ಚಿತ್ರರಂಗದಲ್ಲಿ ಹೆಸರು ಮಾಡಿದವರು ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಗುರುತಿಸಿಕೊಳ್ಳುವುದು ತಮಿಳುನಾಡು ಟ್ರೆಂಡ್. ಇದೇ ಹಾದಿಯಲ್ಲಿ ಕೇಳಿಬಂದಿರುವ ನೂತನ ಹೆಸರು ತ್ರಿಷಾ ಕೃಷ್ಣನ್. ಕೆಲ ತಿಂಗಳ ಹಿಂದಷ್ಟೇ, ಮಾಡಿಕೊಂಡ ನಿಶ್ಚಿತಾರ್ಥ ಮುರಿದುಕೊಳ್ಳುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ತ್ರಿಷಾ ಈಗ ರಾಜಕಾರಣದ ಹಿನ್ನೆಲೆಯಲ್ಲಿ ಸೌಂಡು ಮಾಡುತ್ತಿದ್ದಾರೆ. ‘ನಿಜವಾಗಿಯೂ ತ್ರಿಷಾ ರಾಜಕೀಯಕ್ಕೆ ಎಂಟ್ರಿ ಪಡೆದುಬಿಟ್ಟರಾ’ ಎಂಬ ಪ್ರಶ್ನೆ ಉದ್ಭವಿಸಿದರೆ, ಅದಕ್ಕುತ್ತರ; ‘ನೋ’! ಸ್ವತಃ ತ್ರಿಷಾ ಅವರೇ ಟ್ವೀಟ್ ಮಾಡಿ, ಹಬ್ಬಿರುವ ವದಂತಿಗೆ ಫುಲ್ಸ್ಟಾಪ್ ಇಟ್ಟಿದ್ದಾರೆ. ಅಷ್ಟಕ್ಕೂ ಈ ಥರದ್ದೊಂದು ನ್ಯೂಸ್ ಬ್ರೇಕ್ ಆಗಲಿಕ್ಕೆ ಕಾರಣ, ತ್ರಿಷಾ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋ!!
ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತ್ರಿಷಾಗೆ ಪ್ರಶಸ್ತಿ ವಿತರಿಸಿದ್ದಾರೆ. ಆ ಪೋಟೋವನ್ನು ತ್ರಿಷಾ, ತಮ್ಮ ಖಾತೆಯ ಪ್ರೋಫೈಲ್ಗೆ ಹಾಕಿದ್ದಾರೆ. ಇಷ್ಟು ಸಾಕಿತ್ತು, ಗಾಸಿಪ್ ಪಂಡಿತರಿಗೆ; ‘ತ್ರಿಷಾ ಎಐಎಡಿಎಂಕೆ ಪಕ್ಷ ಸೇರಲಿದ್ದಾರೆ’ ಎಂದು ಗಾಳಿಸುದ್ದಿ ಹರಡಿಸಲು!ಇದಕ್ಕೆ ಟ್ವೀಟ್ ಮೂಲಕವೇ ಉತ್ತರ ನೀಡಿರುವ ತ್ರಿಷಾ, ‘ಇತ್ತೀಚಿನ ವರದಿಗಳೆಲ್ಲವೂ ಸುಳ್ಳು. ನಾನು ರಾಜಕೀಯ ಸೇರುತ್ತಿಲ್ಲ. ಸದ್ಯಕ್ಕಂತೂ ಆ ಆಲೋಚನೆ ಇಲ್ಲವೇ ಇಲ್ಲ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಅಷ್ಟಕ್ಕೂ ತ್ರಿಷಾ ಏನು ಖಾಲಿ ಕುಂತಿಲ್ಲ. ‘ತೂಂಗಾವನಂ’, ‘ಅರಣ್ಮಯಿ 2’, ‘ಭೂಹಾಲಾಹಂ’, ‘ಭೋಗಿ’, ‘ನಾಯಕಿ’, ‘ಸಕಲ ಕಲಾವಲ್ಲಭನ್’ ಹೀಗೆ ಕೈತುಂಬ ಚಿತ್ರಗಳಿವೆ. ಇಷ್ಟರಮಧ್ಯೆ ಅವರಿಗೆ ರಾಜಕೀಯ ಮಾಡಲು ಸಮಯವಾದರೂ ಎಲ್ಲಿದ್ದೀತು..?