ಇದುವರೆಗೂ ಕಿಚ್ಚ ಸುದೀಪ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರುಗಳು ನಡೆಸುತ್ತಿದ್ದ ಸಾಮಾಜಿಕ ಕಾರ್ಯಗಳು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡಾ ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಹೋರಾಟ ಆರಂಭಿಸಿದ್ದಾರೆ. ಅರೆ , ಅದೇನು ಹೋರಾಟ ಅಂತೀರಾ…? ಈ ಸ್ಟೋರಿ ಓದಿ ನಿಮಗೇ ಗೊತ್ತಾಗುತ್ತೆ.
ಹೌದು. ಸಾಮಾಜಿಕ ಕಾರ್ಯಗಳಿಗಾಗಿ ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಹಾಗೆಯೇ ಸ್ಯಾಂಡಲ್ ವುಡ್ ನಟರಾದ ಸುದೀಪ್ ಹಾಗೂ ಪುನೀತ್ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ. ಕಿಚ್ಚ ಸುದೀಪ್ ಬೆಂಗಳೂರು ಟ್ರಾಫಿಕ್ ಪೊಲೀಸರು ನಾಗರಿಕರಲ್ಲಿ ಸಂಚಾರಿ ನಿಯಮಗಳನ್ನು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ, ಪುನೀತ್ ರಾಜಕುಮಾರ್ ಹಾಗೂ ನಟಿ ರಾಧಿಕಾ ಪಂಡಿತ್, ಶಿಕ್ಷಣದ ಹಕ್ಕಿನ ಕುರಿತು ಮಾಹಿತಿ ನೀಡುವ ಕಾರ್ಯ ಮಾಡಿದ್ದರು.
ಅಲ್ಲದೇ ಪುನೀತ್, ಉಪೇಂದ್ರ, ರಾಗಿಣಿ ದ್ವಿವೇದಿ, ರಚಿತಾ ರಾಮ್ ಮೊದಲಾದವರು ಕರ್ನಾಟಕ ಹಾಲು ಒಕ್ಕೂಟದ ಉತ್ಪನ್ನಗಳನ್ನು ಪ್ರಮೋಟ್ ಮಾಡುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ತಾರೆಯರು ಜನರಲ್ಲಿ ಅರಿವು ಮೂಡಿಸುವ ಇಂತಹ ಜಾಹೀರಾತುಗಳಿಗೆ ಯಾವುದೇ ಸಂಭಾವನೆ ಪಡೆದಿರಲಿಲ್ಲವೆಂಬುದು ವಿಶೇಷ. ಈಗ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿರುವ ನಾಗರಿಕರಿಗೆ ಚಿಕನ್ ಗುನ್ಯಾ ಹಾಗೂ ಡೆಂಗ್ಯೂ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.