‘ಥೇಟ್ ಹೀರೋಯಿನ್ ತರಹ ಇದ್ದೀಯಾ’ ಅಂತ ಯಾರಾದರೂ ಹೊಗಳಿದರೆ ಹುಡುಗಿಯರಿಗೆ ಮುಜುಗರವಾಗೋದು ಸಹಜ. ನಟನೆಯಲ್ಲಿ ಕಿಂಚಿತ್ ಆಸಕ್ತಿ ಇಲ್ಲದಿದ್ದರೂ, ಮನೆಗೆ ಬಂದು ಕನ್ನಡಿ ಮುಂದೆ ನಿಂತಾಗ ‘ಹೌದಾ, ನಾ ನಿಜಕ್ಕೂ ಹೀರೋಯಿನ್ ಹಾಗಿದ್ದೀನಾ’ ಅಂತ ಮನಸ್ಸು ಕೇಳಿಕೊಳ್ಳುತ್ತೆ! ಓದಿನತ್ತ ಧ್ಯಾನ ನೆಟ್ಟು, ಮಹತ್ತರ ಗುರಿಯ ಬೆಂಬತ್ತಿದವರಿಗೂ ಈ ವಿಚಾರ ಆಗಾಗ ಡಿಸ್ಟರ್ಬ್ ಮಾಡುವುದುಂಟು. ಪರಿಣಾಮ, ಬದುಕಿನ ಗತಿ-ಸ್ಥಿತಿ ಎರಡೂ ಬದಲಾಗುವ ಸಂಭವ. ದೀಕ್ಷಾ ಸೇಠ್ ಇಂಥ ಸಂಭವನೀಯತೆಯಲ್ಲಿ ಮಿಂದವರು. ಬಾಲ್ಯದಿಂದಲೂ ಈಜಿನತ್ತ ಮಹದಾಸಕ್ತಿ ಹೊಂದಿದ್ದ ದೀಕ್ಷಾ, ಈಗ ನಟಿ.
ಅಂಡರ್ವಾಟರ್ ಆರ್ಕಿಯಾಲಜಿಸ್ಟ್ ಆಗುವಾಸೆಗೆ ಒಡ್ಡಿಕೊಂಡವರು. ಇನ್ನಿಲ್ಲದಷ್ಟು ಈಜಿನ ಮೋಜು ಹೊಂದಿದ್ದ ಈ 25ರ ಚೆಲುವೆ, ತೆಲುಗು- ತಮಿಳು- ಹಿಂದಿ ಚಿತ್ರರಂಗಗಳಲ್ಲಿ ಅಭಿನಯ ಕೃಷಿಯಲ್ಲಿ ನಿರತರಾಗಿರುವವರು. ಅವರೀಗ ದರ್ಶನ್ ಅಭಿನಯದ ‘ಜಗ್ಗುದಾದಾ’ ಚಿತ್ರಕ್ಕೆ ನಾಯಕಿ!
ದೀಕ್ಷಾ ಹುಟ್ಟಿದ್ದು ದೆಹಲಿಯಲ್ಲಿ, ಬಾಲ್ಯದ ಬಂಗಾರದಂಥ ದಿನಗಳನ್ನು ಕಳೆದಿದ್ದು ನೇಪಾಳದ ಕಠ್ಮಂಡುವಿನಲ್ಲಿ. ಅಪ್ಪ ಐಟಿಸಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರಿಂದ ಕುಟುಂಬ ಮುಂಬೈ- ಚೆನ್ನೈ- ಕೋಲ್ಕೊತಾ, ರಾಜಸ್ಥಾನ ಎಂದೆಲ್ಲ ಸ್ಥಳಾಂತರಗೊಳ್ಳುತ್ತಲೇ ಇತ್ತು. ಇಂಥ ‘ಲೊಕೆಷನ್ ಶಿಫ್ಟ್’ಗೆ ಅನುಸಾರ ದೀಕ್ಷಾ ವಿಭಿನ್ನ ಜನ-ಜೀವನ, ಸಂಸ್ಕೃತಿ, ಪರಿಸರಗಳಿಗೆ ತೆರೆದುಕೊಂಡರು. ಶಾಲಾದಿನಗಳಲ್ಲಿ ಈಜು ಸ್ಪರ್ಧೆ ಇದ್ದಲ್ಲಿ ಈ ಪುಟಾಣಿ ಹಾಜರಿರುತ್ತಿದ್ದಳು. ಹಾಗೆ ಸ್ಪರ್ಧಿಸುತ್ತ ರಾಜ್ಯಮಟ್ಟದಲ್ಲೂ ಮಿಂಚಿ, ಹಲವು ಪದಕಗಳಿಗೆ ಕೊರಳೊಡ್ಡಿದ್ದಾಯ್ತು! ಕ್ರೀಡೆಯಲ್ಲಿ ಇನ್ನೂ ಎತ್ತರಕ್ಕೇರುವ ಹೊಂಗನಸು ಹೊಂದಿದ್ದ ದೀಕ್ಷಾಗೆ ಬಣ್ಣದ ಲೋಕಕ್ಕೆ ಎಳೆದುತಂದಿದ್ದು ಅವರ ಸೌಂದರ್ಯ ಸಿರಿ.
ಕಾಲೇಜು ಮೆಟ್ಟಿಲೇರುತ್ತಿದ್ದಂತೆಯೇ ಮಾಡೆಲಿಂಗ್ ಕೈಬೀಸಿ ಕರೆಯಿತು. ‘ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸಿ ‘ಫ್ರೆಶ್ ಫೇಸ್’ ಕಿರೀಟ ತೊಟ್ಟರು. ಅದೇ ಫ್ರೆಶ್ ಮನಸ್ಥಿತಿಯಲ್ಲಿ ಸಿನಿಲೋಕಕ್ಕೂ ಅಡಿಯಿಟ್ಟರು.
ತನ್ನದಲ್ಲದ ಕ್ಷೇತ್ರದಲ್ಲಿ ಮೊದಲಿಗೆ ಯಾರಾದರೂ ಸೋಲುಗಳನ್ನು ಎದುರಿಸಲು ಸನ್ನದ್ಧರಾಗಬೇಕಾಗುತ್ತದೆ. ದೀಕ್ಷಾ ಅಂತಹ ಸೋಲುಗಳನ್ನು ನಿಭಾಯಿಸಿ, ಈಗ ಕನ್ನಡ ‘ದರ್ಶನ’ದತ್ತ ಕಣ್ಣು ನೆಟ್ಟವರು. ಅಲ್ಲು ಅರ್ಜುನ್ (ವೇದಂ), ಗೋಪಿಚಂದ್ (ವಾಂಟೆಡ್), ರವಿತೇಜ (ನಿಪ್ಪು) ಹೀಗೆ ಆರಂಭದಲ್ಲಿ ಸ್ಟಾರ್ಗಳ ಜೊತೆ ತೆರೆ ಹಂಚಿಕೊಂಡರೂ ದೀಕ್ಷಾಗೆ ಸೋಲಿನ ನಿರಾಸೆಯೇ ಕಾದಿತ್ತು. ತಮಿಳಿನಲ್ಲಾದರೂ ಅದೃಷ್ಟವಿರಬಹುದೇ ಅಂದುಕೊಂಡು, ವಿಕ್ರಮ್ ನಾಯಕತ್ವದ ‘ರಾಜಪಟ್ಟೈ’ನಲ್ಲಿ ನಟಿಸಿದಾಗಲೂ ಫ್ಲಾಪ್ ಏಟು! ಅಂತೂ ಇಂತೂ ಗೆಲುವಿನ ಸಮಾಧಾನ ಕೊಟ್ಟಿದ್ದು ತೆಲುಗಿನ ‘ಊ ಕೊಳ್ಳತರ ಉಲಿಕ್ಕಿ ಪಡತರ’ (ನಂದಮೂರಿ ಬಾಲಕೃಷ್ಣ). ಈ ಸಕ್ಸಸ್ ಅನ್ನು ಪ್ರಭಾಸ್ ನಾಯಕತ್ವದ ‘ರೆಬೆಲ್’ನಲ್ಲಿ ಎನ್ಕ್ಯಾಷ್ ಮಾಡಿಕೊಂಡಿದ್ದಾಯ್ತು. ದೀಕ್ಷಾ ಬಾಲಿವುಡ್ ಮಂದಿಯ ಕಣ್ಣಿಗೆ ಬಿದ್ದರು. ಅರ್ವನ್ ಜೈನ್ ಹೀರೋಗಿರಿಯ ‘ಲೇಕರ್ ಹಮ್ ದೀವಾನಾ ದಿಲ್’ ಚಿತ್ರದಲ್ಲಿ ಚಾನ್ಸ್. ಈ ಚಿತ್ರ ಗೆದ್ದುಬಿಟ್ಟಿದ್ದರೆ ದೀಕ್ಷಾ ಕನ್ನಡಕ್ಕೆ ಖಂಡಿತ ಬರುತ್ತಿರಲಿಲ್ಲವೇನೋ!
ದರ್ಶನ್ ಅವರು ಇಲ್ಲಿ ‘ಸ್ಯಾಂಡಲ್ವುಡ್ನ ಸಲ್ಮಾನ್’ ಎನಿಸಿರುವುದರಿಂದ ಒಂದು ಕೈ ನೋಡಿಕೊಳ್ಳೋಣ ಎಂದು ತೀರ್ವನಿಸಿರುವಂತಿದೆ. ಬಿ.ಕಾಂ. ಓದಿಕೊಂಡಿರುವ ದೀಕ್ಷಾ ಲೆಕ್ಕಾಚಾರ ಮೆಚ್ಚಬೇಕಾದ್ದೇ!
‘ಜಗ್ಗುದಾದಾ’ ಚಿತ್ರದಲ್ಲಿ ದೀಕ್ಷಾ ಸೇಠ್ ಅವರದು ಪಕ್ಕದ್ಮನೆ ಹುಡುಗಿ ಪಾತ್ರವಂತೆ. ‘ನಾಮಕಾವಸ್ಥೆಯ ಪಾತ್ರ ಅಲ್ಲ ಇದು; ಹೀರೋಗೆ ಸರಿಸಮಾನವಾಗಿ ಸಿನಿಮಾಪೂರ್ತಿ ಕಾಣಿಸಿಕೊಳ್ಳುತ್ತೇನೆ. ನಗರ ಪ್ರದೇಶದಲ್ಲಿರುವ ಉದ್ಯೋಗಸ್ಥ ಹುಡುಗಿಯಾಗಿರುತ್ತೇನೆ’ ಎನ್ನುತ್ತ ಆ ಬಗೆಗಿನ ವಿವರ ಹರವಿಡುತ್ತಾರವರು. ಚಿತ್ರದ ಬೇಸಿಕ್ ಸೆಟಪ್ ಹಾಗೂ ಕಾಮಿಡಿ ಪಾರ್ಟ್ ದೀಕ್ಷಾ ಮನಗೆದ್ದಿದೆ. ತೆಲುಗಿನ ಸ್ಟಾರ್ಗಳ ಜೊತೆ ಡ್ಯೂಯೆಟ್ ಹಾಡಿರುವ ಅವರಿಗೆ ದರ್ಶನ್ ಚಿತ್ರದ ಮೂಲಕ ಇಲ್ಲಿ ಲಾಂಚ್ ಆಗುತ್ತಿರುವುದು ಹಿಗ್ಗಿನ ಸಂಗತಿ. ಈ ಹಿಂದೆಯೂ ಕನ್ನಡದ ನಿರ್ದೇಶಕರು ದೀಕ್ಷಾ ಅವರನ್ನರಸಿ, ಆಫರ್ ನೀಡಿದ್ದರು. ಯಾವುದಾದರೊಂದು ಕಾರಣದಿಂದ ಮಿಸ್ ಆಗುತ್ತಿತ್ತು. ಈ ಬಾರಿ ಮೀನು ಗಾಳಕ್ಕೆ ಬಿದ್ದುಬಿಟ್ಟಿದೆ!!
ಪರಭಾಷಾ ನಟಿಯರು ತೋರುವ ಗತ್ತು ಗೈರತ್ತಿನ ಗುಣವನ್ನು ದೀಕ್ಷಾ ಸಹ ಅನುಸರಿಸುತ್ತಾರೆ! ರೂಪದರ್ಶಿಯಾಗಿ ‘ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ ‘ನಾನು ಮಾಡೆಲಿಂಗ್ ಮಾಡಿಯೇ ಇಲ್ಲ’ ಎನ್ನುತ್ತಾರವರು ಬಿಂದಾಸ್ ಆಗಿ!! ನಟಿಯಾಗಿ ಎಲ್ಲ ತರಹದ ಪಾತ್ರಗಳಿಗೆ ಮನಸ್ಸು ತೆರೆದುಕೊಂಡಿದ್ದರೂ ಆಕ್ಷನ್- ರೋಮಾನ್ಸ್ ಜಾನರ್ಗಳತ್ತ ಹೆಚ್ಚಿನ ಒಲವು. ಈಗಲೂ ಉದಯೋನ್ಮುಖ ನಟಿ ಎಂದೇ ಗುರುತಿಸಿಕೊಳ್ಳುತ್ತಿರುವ ದೀಕ್ಷಾಗೆ ಎಲ್ಲ ಭಾಷೆಗಳಲ್ಲೂ ನಟಿಸುವ ಇರಾದೆ, ಸಾಧ್ಯವಾದಷ್ಟನ್ನು ಕಲಿಯುವ ಹುಮ್ಮಸ್ಸು. ಕಲಾವಿದೆಯಾಗಿ ‘ಮಾನವೀಯ ಭಾವನೆಗಳು ಎಲ್ಲೆಡೆ ಒಂದೇ, ನಟನೆಯೂ ಒಂದೇ’ ಎಂಬ ನಂಬಿಕೆ. ಹಿಂದಿ, ಇಂಗ್ಲಿಷ್, ನೇಪಾಳಿ, ತೆಲುಗು, ಪಂಜಾಬಿ, ಬೆಂಗಾಲಿ ಭಾಷೆ ಬಲ್ಲ ದೀಕ್ಷಾಗೆ ‘ಇನ್ನು ಕನ್ನಡವನ್ನೂ ಕಲಿಯಬಹುದಲ್ಲ…’ ಎನ್ನುವ ಕಾತರ.
ಈಜಿನೆಡೆ ದೀಕ್ಷಾ ಸೆಳೆತ ಇನ್ನೂ ಜೀವಂತವಾಗಿದೆ. ಬಿಡುವು ಸಿಕ್ಕಾಗಲೆಲ್ಲ ಗೆಳತಿಯರ ಜೊತೆ ಡೈವಿಂಗ್ಗೆ ಹೋಗುತ್ತಾರಂತೆ! ಇನ್ನೊಂದು ವಿಶೇಷ ಅಂದರೆ, ದೀಕ್ಷಾಗೆ ಕವಿತೆ, ಸಣ್ಣಕಥೆ ಬರೆಯುವ ಹವ್ಯಾಸವೂ ಉಂಟು. ಅವನ್ನೆಲ್ಲ ಒಟ್ಟುಗೂಡಿಸಿ ಪುಸ್ತಕ ಹೊರತರುತ್ತಾರಾ? ಈ ಪ್ರಶ್ನೆಗೆ ಅವರ ಉತ್ತರ, ‘ಊಹ್ಞೂಂ. ನನಗಾಗಿ, ನನ್ನ ಸಂತೋಷಕ್ಕಾಗಿ ನಾನು ಬರೆಯುತ್ತೇನೆ’! ಕಥೆ ಬರೆಯುತ್ತಾರೆಂದ ಮೇಲೆ ಭವಿಷ್ಯದಲ್ಲಿ ನಿರ್ದೇಶನದಲ್ಲೂ ಆಸಕ್ತಿ ಇದ್ದಿರಬೇಕಲ್ಲ- ಅಂತ ಕೇಳಿದರೆ, ಆಗಲೂ ‘ನೋ’ ಉತ್ತರ. ಇನ್ನೂ ಐದಾರು ವರ್ಷಗಳ ನಂತರ ಆ ನೆಲೆಯಲ್ಲಿ ಯೋಚಿಸುತ್ತಾರಂತೆ.
ಬಾಲಿವುಡ್ ಅವಕಾಶಗಳತ್ತ ಆಸೆ ನೆಟ್ಟು ಮುಂಬೈನಲ್ಲಿ ವಾಸವಾಗಿದ್ದಾರೆ ದೀಕ್ಷಾ, ಅದೂ ಏಕಾಂಗಿಯಾಗಿ. ಹೆತ್ತವರು ನೆಲೆಸಿರುವುದು ಕೋಲ್ಕೊತಾದಲ್ಲಿ. ‘ನನಗೊಬ್ಬ ಅಕ್ಕ ಇದ್ದಾಳೆ. ಆಕೆಗೆ ಮದುವೆಯಾಗಿದೆ. ಸ್ವೀಟ್, ಕ್ಯೂಟ್ ಫ್ಯಾಮಿಲಿ ನಮ್ಮದು’ ಎನ್ನುವ ದೀಕ್ಷಾಗೆ ಕುಟುಂಬವೆಲ್ಲ ಕುಳಿತು ನೋಡಬಲ್ಲಂಥ ಸಿನಿಮಾಗಳ ಮೂಲಕ ನೆನಪುಳಿಯುವ ಮಹದಾಸೆ!!