ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಬಹು ಚರ್ಚಿತವಾಗುತ್ತಿರುವ ಸಂಗತಿಯೆಂದರೇ ಕತ್ರೀನಾ ಕೈಫ್ ಹಾಗೂ ರಣಬೀರ್ ಕಪೂರ್ ವಿವಾಹಕ್ಕೆ ರಣಬೀರ್ ಕಪೂರ್ ಪೋಷಕರು ಒಪ್ಪಿಗೆ ಸೂಚಿಸುತ್ತಾರೆಯೇ ಎಂಬುದರ ಕುರಿತದ್ದಾಗಿದೆ.
ಅಲ್ಲದೇ ಸಲ್ಮಾನ್ ಖಾನ್ ಅವರ ‘ಭಜರಂಗಿ ಭಾಯಿಜಾನ್’ ಚಿತ್ರವನ್ನು ಅವರ ಮಾಜಿ ಗೆಳತಿ ಕತ್ರೀನಾ ಕೈಫ್ ವೀಕ್ಷಿಸಿರುವುದೂ ಬಾಲಿವುಡ್ ಮಂದಿಯ ಗುಸು ಗುಸು ಮಾತಿಗೆ ಕಾರಣವಾಗಿದೆ. ಜೊತೆಗೆ ‘ಭಜರಂಗಿ ಭಾಯಿಜಾನ್’ ವೀಕ್ಷಿಸಿದ ಬಳಿಕ ಕತ್ರೀನಾ ಕೈಫ್, ಸಲ್ಮಾನ್ ಖಾನ್ ರಿಗೆ ಕರೆ ಮಾಡಿದ್ದಾರೆಂಬ ಸುದ್ದಿಯೂ ಚಾಲ್ತಿಯಲ್ಲಿದ್ದು, ಅವರು ಏನು ಹೇಳಿರಬಹುದೆಂಬ ಕುತೂಹಲವೂ ಮನೆ ಮಾಡಿದೆ.
ಇದಕ್ಕೆಲ್ಲಾ ಉತ್ತರವನ್ನು ಕತ್ರೀನಾ ಕೈಫ್ ತಮ್ಮ ಖಾಸಗಿ ಮಾತುಕತೆಯಲ್ಲಿ ಹೇಳಿಕೊಂಡಿದ್ದಾರೆನ್ನಲಾಗಿದ್ದು, ‘ಭಜರಂಗಿ ಭಾಯಿಜಾನ್’ ವೀಕ್ಷಿಸಿ ಖುಷಿಗೊಂಡ ಕತ್ರೀನಾ, ಸಲ್ಮಾನ್ ಖಾನ್ ಅವರನ್ನು ಅಭಿನಂದಿಸಿ ಮೆಸೇಜ್ ಮಾಡಿದ್ದಾರೆಂದು ಹೇಳಲಾಗಿದೆ. ಅಲ್ಲದೇ ಈ ಚಿತ್ರದಲ್ಲಿ ತಮ್ಮ ಮುಗ್ದತೆಯ ಅಭಿನಯದ ಮೂಲಕ ಸಲ್ಮಾನ್ ‘ಹಮ್ ದೇ ದಿಲ್ ದೇ ಚುಕೇ ಸನಮ್’ ನಲ್ಲಿನ ಪಾತ್ರ ನೆನಪಿಸುತ್ತಾರೆಂದು ಕತ್ರೀನಾ ತಿಳಿಸಿರುವರೆಂದು ಹೇಳಲಾಗಿದೆ.
ಜೊತೆಗೆ ತಮ್ಮ ಹಾಗೂ ರಣಬೀರ್ ಕಪೂರ್ ವಿವಾಹಕ್ಕೆ ಸಲ್ಮಾನ್ ಖಾನ್ ಅವರನ್ನೂ ಆಹ್ವಾನಿಸಲು ಕತ್ರೀನಾ ಮುಂದಾಗಿದ್ದು, ಸಲ್ಮಾನ್ ಖಾನ್ ಕೂಡಾ ಈ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆಂದು ಹೇಳಲಾಗಿದೆ.