‘ಭಜರಂಗಿ ಭಾಯಿಜಾನ್’ ಸದ್ದು ಇನ್ನೂ ಜೋರಾಗಿಯೇ ಇರುವುದರಿಂದ (ಬಿಡುಗಡೆಯಾಗಿ 25ನೇ ದಿನಕ್ಕೆ ದೇಶಿ ಮಾರುಕಟ್ಟೆಯಲ್ಲಿ 311 ಕೋಟಿ ಗಳಿಕೆ) ಅಭಿಮಾನಿಗಳು ಸಲ್ಮಾನ್ ಖಾನ್ ಹೆಸರು ಹೇಳಿಯಾರು. ಆದರೆ ಸಲ್ಲೂ ಪ್ರಕಾರ, ಆ ಪ್ರಶಸ್ತಿಗಿಂತ ಜನಪ್ರೀತಿಯೇ ದೊಡ್ಡ ಪ್ರಶಸ್ತಿ! ಹೌದು, ‘ನಿಮ್ಮ ಪಾತ್ರಕ್ಕೆ ಈ ಬಾರಿ ಪ್ರಶಸ್ತಿ ಲಭಿಸುವ ಸಾಧ್ಯತೆ ಇದೆಯಲ್ಲವೇ’ ಅಂತ ಕೇಳಿದರೆ ಅವರಿಂದ ಬಂದ ಜವಾಬು ಇದು. ಸಿನಿಮಾ ಇಷ್ಟ ಆಗಿ ನಾಲ್ಕೈದು ಸಲ ನೋಡುತ್ತಿರುವುದು ಸಲ್ಲೂಗೆ ಎಲ್ಲ ಪ್ರಶಸ್ತಿಗಿಂತ ಹೆಚ್ಚು ಬೆಲೆ ಬಾಳುವಂಥದ್ದು. ಚಿತ್ರತಂಡ ಹಾಗೂ ಪ್ರೇಕ್ಷಕ ಇವರಿಬ್ಬರ ಯೋಚನಾಲಹರಿ ಒಂದೇ ಆದಾಗ ಮಾತ್ರ ಈ ಬಗೆಯ ಬೃಹತ್ ಯಶಸ್ಸು ಪ್ರಾಪ್ತವಾಗುತ್ತದೆ ಎಂಬುದು ಅವರ ಅಂಬೋಣ.
ಎಲ್ಲರಿಗೂ ಗೊತ್ತಿರುವಂತೆ, ಬಾಲಿವುಡ್ನಲ್ಲಿ ‘ಭಜರಂಗಿ…’ ಸಿನಿಮಾದ ಆಫರ್ ಮೊದಲಿಗೆ ಹೋಗಿದ್ದು ಆಮಿರ್ ಖಾನ್ಗೆ. ಈ ಬಗ್ಗೆ ಸಲ್ಲೂ ಗಮನ ಸೆಳೆದಾಗ ಅವರ ಪ್ರತಿಕ್ರಿಯೆ; ‘ಹೌದು, ನನಗೂ ಆಮೀರ್ ಈ ಬಗ್ಗೆ ಹೇಳಿದರು. ಅದು ಅವರ ದೊಡ್ಡತನ’! ಅತಿಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟರ ಟಾಪ್ ಲೀಸ್ಟ್ನಲ್ಲಿ ತಮ್ಮ ಹೆಸರಿಲ್ಲದಿರುವುದಕ್ಕೆ ಸಲ್ಮಾನ್ಗೆ ಬೇಸರವೇನಿಲ್ಲ. ‘ಹೌದು, ನನ್ನನ್ನು ನಾನು ದೊಡ್ಡ ನಟ/ ಸ್ಟಾರ್ ಅಂತ ಪರಿಗಣಿಸಿಲ್ಲ. ಇದು ನನ್ನ ದೊಡ್ಡತನ’ ಎಂದು ದೊಡ್ಡದಾಗಿ ನಗುತ್ತಾರೆ!
ಮುಂದ? ಸಲ್ಲೂ ಈಗ ಸೂರಜ್ ಬರ್ಜಾತ್ಯ ನಿರ್ದೇಶನದ ‘ಪ್ರೇಮ್ ರತನ್ ಧನ್ ಪಾಯೋ’ ಗುಂಗಿನಲ್ಲಿದ್ದಾರೆ. ಆ ಚಿತ್ರದಲ್ಲಿ ‘ಭಜರಂಗಿ…’ಗಿಂತಲೂ ಜಾಸ್ತಿ ಭಾವನಾತ್ಮಕ ಸನ್ನಿವೇಶಗಳಿವೆಯಂತೆ. ಪ್ರೇಕ್ಷಕರು ‘ಭಜರಂಗಿ..’ಗಾಗಿ ಸುರಿಸಿದ್ದಕ್ಕಿಂತ ಜಾಸ್ತಿ ಕಣ್ಣೀರು ಸುರಿಸಬೇಕಾಗುತ್ತದಂತೆ. ಸಹೋದರ-ಸಹೋದರಿ ಸಂಬಂಧದ ಸುತ್ತ ಸುತ್ತಲಿರುವ ಚಿತ್ರದ ಬಗ್ಗೆ ಸಲ್ಲೂ ‘ಎಂಥ ಸಿನಿಮಾ ಕಣ್ರೀ ಅದು…’ ಎಂದು ಕೌತುಕ ಇಮ್ಮಡಿಗೊಳಿಸುತ್ತಾರೆ. ಜೊತೆಗೆ, ‘ಆ ಸಿನಿಮಾ ಬರೋತನಕ ಯಾರೂ ಅಳಬೇಡಿ… ಕಣ್ಣೀರು ಹಿಡಿದಿಡಿ’ ಎಂಬ ಹುಕುಂ ಹೊರಡಿಸುವುದನ್ನೂ ಮರೆಯುವುದಿಲ್ಲ.