ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಪ್ರೇಮಿಗಳು ಎಂಬುದರಲ್ಲಿ ಅನುಮಾನವಿಲ್ಲ. ತಮ್ಮಿಬ್ಬರ ಸಂಬಂಧದ ಬಗ್ಗೆ ಅವರೇನನ್ನೂ ಮುಚ್ಚಿಟ್ಟಿಲ್ಲ. ಸರಿ, ಹಾಗಾದರೆ ಮದುವೆ ಯಾವಾಗ ಎಂಬುದೇ ಸದ್ಯ ಅಭಿಮಾನಿಗಳ ತಲೆಯಲ್ಲಿರುವ ಕುತೂಹಲಭರಿತ ಪ್ರಶ್ನೆ. ಅದಕ್ಕೆ ತಕ್ಕಂತೆ ಈ ಜೋಡಿ ಎಲ್ಲೇ ಹೋದರೂ, ಏನೇ ಮಾಡಿದರೂ ಒಂದಷ್ಟು ರಸವತ್ತಾದ ಸುದ್ದಿ ಹಬ್ಬುವುದು ಮಾಮೂಲು. ಮೊದಲೆಲ್ಲ ಇಂಥ ಸುದ್ದಿಗಳಿಗೆ ಸಿಟ್ಟಿನಿಂದಿಲೇ ಪ್ರತಿಕ್ರಿಯಿಸುತ್ತಿದ್ದ ಕತ್ರಿನಾ, ಈಗ ವರಸೆ ಬದಲಿಸಿದ್ದಾರೆ. ತಮ್ಮ ಮದುವೆಯ ಬಗ್ಗೆ ಮಾಧ್ಯಮಗಳು ಆಸಕ್ತಿ ಇಟ್ಟುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ!
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಅಲಿಬಾಗ್ ಕಡಲ ಕಿನಾರೆಯಲ್ಲಿ ಕತ್ರಿನಾ ಹುಟ್ಟುಹಬ್ಬವನ್ನು ಆಚರಿಸಿದ್ದರು ರಣಬೀರ್. ಅದೇ ವೇಳೆ ತಮ್ಮ ಮದುವೆ ಬಗ್ಗೆ ಸ್ಪಷ್ಟ ತೀರ್ವನ ತೆಗೆದುಕೊಂಡು, ಕತ್ರಿನಾ ಪೋಷಕರ ಬಳಿ ನಿಶ್ಚಿತಾರ್ಥದ ವಿಷಯ ಮಾತನಾಡಲು ಲಂಡನ್ಗೆ ಹಾರಿತ್ತು ಈ ಜೋಡಿ ಎಂದೆಲ್ಲ ಸುದ್ದಿ ಹಬ್ಬಿತ್ತು. ಆದರೆ, ಇವರಿಬ್ಬರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮೊನ್ನೆ ‘ಫ್ಯಾಂಟಮ್ ಚಿತ್ರದ ಟ್ರೇಲರ್ ಲಾಂಚ್ ಸಮಾರಂಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕತ್ರಿನಾ, ನಿಶ್ಚಿತಾರ್ಥದ ಗಾಳಿಸುದ್ದಿಗೆ ಪೂರ್ಣವಿರಾಮ ಹಾಕಿದ್ದಾರೆ. ವಿಶೇಷವೆಂದರೆ, ಖಾಸಗಿ ಬದುಕಿನ ಬಗ್ಗೆ ಎದುರಾದ ಈ ಪ್ರಶ್ನೆಗೆ ಅವರು ಕಿಂಚಿತ್ತೂ ಬೇಸರಿಸಿಕೊಂಡಿಲ್ಲ. ‘ನೀವು ತುಂಬ ಒಳ್ಳೆಯರು. ನಾನು ಬೇಗ ಮದುವೆಯಾಗಲಿ ಅಂತ ಬಯಸುತ್ತಿದ್ದೀರಿ. ಆದರೆ ಕ್ಷಮೆ ಇರಲಿ… ನಾನಿನ್ನೂ ಆ ಬಗ್ಗೆ ಯೋಚಿಸಿಲ್ಲ’ ಎಂದು ನಗುಮೊಗದಿಂದಲೇ ಉತ್ತರಿಸಿದ್ದಾರೆ ಕ್ಯಾಟ್. ಕತ್ರಿನಾ ಅವರ ಈ ಹೇಳಿಕೆ ಬಗ್ಗೆ ಪ್ರಿಯಕರ ರಣಬೀರ್ ತುಟಿಬಿಚ್ಚಿಲ್ಲ. ಅವರ ಸ್ಪಷ್ಟನೆ ಇನ್ನೇನಿದೆಯೋ?!