ಕಿತನೇ ಆದ್ಮಿ ತೇ… ಬಸಂತಿ ಇನ್ ಕುತ್ತೋಂಕೆ ಸಾಮ್ನೆ ಮತ್ ನಾಚೋ …ಈ ಡೈಲಾಗ್ ಗಳು ಎಷ್ಟು ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ ಎಂದರೆ ಚಿತ್ರ ಬಿಡುಗಡೆಯಾಗಿ ನಲವತ್ತು ವರ್ಷ ಕಳೆದರೂ ಖದರ್ ಇನ್ನೂ ಕಡಿಮೆಯಾಗದೇ ಹಾಗೆಯೇ ಉಳಿದಿದೆ. ಹೌದು, ‘ಶೋಲೆ’ ಚಿತ್ರ ಬಿಡುಗಡೆಯಾಗಿ 4 ದಶಕ. ಇನ್ನೂ ಈ ಚಿತ್ರ ಕುತೂಹಲ ಉಳಿಸಿಕೊಂಡಿದೆ ಎಂದರೆ ನೀವೇ ಊಹಿಸಿ.
ಅಮಿತಾಬ್ ಗೆ ಆ್ಯಂಗ್ರಿ ಯಂಗ್ ಮ್ಯಾನ್ ಲುಕ್ ತಂದುಕೊಟ್ಟ ಚಿತ್ರವಿದು. ಸೂಪರ್ ಸ್ಟಾರ್ ಆಗಿದ್ದ ಧರ್ಮೇಂದ್ರ ಮತ್ತು ಹೇಮಾಮಾಲಿನಿ ನಡುವೆ ಪ್ರೇಮಾಂಕುರ ಮೂಡಿಸಿದ ಚಿತ್ರ. ಚಿತ್ರದ ನಿರ್ದೇಶಕ ರಮೇಶ್ ಸಿಪ್ಪಿ ಉತ್ತರ ಭಾರತದಲ್ಲೇ ಕೇಂದ್ರೀಕೃತವಾಗಿದ್ದ ಹಿಂದಿ ಚಿತ್ರರಂಗದ ಶೂಟಿಂಗ್ ಅನ್ನು ಈ ಚಿತ್ರದ ಮೂಲಕ ದಕ್ಷಿಣ ಭಾರತಕ್ಕೂ ವಿಸ್ತರಿಸಿದರು. ಕರ್ನಾಟಕದ ರಾಮನಗರ ಬಳಿ ರಾಮ್ ಘರ್ ಎನ್ನುವ ಹೊಸ ಗ್ರಾಮದ ಸೆಟ್ ಅನ್ನು ಈ ಚಿತ್ರಕ್ಕಾಗಿ ಹಾಕಲಾಗಿತ್ತು. ಇಲ್ಲಿನ ಬಂಡೆ ಗುಡ್ಡೆಗಳು ದರೋಡೆಕೋರರಿಗೆ ಹೇಳಿ ಮಾಡಿಸಿದ ತಾಣದಂತಿತ್ತು.
ಅದುವರೆಗೆ ಈ ರೀತಿಯ ಕಥಾ ವಸ್ತು ಇರುವ ಸಿನಿಮಾಗಳನ್ನು ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ದರೋಡೆಕೋರರ ಕಥಾ ವಸ್ತು ಹೊಂದಿರುವ ‘ಶೋಲೆ’ ಚಿತ್ರಕ್ಕೆ ಚಂಬಲ್ ಕಣಿವೆಯಲ್ಲಿ ಶೂಟಿಂಗ್ ನಡೆಸುವುದು ಸವಾಲಿನ ಕೆಲಸವಾಗಿತ್ತು. ಆಗ ಡಕಾಯಿತರ ಉಪಟಳ ಜಾಸ್ತಿ ಇತ್ತು. ಇದರಿಂದ ರಮೇಶ್ ಸಿಪ್ಪಿ ಕರ್ನಾಟಕದ ರಾಮನಗರದಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದರು.
ಪ್ರಾಮಾಣಿಕ ಪೊಲೀಸ್ ಅಧಿಕಾರಿ ಠಾಕೂರ್ (ಸಂಜೀವ್ ಕುಮಾರ್) ಡಕಾಯಿತನನ್ನು ಬಂಧಿಸಿ ಆತನ ಗ್ರಾಮಸ್ಥರನ್ನು ರಕ್ಷಿಸುತ್ತಾನೆ. ಆದರೆ ಜೈಲಿಂದ ತಪ್ಪಿಸಿಕೊಳ್ಳುವ ಡಕಾಯಿತ ಗಬ್ಬರ್ ಸಿಂಗ್(ಅಮ್ಜದ್ ಖಾನ್) ಪೊಲೀಸ್ ಅಧಿಕಾರಿಯ ಕುಟುಂಬ ನಾಶ ಮಾಡುತ್ತಾನೆ. ಆಗ ಗಬ್ಬರ್ ಸಿಂಗ್ ವಿರುದ್ಧ ಸೇಡು ತೀರಿಸಿಕೊಳ್ಳಲು ಜೈಲಲ್ಲಿದ್ದ ವೀರೂ (ಧರ್ಮೇಂದ್ರ) ಹಾಗೂ ಜೈ (ಅಮಿತಾಬ್) ಅವರನ್ನು ಕರೆ ತರುತ್ತಾನೆ ಠಾಕೂರ್. ಅವರು ದರೋಡೆಕೋರನನ್ನು ಮಣಿಸಿ ಸೇಡು ತೀರಿಸಿಕೊಳ್ಳುತ್ತಾರೆ. ಹೀಗಿದೆ ಚಿತ್ರದ ಕತೆ.
ಈ ಚಿತ್ರದಲ್ಲಿ ಧರ್ಮೇಂದ್ರಗೆ ಹೇಮಾಮಾಲಿನಿ ನಿಜ ಜೀವನದ ಜೋಡಿಯಾದಂತೆ, ಅಮಿತಾಬ್ ಗೆ ಜಯಾ ಬಚ್ಚನ್ ಕೂಡ ನಿಜ ಜೀವನದ ಸಂಗಾತಿಯಾದರು. ‘ಶೋಲೆ’ ಸಿನಿಮಾ ಶೂಟಿಂಗ್ ನಡೆದ ಸ್ಥಳ ರಾಮನಗರ ಈಗ ಪ್ರವಾಸಿ ಸ್ಥಳ ಕೂಡ ಆಗಿದೆ. ನಲವತ್ತು ವರ್ಷಗಳಿಂದ ಸಿನಿಮಾ ಅದೇ ಹೊಸತನ ಉಳಿಸಿಕೊಂಡಿದೆ. ಇಂದಿಗೂ ಈ ಚಿತ್ರ ಟಿವಿಯಲ್ಲಿ ಬಂದರೆ ಮನೆ ಮಂದಿಯೆಲ್ಲಾ ಅಲ್ಲಾಡದೆ ನೋಡುತ್ತಾರೆ. ಅದು ‘ಶೋಲೆ’ ಖದರ್.