ತಲೆ ಬಾಚೊಳ್ಳಿ… ಪೌಡರ್ ಹಾಕ್ಕೋಳ್ಳಿ… ಔಟ್ಲುಕ್ ಈಸ್ ವೆರಿ ವೆರಿ ಇಂಪಾರ್ಟೆಂಟ್…!!
‘ದುನಿಯಾ’ ಸಿನಿಮಾದ ಈ ಡೈಲಾಗ್ ಸಿನಿದುನಿಯಾದ ಮಂದಿಗೆ ಹೇಳಿ ಮಾಡಿಸಿದಂಥದ್ದು. ಎಲ್ಲೇ ಹೋದರೂ ಅವರು ಸಾರ್ವಜನಿಕರ ಕಣ್ಣಿಗೆ ಬೀಳುವುದರಿಂದ ಔಟ್ಲುಕ್ ಬಗ್ಗೆ ಗಮನಹರಿಸಬೇಕಾಗುತ್ತದೆ. ಸಿನಿಮಾದಲ್ಲಂತೂ ಕಾಸ್ಟ್ಯೂಮ್ೆ ಇನ್ನಿಲ್ಲದಷ್ಟು ಮಹತ್ವ. ಸ್ಟಾರ್ ಸಿನಿಮಾಗಳ ಫಸ್ಟ್ ಲುಕ್ನಲ್ಲಿ ಮೊದಲಿಗೆ ಚರ್ಚೆಗೀಡಾಗುವುದೇ ಅವರ ವೇಷಭೂಷಣ. ಕರೀನಾ ಕಪೂರ್ ಈಗ ತಮ್ಮ ವೇಷಭೂಷಣ ಬದಲಾಗುತ್ತಿರುವುದರ ಸಂಭ್ರಮದಲ್ಲಿದ್ದಾರೆ.
‘ಸತ್ಯಾಗ್ರಹ’, ‘ಗೋರಿ ತೇರೆ ಪ್ಯಾರ್ ಮೇ’, ‘ಸಿಂಘಂ ರಿಟರ್ನ್ಸ್’ ಮಾತ್ರವಲ್ಲ, ಈಚೆಗೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ ಮುನ್ನಡೆದಿರುವ ‘ಭಜರಂಗಿ ಭಾಯಿಜಾನ್’ ಚಿತ್ರದಲ್ಲೂ ಕರೀನಾ ದೇಸಿ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಹೆಚ್ಚಿನಂಶ ಸಲ್ವಾರ್ ಕಮೀಜ್ ಅವರ ಮುಖ್ಯ ಕಾಸ್ಟ್ಯೂಮ್ ಆಗಿತ್ತು. ‘ತಲಾಶ್’ನಲ್ಲಿ ಅಷ್ಟಿಷ್ಟು ಗ್ಲಾಮರ್ ಟಚ್ ಇದ್ದರೂ ಪ್ರತಿಕಾರಕ್ಕೆ ನಿಂತ ಭೂತವಾಗಿ ಭಯ ಹುಟ್ಟಿಸಿದ್ದರು ಕರೀನಾ. ಮುಂಬರುವ ‘ಉಡತಾ ಪಂಜಾಬ್’ ಚಿತ್ರದಲ್ಲೂ ಪಟೌಡಿ ಬೇಗಮ್ ಇದೇ ಬಗೆಯ ಗೆಟಪ್ನಲ್ಲಿರುತ್ತಾರಂತೆ. ಹಾಗಂತ, ಕರೀನಾ ಅವರನ್ನು ಗ್ಲಾಮರ್ ಕೋನದಲ್ಲಿ ನೋಡಲಿಚ್ಛಿಸುವ ಅಭಿಮಾನಿಗಳು ಬೇಸರ ಪಟ್ಟುಕೊಳ್ಳುವಂತಿಲ್ಲ. ಕಾರಣ, ಆರ್, ಬಾಲ್ಕಿ ನಿರ್ದೇಶನದ ‘ಕಿ ಆಂಡ್ ಕ’ ಚಿತ್ರದಲ್ಲಿ ಕರೀನಾ ಹಾಟ್ ಅವತಾರ ಎತ್ತಲಿದ್ದಾರೆ!
‘ಬಾಲ್ಕಿ ಚಿತ್ರದಲ್ಲಿ ನಾನು ಆಧುನಿಕ ಜಮಾನಾದ ಸ್ವತಂತ್ರ ಮಹಿಳೆ. ಈ ಅಂಶವನ್ನಾಧರಿಸಿಯೇ ಕಾಸ್ಟ್ಯೂಮ್ ಡಿಸೈನ್ ಮಾಡಲಾಗುತ್ತಿದೆ. ಕೇಶವಿನ್ಯಾಸವೂ ಬದಲಾಗಲಿದೆ. ದೊಡ್ಡ ಗ್ಯಾಪ್ನ ನಂತರ ಭಾರತೀಯ ಹುಡುಗಿಯ ವೇಷಭೂಷಣಕ್ಕೆ ಹೊರತಾಗಿ ಕಾಣಿಸಲಿದ್ದೇನೆ’ ಎಂದಿದ್ದಾರೆ ಕರೀನಾ. ಸೈಫ್ ಅವರನ್ನು ವರಿಸುವ ಮುನ್ನ ತಮ್ಮ ‘ಸೈಜ್ ಝೀರೊ’ ಲುಕ್ನಿಂದ ಗಮನ ಸೆಳೆದಿದ್ದರು ಕರೀನಾ. ಈಗಲೂ ಅದನ್ನು ನಿರೀಕ್ಷಿಸಬಹುದೇ? ಕರೀನಾ ಜವಾಬು-
‘ನಾನು ಸ್ಲಿಮ್ ಆಗುತ್ತಿರುವುದಂತೂ ಹೌದು, ಆದ್ರೆ ಸೈಜ್ ಝೀರೊ ನಿರೀಕ್ಷಿಸಬೇಡಿ’!!