಿದ್ದರು. ಕಾರ್ಮಿಕರ ಒಕ್ಕೂಟದ ಕಛೇರಿಯೂ ಅಲ್ಲೇ ಪಕ್ಕದಲ್ಲಿರುತ್ತಿತ್ತು. ವಾಣಿಜ್ಯ ಮಂಡಳಿಯ ಸದಸ್ಯರೆಲ್ಲ ಅಲ್ಲೇ ಸಿಗುತ್ತಿದ್ದರು. ಥೇಟರ್‌ ಮಾಲಿಕರು ಅಲ್ಲೊಂದು ಆಫೀಸು ಮಾಡಿಕೊಂಡು ಕೂತಿರುತ್ತಿದ್ದರು. ಪತ್ರಿಕಾ ಪ್ರಚಾರಕರ್ತರ ಕಛೇರಿಯೂ ಅಲ್ಲೇ ಇತ್ತು. ಹೀಗಾಗಿ ಗಾಂಧೀನಗರ ಇಡೀ ಕನ್ನಡ ಚಿತ್ರರಂಗದ ಕೇಂದ್ರದಂತೆ ಕೆಲಸ ಮಾಡುತ್ತಿತ್ತು. ಅತ್ತ ತಿರುಗಿದರೆ ನಿರ್ಮಾಪಕರ ಸಂಘ, ಇತ್ತ ಹೊರಳಿದರೆ ನಿರ್ದೇಶಕರ ಸಂಘ, ತಲೆಯೆತ್ತಿದರೆ ಕಲಾವಿದರ ಸಂಘದ ಕಛೇರಿಗಳಿರುತ್ತಿದ್ದವು. ಅಲ್ಲೇ ಒಂದು ಪುಟ್ಟ ಥೇಟರು ಕೂಡ ಇದ್ದು, ಅಲ್ಲಿ ಸಿನಿಮಾ ಪ್ರದರ್ಶನಗಳೂ ನಡೆಯುತ್ತಿದ್ದವು.

ಇವತ್ತು ಗಾಂಧೀನಗರ ಆ ಸೊಗಸನ್ನು ಕಳೆದುಕೊಂಡಿದೆ. ಇವತ್ತು ನಿರ್ಮಾಣವಾಗುತ್ತಿರುವ ಬಹುತೇಕ ಚಿತ್ರಗಳ ನಿರ್ಮಾಪಕರಿಗೆ ಗಾಂಧೀನಗರದಲ್ಲಿ ಕಛೇರಿಯಿಲ್ಲ. ನಿರ್ದೇಶಕರು ಅಲ್ಲಿ ನಿಮಗೆ ಸಿಗುವುದಿಲ್ಲ. ಅಲ್ಲೀಗ ಗಾಸಿಪ್ಪುಗಳೂ ಹುಟ್ಟುವುದಿಲ್ಲ. ಹೊಸ ನಿರ್ದೇಶಕರು ಅಲ್ಲಿ ಅಲೆದಾಡುವುದನ್ನು ನೀವು ಕಾಣಲಾರಿರಿ. ನಿರ್ದೇಶಕರ ಸಂಘದ ಕಛೇರಿಯಲ್ಲಿ ಹೊಸದಾಗಿ ಬಂದ ನಿರ್ದೇಶಕರು ಕಾಣಸಿಗುವುದಿಲ್ಲ. ಬಹುತೇಕ ಸಿನಿಮಾಗಳ ನಿರ್ಮಾಪಕರ ಮನೆ ಮತ್ತೆಲ್ಲೋ ಇದೆ. ಹೀರೋಗಳನ್ನು ನಿರ್ಮಾಪಕರು ಅವರವರ ಮನೆಯಲ್ಲೇ ಭೇಟಿಯಾಗಬೇಕೇ ಹೊರತು, ಹೊಟೆಲಿಗೆ ಕರೆಸುವ ಸಂಪ್ರದಾಯ ಹೊರಟೇಹೋಗಿದೆ. ನಾಯಕಿಯರು ನೇರವಾಗಿ ಚಿತ್ರೀಕರಣದ ತಾಣಕ್ಕೇ ಬರುತ್ತಾರೆ.

ನಿಧಾನವಾಗಿ ಗಾಂಧೀನಗರ ಚಿತ್ರರಂಗದ ಮೇಲಿನ ತನ್ನ ಹಿಡಿತವನ್ನು ಕಳೆದುಕೊಂಡಂತಿದೆ. ವಜ್ರೆàಶ್ವರಿ ಕಂಬೈನ್ಸ್‌ ಕೇಂದ್ರಕಛೇರಿ ಕೂಡ ಹಳೆಯದಾಗಿದೆ. ಅದನ್ನು ಕೊಂಡುಕೊಳ್ಳುವ ಹೊತ್ತಿಗೆಲ್ಲಾ ಅದಕ್ಕೆ ನೂರೋ ನೂರೈವತ್ತೋ ವರ್ಷವಾಗಿತ್ತು. ಅದನ್ನೀಗ ರಿಪೇರಿ ಮಾಡುವುದು ಕೂಡ ಸಾಧ್ಯವಿಲ್ಲ. ಇನ್ನೊಂದು ವರುಷಕ್ಕೆ ಅದನ್ನು ಕೆಡವಿ ಹೊಸದಾಗಿ ಕಟ್ಟಿಸುವ ಯೋಚನೆಯಿದೆ ಅನ್ನುತ್ತಾರೆ ಪುನೀತ್‌ ರಾಜ್‌ಕುಮಾರ್‌. ವಜ್ರೆàಶ್ವರಿ ಕಂಬೈನ್ಸ್‌ ನಿರ್ಮಿಸುವ ಚಿತ್ರಗಳ ಸಂಖ್ಯೆಯೂ ಕಡಿಮೆ ಆಗಿರೋದರಿಂದ ಅಲ್ಲಿಗೆ ಅವಕಾಶ ಹುಡುಕಿಕೊಂಡು ಬರುವವರ ಸಂಖ್ಯೆಯೂ ಕುಂಠಿತವಾಗಿದೆ.

“ಮುಂಗಾರು ಮಳೆ’ ಮತ್ತು “ದುನಿಯಾ’ ಚಿತ್ರಗಳು ಬಿಡುಗಡೆಯಾದಾಗ, “ಅಮೃತಧಾರೆ’ ಗೆದ್ದಾಗ, ಗಣೇಶ್‌, ಬಿ. ಸುರೇಶ್‌, ರಮೇಶ್‌ ಅರವಿಂದ್‌, ಕೆ. ಮಂಜು- ಮುಂತಾದವರು ಸಿನಿಮಾ ಮಾಡುತ್ತಿದ್ದಾಗ ಕನ್ನಡ ಚಿತ್ರರಂಗ ಗಾಂಧೀನಗರದಲ್ಲಿ ಬೆಂಗಳೂರು ದಕ್ಷಿಣಕ್ಕೆ ಶಿಫಾrಗಲಿದೆ ಅನ್ನುವ ಮಾತು ಹಬ್ಬಿತ್ತು. ಗಾಂಧೀನಗರದ ಸಾರ್ವಭೌಮ್ಯವನ್ನು ಒಡೆಯಬೇಕು ಎಂದೂ ಅನೇಕರು ಮಾತಾಡುತ್ತಿದ್ದರು. ಕಾಲಾಂತರದಲ್ಲಿ ಗಾಂಧೀನಗರ ತಾನಾಗಿಯೇ ಕಳೆಗುಂದಿದ ನಗರಿಯಾಗಿದೆ. ಇವತ್ತು ಸ್ಟಾರ್‌ ಸಿನಿಮಾಗಳ ನಿರ್ದೇಶಕರು ಗಾಂಧೀನಗರದ ಪ್ರಮುಖ ಕುಳಗಳೇನಲ್ಲ. ಗಾಂಧೀನಗರದಲ್ಲಿ ನಿಮಗೆ ಸಿಗುವುದು ಕುಮಾರ್‌ ಮತ್ತು ಜಯಣ್ಣ ಕಂಬೈನ್ಸ್‌ ಎಂಬ ಎರಡೇ ಸಂಸ್ಥೆಗಳು. ಮಿಕ್ಕಂತೆ ಬಹುತೇಕ ನಿರ್ಮಾಪಕರು ತಮಗಿಷ್ಟ ಬಂದ ಕಡೆ ಕಛೇರಿ ಮಾಡಿಕೊಂಡು ಇದ್ದುಬಿಟ್ಟಿದ್ದಾರೆ.
ಗಾಂಧೀನಗರದಲ್ಲಿ ಕೂತರೆ ಮಾತ್ರ ಬಿಜಿನೆಸ್‌ ಆಗುತ್ತದೆ ಎಂಬ ನಂಬಿಕೆ ಕೂಡ ನಶಿಸಿಹೋಗಿದೆ.

ಈ ವರ್ಷ ಬಿಡುಗಡೆಯಾದ ಸಿನಿಮಾಗಳ ಪೈಕಿ ಗಾಂಧೀನಗರದಲ್ಲಿ ಆಫೀಸು ಮಾಡಿಕೊಂಡಿರುವವರ ಸಿನಿಮ ಎಷ್ಟಿದೆ ಲೆಕ್ಕ ಹಾಕಿ. ಗಾಂಧೀನಗರದ್ದು ಗತವೈಭವ ಅನ್ನೋದು ನಿಮಗೇ ಗೊತ್ತಾಗುತ್ತದೆ.
*ಜೋಗಿ
-ಉದಯವಾಣಿ

Write A Comment