ಕ್ರಿಕೆಟ್ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೆಲ ತಿಂಗಳುಗಳ ಹಿಂದಷ್ಟೇ ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ತಂಡದ ಕೆಲ ಆಟಗಾರರ ಜೊತೆ ನೆಟ್ ಪ್ರಾಕ್ಟೀಸ್ ಮಾಡಿದ್ದ ಮಧ್ಯೆ ಮುಂಬೈನಲ್ಲಿ ಬಾಲಿವುಡ್ ನಟರೊಬ್ಬರ ಜೊತೆ ಆಟವಾಡಿ ಮತ್ತೆ ಸುದ್ದಿಯಾಗಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಜೀವನಾಧರಿತ ಚಿತ್ರದಲ್ಲಿ ಧೋನಿಯವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಧೋನಿಯವರ ಸ್ಟೈಲಿನಲ್ಲಿ ಹೆಲಿಕಾಪ್ಟರ್ ಶಾಟ್ ಬಾರಿಸಲು ಹೋಗಿ ಸುಶಾಂತ್ ಸಿಂಗ್ ರಜಪೂತ್ ಗಾಯಗೊಂಡಿದ್ದರು.
ಹಾಗಾಗಿ ಕ್ರಿಕೆಟ್ ಕುರಿತು ಇನ್ನಷ್ಟು ತಿಳಿಯುವ ಕುತೂಹಲದಿಂದ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ಮೈದಾನಕ್ಕೆ ತೆರಳಿದ್ದಾರೆ. ಇದೇ ವೇಳೆ ಅಲ್ಲಿ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದು, ಸುಶಾಂತ್ ಸಹ ಅವರೊಂದಿಗೆ ಸೇರಿಕೊಂಡಿದ್ದಾರೆ. ಅರ್ಜುನ್, ಸುಶಾಂತ್ ಸಿಂಗ್ ರಿಗೆ ಕೆಲ ಓವರ್ ಬೌಲ್ ಮಾಡಿದ್ದು, ಅವರು ಸಿಕ್ಸರ್ ಕೂಡಾ ಬಾರಿಸಿದ್ದಾರೆಂದು ಹೇಳಲಾಗಿದೆ. ಜೊತೆಗೆ ಅರ್ಜುನ್ ಬಳಿ ಕ್ರಿಕೆಟ್ ಕುರಿತ ಕೆಲ ಟಿಪ್ಸ್ ಪಡೆದ ಸುಶಾಂತ್ ಸಿಂಗ್ ಬಾಲಿವುಡ್ ಚಿತ್ರರಂಗದ ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರಂತೆ.