ಮೊದಲ ಬಾರಿಗೆ ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿರುವ ‘ಸೆಂಚುರಿ ಸ್ಟಾರ್’ ಶಿವರಾಜ್ಕುಮಾರ್ ನಟನೆಯ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದ ಟ್ರೇಲರ್ ಅವರ ಜನ್ಮದಿನದಂದೇ ಬಿಡುಗಡೆಯಾಗಿದೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ನಡೆದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಮ್ೋಪಾಲ್ ವರ್ವ, ನಟಿ ಪಾರುಲ್ ಯಾದವ್, ರಾಕ್ಲೈನ್ ವೆಂಕಟೇಶ್ ಮತ್ತಿತರರು ಹಾಜರಿದ್ದರು.
ಅಭಿಮಾನಿಗಳ ಮಧ್ಯೆ ಕುಳಿತು ಶಿವರಾಜ್ಕುಮಾರ್ ಟ್ರೇಲರ್ ವೀಕ್ಷಿಸಿದ್ದು ವಿಶೇಷ. 2.30 ನಿಮಿಷಗಳ ಈ ಟ್ರೇಲರ್ನಲ್ಲಿ ಒಂದಿಷ್ಟು ರೋಚಕ ದೃಶ್ಯಗಳನ್ನು ಕ್ರೋಡಿಕರಿಸಿದ್ದರೆ ವರ್ವ. ಅದರ ಜೊತೆಜೊತೆಗೆ ವೀರಪ್ಪನ್ ಹಿನ್ನೆಲೆಯನ್ನು ಹೇಳುತ್ತಾ ಹೋಗುತ್ತಾರೆ. 184 ಜನ ಅಮಾಯಕರನ್ನು, 97 ಪೊಲೀಸರನ್ನು ವೀರಪ್ಪನ್ ಕೊಂದಿದ್ದಾನೆ. ಈತನ ಬಂಧನಕ್ಕಾಗಿ ಸುಮಾರು 734 ಕೋಟಿ ರೂ.ಗಳನ್ನು ಸರ್ಕಾರಗಳು ಖರ್ಚು ಮಾಡಿವೆ. ಉಗ್ರ ಬಿನ್ ಲಾಡೆನ್ ಹತ್ಯೆ ಮಾಡಲು 10 ವರ್ಷ ಬೇಕಾದರೆ, ನರಹಂತಕ ವೀರಪ್ಪನ್ ಹೊಡೆದುರಿಳಿಸಲು 20 ವರ್ಷಗಳಷ್ಟು ಕಾಲಾವಧಿ ಬೇಕಾಯಿತು ಎಂಬ ವಿವರಣೆ ನೀಡುತ್ತಾರೆ.
ಟ್ರೇಲರ್ನ ಕೊನೆಯಲ್ಲಿ ‘ಒಳ್ಳೆಯ ದಾರಿ ಅನ್ನೋದು ಏನೂ ಇಲ್ಲ. ಉದ್ದೇಶ ಮತ್ತು ತಲುಪುವ ಗುರಿ ಒಳ್ಳೇದಾಗಿದ್ರೆ ಕೆಟ್ಟ ದಾರಿಯೂ ಒಳ್ಳೆಯ ದಾರಿಯೇ’ ಎಂದು ‘ಹ್ಯಾಟ್ರಿಕ್ ಹೀರೋ’ ಅವರಿಂದ ಡೈಲಾಗ್ ಹೇಳಿಸಲಾಗಿದೆ. ಆದರೆ ಇದೇ ಚಿತ್ರದ ತಮಿಳು, ತೆಲುಗು ಅವತರಣಿಕೆಗಳ ಟ್ರೇಲರ್ನಲ್ಲಿ ಈ ಡೈಲಾಗ್ ಇಲ್ಲ! ವರ್ವ ಟ್ರೇಲರ್ನಲ್ಲೇ ತಮ್ಮ ಮೇಕಿಂಗ್ ಶೈಲಿಯನ್ನು ಬಿಚ್ಚಿಟ್ಟಿದ್ದಾರೆ. ಗುಂಡಿನ ಸದ್ದು ಮೊಳಗಿದೆ. ಕಾಡು, ಜಲಪಾತಗಳ ಮಧ್ಯೆ ಶೂಟಿಂಗ್ ಮಾಡಿರುವ ಪರಿ ಸೊಗಸಾಗಿದೆ. ವೀರಪ್ಪನ್ ಗೆಟಪ್ನಲ್ಲಿ ಸಂದೀಪ್ ಸಖತ್ತಾಗಿಯೇ ಕಾಣಿಸಿಕೊಂಡಿದ್ದಾರೆ. ‘ಸಂಚಾರಿ’ ವಿಜಯ್, ರಾಜೇಶ್ ನಟರಂಗ, ರಾಕ್ಲೈನ್ ವೆಂಕಟೇಶ್, ಪಾರುಲ್, ಯಜ್ಞಾ ಶೆಟ್ಟಿಗೆ ಪ್ರಮುಖ ಪಾತ್ರಗಳಿವೆ.