ಬೆಂಗಳೂರು: ರಾಜ್ಯಾದಾದ್ಯಂತ ಅನ್ನದಾತ ರೈತರ ಆತ್ಮಹತ್ಯೆಗಳಿಂದ ರೈತ ಸಮೂಹ ನೊಂದಿದೆ. ಈ ನೋವನ್ನು ರೈತರು ಸ್ವಾತಂತ್ರ್ಯದಿನಾಚರಣೆಯಂದು ಸಚಿವರ ವಿರುದ್ಧ ಆಕ್ರೋಶದ ಮೂಲಕ ವ್ಯಕ್ತಪಡಿಸಿದರು. ಬೆಳೆ ಕೈಕೊಟ್ಟ ಕಾರಣದಿಂದ ಸಾಲದ ಬಾಧೆ ತಾಳದೇ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಆದರೆ ಸರ್ಕಾರ ರೈತರ ಸಂಕಷ್ಟಕ್ಕೆ ಸರಿಯಾಗಿ ಸ್ಪಂದಿಸದಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.
ಮಂಡ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಆಗಮಿಸಿದ ಅಂಬರೀಶ್‌ಗೆ ಜೆಡಿಎಸ್ ಮತ್ತು ರೈತ ಸಂಘಟನೆಗಳು ಘೇರಾವ್ ಹಾಕಿದವು. ಕೊನೆಗೆ ರೈತರ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ಅಂಬರೀಶ್ ಭರವಸೆ ನೀಡಿದ ಬಳಿಕ ಅವರಿಗೆ ಉದ್ಘಾಟನೆಗೆ ಅವಕಾಶ ನೀಡಲಾಯಿತು.
ಧಾರವಾಡದಲ್ಲಿ ದಿನೇಶ್ ಗುಂಡೂರಾವ್ ಧ್ವಜಾರೋಹಣ ಸಂದರ್ಭದಲ್ಲಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಚಾಮರಾಜನಗರದಲ್ಲಿ ಮಹದೇವ ಪ್ರಸಾದ್‌ಗೆ ಘೇರಾವ್ ಹಾಕಿದರು. ರೈತ ವಿರೋಧಿ ನೀತಿಗಳ ವಿರುದ್ಧ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರಕ್ಕೆ ಧಿಕ್ಕಾರ ಕೂಗಿ ಕಪ್ಪು ಬಾವುಟ ಪ್ರದರ್ಶನ ಮಾಡಿದರು. ರೈತರು ಸರಣಿಯೋಪಾದಿಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಅವರ ಸಮಸ್ಯೆಗೆ ಈ ಸಚಿವರು ಸರಿಯಾಗಿ ಸ್ಪಂದಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.