ನಟಿಮಣಿಯರಿಗೆ ಗಾಸಿಪ್ ಕಿರಿಕಿರಿ ತಪ್ಪಿದ್ದಲ್ಲ. ಅದರಲ್ಲೂ ಪ್ರೀತಿ-ಪ್ರೇಮದ ಬಗೆಗಿನ ಗಾಳಿಸುದ್ದಿಗೆ ಹೆದರುವ ಮಂದಿಯೇ ಹೆಚ್ಚು. ಆದರೆ ಪ್ರಿಯಾಮಣಿ ಮಾತ್ರ ಈ ವಿಷಯದಲ್ಲಿ ಕೊಂಚ ಧೈರ್ಯ ತೋರಿದ್ದಾರೆ. ಬಿಜಿನೆಸ್ವುನ್ ಮುಸ್ತಾಫ ರಾಜ್ ಜೊತೆಗಿನ ತಮ್ಮ ಗೆಳೆತನದ ಬಗ್ಗೆ ಇದುವರೆಗೂ ಏನನ್ನೂ ಪ್ರತಿಕ್ರಿಯಿಸಿರದ ಪ್ರಿಯಾ, ಇದೀಗ ‘ಹೌದು, ನಾವು ಪ್ರೀತಿಸುತ್ತಿರುವುದು ನಿಜ’ ಎಂದು ಹೇಳಿಕೊಂಡಿದ್ದಾರೆ.
ಪ್ರಿಯಾಮಣಿ ಈ ರೀತಿ ಬ್ರೇಕಿಂಗ್ ನ್ಯೂಸ್ ಕೊಟ್ಟಿರುವುದಾಗಿ ಖಾಸಗಿ ವೆಬ್ಪೇಜ್ವೊಂದು ಸುದ್ದಿ ಪ್ರಕಟಿಸಿದೆ. ‘ಮುಸ್ತ್ತಾಫ ತುಂಬ ನಾಚಿಕೆ ಸ್ವಭಾವದ ವ್ಯಕ್ತಿ. ಹಾಗಾಗಿ, ಇದುವರೆಗೆ ನಾನು ಏನನ್ನೂ ಬಾಯಿ ಬಿಟ್ಟಿರಲಿಲ್ಲ. ಈಗ ಅವರ ಒಪ್ಪಿಗೆ ಪಡೆದು ವಿಷಯ ಬಹಿರಂಗಪಡಿಸುತ್ತಿದ್ದೇನೆ’ ಎಂದಿದ್ದಾರಂತೆ ಪ್ರಿಯಾಮಣಿ. ಮೂಲಗಳ ಪ್ರಕಾರ, ಇವರ ಪ್ರೀತಿಗೆ ಪೋಷಕರ ಕಡೆಯಿಂದಲೂ ಒಪ್ಪಿಗೆ ಸಿಕ್ಕಿದ್ದು ಸದ್ಯದಲ್ಲೇ ಮದುವೆ ನಿಶ್ಚಯಗೊಂಡರೂ ಅಚ್ಚರಿ ಇಲ್ಲ. ಆದರೆ, ಈ ಮಾತನ್ನು ಒಪ್ಪಿಕೊಳ್ಳಲು ಪ್ರಿಯಾ ಪೋಷಕರು ತಯಾರಿಲ್ಲ. ‘ವಿಜಯವಾಣಿ’ ಜತೆ ಮಾತನಾಡಿದ ಪ್ರಿಯಾ ತಾಯಿ, ‘ಅದರ ಬಗ್ಗೆ ನಮಗೇನು ಗೊತ್ತಿಲ್ಲ. ಅವರನ್ನೇ ಕೇಳಿ..’ ಎಂದು ಕಡ್ಡಿಮುರಿದಂತೆ ಉತ್ತರಿಸುತ್ತಾರೆ.
ಇಷ್ಟೆಲ್ಲ ಪುಕಾರುಗಳು ಹರಿದಾಡುತ್ತಿದ್ದರೂ ಪ್ರಿಯಾ ಮಾತ್ರ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಕಿರುತೆರೆ ರಿಯಾಲಿಟಿ ಶೋ ಮತ್ತು ಕೆಲವು ಚಿತ್ರಗಳ ಶೂಟಿಂಗ್ನಲ್ಲಿ ಅವರು ಬಿಜಿಯಾಗಿರುವುದರಿಂದ ದೂರವಾಣಿ ಸಂಪರ್ಕವೂ ಸಾಧ್ಯವಾಗುತ್ತಿಲ್ಲ. ಈ ಹಿಂದೆಯೇ ಇವರಿಬ್ಬರು ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಖತ್ ಸುದ್ದಿಯಾಗಿತ್ತು. ಸದ್ಯದ ತಾಜಾ ಮಾಹಿತಿಯಿಂದಾಗಿ ಅವುಗಳಿಗೀಗ ಮರುಜೀವ ಬಂದಂತಾಗಿದೆ.