ಮನೋರಂಜನೆ

ಬಾಲಿವುಡ್​ಗೆ ಮೈಸೂರು ಹುಡುಗ

Pinterest LinkedIn Tumblr

myso-fiಕೆಲವರು ಸದ್ದು ಮಾಡುತ್ತಲೇ ಇರುತ್ತಾರೆ; ಸಾಧನೆ ಮಾತ್ರ ಶೂನ್ಯ. ಈ ಮಾತಿಗೆ ಅಪವಾದ ಎಂಬಂತೆ ಕಿರುತೆರೆ ನಟ ಕಿರಣ್​ರಾಜ್ ಸದ್ದಿಲ್ಲದೇ ಸೀದಾ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ದೇವತೆ’ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಕಿರಣ್, ಸದ್ಯ ಬಾಲಿವುಡ್ ಚಿತ್ರವೊಂದಕ್ಕೆ ಹೀರೋ! ಮಯೂರ್ ಕೊಚಾಡಿಯಾ ನಿರ್ದೇಶಿಸುತ್ತಿರುವ ‘ಲವ್ 18’ ಮೂಲಕ ಕಿರಣ್ ಹಿಂದಿಗೆ ಕಾಲಿಟ್ಟಿದ್ದಾರೆ. ಅವರಿಗಿಲ್ಲಿ ‘ಜನ್ನತ್’ ಖ್ಯಾತಿಯ ನಟಿ ಸೋನಾಲ್ ಚೌಹಾಣ್ ನಾಯಕಿ. ಈ ಹಿಂದೆ ಶಿವರಾಜ್​ಕುಮಾರ್ ಅಭಿನಯದ ‘ಚೆಲುವೆಯೇ ನಿನ್ನೇ ನೋಡಲು’ ಚಿತ್ರದಲ್ಲಿ ಸೋನಾಲ್ ಕಾಣಿಸಿಕೊಂಡಿದ್ದರು.

ಬಾಲಿವುಡ್​ಗೆ ಎಂಟ್ರಿ ಪಡೆಯುತ್ತಿರುವ ಖುಷಿಯಲ್ಲಿರುವ ಕಿರಣ್, ‘ಲವರ್​ಬಾಯ್ ಲುಕ್​ನಲ್ಲಿ, ಸಖತ್ ಸ್ಟೈಲಿಷ್ ಆಗಿ ನಾನು ಕಾಣಿಸಿಕೊಳ್ಳಲಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ. ಮೂಲತಃ ಮೈಸೂರಿನವರಾದ ಅವರು, ಮುಂಬೈನಲ್ಲಿ ಸಿನಿಮಾ ತರಬೇತಿ ಪಡೆದವರು. ಪ್ರಾರಂಭದ ದಿನಗಳಲ್ಲಿ ಹಿಂದಿಯ ಒಂದಷ್ಟು ರಿಯಾಲಿಟಿ ಶೋಗಳಲ್ಲಿ ಮಿಂಚಿ, ಕೆಲ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದರು. ನಂತರ ಮಾತೃಭಾಷೆಯೆಡೆಗೆ ಪಯಣ. ‘ಜೀ ಕನ್ನಡ ವಾಹಿನಿಯ ‘ಲೈಫು ಸೂಪರ್ ಗುರು’, ‘ಪಾರ್ವತಿ ಪರಮೇಶ್ವರ’ದಲ್ಲಿ ನಟಿಸಿದೆ. ‘ದೇವತೆ’ ಸೀರಿಯಲ್​ನಲ್ಲಿ ಲೀಡ್ ರೋಲ್ ಸಿಕ್ಕಿತು. ಈಗ ಹಿಂದಿ ಸಿನಿಮಾಗೆ ಆಡಿಷನ್ ಮೂಲಕ ಆಯ್ಕೆಯಾಗಿದ್ದೇನೆ’ ಎಂದು ಸಂಭ್ರಮಿಸುತ್ತಾರೆ ಕಿರಣ್.

‘ಲವ್ 18’ನಲ್ಲಿ ಕಿರಣ್ ತಂದೆ ಪಾತ್ರದಲ್ಲಿ ಅನುಪಮ್​ಖೇರ್ ನಟಿಸುತ್ತಿರುವುದು ಅವರ ಖುಷಿ ಮತ್ತಷ್ಟು ಹೆಚ್ಚಲಿಕ್ಕೆ ಕಾರಣ. ಇದೇ ತಿಂಗಳಂತ್ಯಕ್ಕೆ ಶೂಟಿಂಗ್ ಶುರುವಾಗಲಿದ್ದು, ಶೀಘ್ರವೇ ಮುಂಬೈಗೆ ಹಾರಲಿದ್ದಾರೆ. ಹಾಗಂತ ಬಾಲಿವುಡ್ ಸಿನಿಮಾಗೋಸ್ಕರ ಕಿರುತೆರೆ ತೊರೆಯುತ್ತಾರೆ ಎಂದುಕೊಳ್ಳುವಂತಿಲ್ಲ. ಯಾಕೆಂದರೆ, ಇತ್ತ ಧಾರಾವಾಹಿ ಅತ್ತ ಸಿನಿಮಾ ಎರಡನ್ನೂ ಏಕಕಾಲದಲ್ಲಿ ನಿಭಾಯಿಸುವ ಸಾಹಸ ಕಿರಣ್ ಅವರದು.

Write A Comment