ಮಾಡೆಲಿಂಗ್‌ನಿಂದ ಸಿನಿ ಜಗತ್ತಿಗೆ ಜಿಗಿದ ಬೊಗಸೆ ಕಂಗಳ ಚೆಲುವೆ ಟೀನಾ ಪೊನ್ನಪ್ಪ ಅವರಿಗೆ ಸಿಕ್ಕ ಅವಕಾಶಗಳನ್ನೆಲ್ಲಾ ಅಪ್ಪಿಕೊಂಡು ಮುದ್ದಿಸುವ ಲಾಲಸೆ ಇಲ್ಲ. ತಮ್ಮ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚುವಂತಹ, ಪ್ರೇಕ್ಷಕರು ಗುರ್ತಿಸುವಂತಹ ಪಾತ್ರಗಳಿಗೆ ಬಣ್ಣ ಹಚ್ಚಬೇಕು ಎನ್ನುವುದು ಇವರ ಸದ್ಯದ ನಿಲುವು.
ಟೀನಾ ಅಭಿನಯದ ‘ಶ್ರೀಚಕ್ರಂ’ ಚಿತ್ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಆರವ್ ಸೂರ್ಯ ಎಂಬ ಹೊಸ ನಾಯಕ ನಟನ ಜೊತೆ ಟೀನಾ ತೆರೆ ಹಂಚಿಕೊಂಡಿದ್ದಾರೆ. ಜಿಜಿ (ಗೋವಿಂದೇ ಗೌಡ) ಈ ಚಿತ್ರದ ನಿರ್ದೇಶಕರು.
‘ಶ್ರೀ ಚಕ್ರಂ ಕೌಟುಂಬಿಕ ಮನರಂಜನಾ ಸಿನಿಮಾ. ಗಟ್ಟಿಕಥೆ, ಕಚಗುಳಿಯಿಡುವ ಹಾಸ್ಯ, ಮೈನವಿರೇಳಿಸುವ ಸಾಹಸ ದೃಶ್ಯಗಳು ಹಾಗೆಯೇ, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಸಸ್ಪೆನ್ಸ್ ಸನ್ನಿವೇಶಗಳನ್ನೆಲ್ಲಾ ಒಂದೇ ತಟ್ಟೆಯಲ್ಲಿಟ್ಟು ಪ್ರೇಕ್ಷಕರಿಗೆ ಉಣಬಡಿಸುವ ಸಿನಿಮಾ ಇದು. ಈ ಚಿತ್ರದಲ್ಲಿ ನಾನು ನಳಿನಿ ಎನ್ನುವ ಪಾತ್ರ ನಿರ್ವಹಿಸಿದ್ದೇನೆ. ಶ್ರೀಮಂತ ಮನೆತನದ ಹುಡುಗಿಯಾದರೂ ತುಂಬ ಸರಳ ಸ್ವಭಾವದವಳು. ಇತರರಿಗೆ ಸಹಾಯ ಮಾಡುವ ಮನಸ್ಸಿನವಳು. ಮಕ್ಕಳೆಂದರೆ ಈಕೆಗೆ ವಿಶೇಷ ಕಾಳಜಿ.
ಚಿತ್ರದ ಬಹುತೇಕ ಚಿತ್ರೀಕರಣ ಉತ್ತರ ಕರ್ನಾಟಕದಲ್ಲಿ ಆಗಿದೆ. ‘ಶ್ರೀ ಚಕ್ರಂ’ ಚಿತ್ರಕಥೆಯನ್ನು ಒಂದು ಸಾಲಿನಲ್ಲಿ ಹೇಳಬೇಕೆಂದರೆ ಒಂದು ಸೊಗಸಾದ ರೋಡ್ ಟ್ರಿಪ್ ಇದ್ದಂತೆ. ಸಿನಿಮಾದುದ್ದಕ್ಕೂ ಒಂದು ಜರ್ನಿ ಇದೆ’ ಎಂದು ತಮ್ಮ ಪಾತ್ರ ಹಾಗೂ ಸಿನಿಮಾದ ಬಗ್ಗೆ ಹೇಳಿಕೊಳ್ಳುತ್ತಾರೆ ಟೀನಾ.
ಹೊಸ ನಾಯಕನಟನೊಂದಿಗೆ ನಟಿಸಿದ ಅನುಭವ ಹೇಗಿತ್ತು ಅಂದರೆ ಟೀನಾ ಉತ್ತರಿಸುವುದು ಹೀಗೆ: ‘ಆರವ್ ಸೂರ್ಯ ವೈಜಾಗ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದುಕೊಂಡು ಬಂದವರು. ಇದು ಅವರ ಮೊದಲ ಚಿತ್ರವಾದರೂ ಅವರ ನಟನಾ ಕೌಶಲ ಚೆನ್ನಾಗಿದೆ. ಸಾಹಸ ದೃಶ್ಯವಾದರೂ ಸರಿ, ಭಾವನಾತ್ಮಕ ಸನ್ನಿವೇಶವಾದರೂ ಸರಿ ಎಲ್ಲ ಸನ್ನಿವೇಶಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಸಿನಿಮಾ ಬಗ್ಗೆ ಹೆಚ್ಚು ಗೀಳು ಬೆಳೆಸಿಕೊಂಡ ಹುಡುಗ ಅವರು’ ಎಂದು ಸಹನಟನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ಟೀನಾ.
ಫಿಟ್‌ನೆಸ್ ಗುಟ್ಟು
172 ಜಾಹೀರಾತುಗಳು, 250 ಬಾರಿ ರ್‌್ಯಾಂಪ್ ವಾಕ್ ಮಾಡಿರುವ ಟೀನಾ ಮೊದಲಿನಿಂದಲೂ ತಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸಿದವರು. ನಿಯಮಿತ ವ್ಯಾಯಾಮ ಹಾಗೂ ಡಯಟ್ ಮಂತ್ರ ಇವರ ದೇಹಾಕಾರವನ್ನು ಆಕರ್ಷಕವಾಗಿ ಇಟ್ಟಿದೆ.
‘ನಾನು ಏನು ತಿಂದರೂ, ಎಷ್ಟು ತಿಂದರೂ ಬೇಗ ದಪ್ಪ ಆಗುವುದಿಲ್ಲ. ಕಾಲೇಜು ದಿನಗಳಲ್ಲಿ ಅಥ್ಲೀಟ್ ಆಗಿದ್ದೆ. ಓಟ, ಉದ್ದ ಜಿಗಿತ, ಥ್ರೋಬಾಲ್, ಬಾಸ್ಕೆಟ್ ಬಾಲ್ ಆಡುತ್ತಿದ್ದೆ. ಚಿಕ್ಕ ವಯಸ್ಸಿನಲ್ಲೇ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರಿಂದ ನನ್ನ ದೇಹ ಮೊದಲಿನಿಂದಲೂ ಫಿಟ್ ಆಗಿತ್ತು.
ಮಾಡೆಲಿಂಗ್, ಸಿನಿಮಾಕ್ಕೆ ಬಂದ ನಂತರವೂ ಈ ಅಭ್ಯಾಸ ಮುಂದುವರಿಯಿತು. ವಾರಕ್ಕೆ ಮೂರು ದಿನ ಜಿಮ್‌ಗೆ ಹೋಗುತ್ತೇನೆ. ಕಾರ್ಡಿಯೊ, ಸ್ಕಿಪ್ಪಿಂಗ್ ಮಾಡುತ್ತೇನೆ. ರನ್ನಿಂಗ್, ಜಾಗಿಂಗ್ ಅಂತೂ ನಿರಂತರವಾಗಿ ಇದ್ದೇ ಇರುತ್ತದೆ. ಇವೆಲ್ಲವೂ ನನ್ನನ್ನು ಫಿಟ್ ಆಗಿ ಇರಿಸಿದೆ’ ಎಂದು ತಮ್ಮ ವರ್ಕೌಟ್ ಕುರಿತು ಹೇಳಿಕೊಳ್ಳುತ್ತಾರೆ ಟೀನಾ.
ಕೊಡಗಿನ ಹುಡುಗಿಯಾದರೂ ಟೀನಾಗೆ ಟೀ ಅಂದರೆ ಪಂಚಪ್ರಾಣ. ಅನ್ನ ಮತ್ತು ಸಕ್ಕರೆಯಿಂದ ಇವರು ಸದಾ ದೂರ. ‘ಬೆಳಿಗ್ಗೆ ಎದ್ದು ಲಘು ವ್ಯಾಯಾಮ ಮಾಡಿದ ನಂತರ ಹಣ್ಣು ಅಥವಾ ಜ್ಯೂಸ್ ಕುಡಿಯುತ್ತೇನೆ. ಸ್ಯಾಂಡ್‌ವಿಚ್ ತುಂಬ ಇಷ್ಟ. ಮನೆಯಲ್ಲೇ ಮಾಡುವ ದಕ್ಷಿಣ ಭಾರತೀಯ ತಿಂಡಿಗಳೆಲ್ಲವನ್ನೂ ತಿನ್ನುತ್ತೇನೆ. ಮಧ್ಯಾಹ್ನ ಚಪಾತಿ, ರಾತ್ರಿ ಊಟಕ್ಕೆ ರೈಸ್ ರೋಟಿ, ಫುಲ್ಕಾ, ಸಲಾಡ್, ರಾಗಿ ರೊಟ್ಟಿ ಸೇವಿಸುತ್ತೇನೆ. ಸೀ ಫುಡ್ ಅಂದರೆ ತುಂಬ ಇಷ್ಟ. ಪ್ರತಿ ಭಾನುವಾರ ಡಯಟ್ ಮರೆತು ಸ್ನೇಹಿತರು, ನೆಂಟರ ಜೊತೆ ಕುಳಿತು ಚೆನ್ನಾಗಿ ತಿನ್ನುತ್ತೇನೆ’ ಎನ್ನುತ್ತಾರೆ ಅವರು.
ಪ್ರಾಣಿ–ಪಕ್ಷಿಗಳೇ ಗೆಳೆಯರು
ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ಹೊರಗೆಲ್ಲೂ ಹೋಗಲು ಇಷ್ಟಪಡದ ಟೀನಾ, ಆ ಸಮಯವನ್ನು ಪ್ರಾಣಿಗಳೊಂದಿಗೆ ಕಳೆಯಲು ಇಷ್ಟಪಡುತ್ತಾರಂತೆ. ‘ನಾನು ಹೆಚ್ಚಾಗಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಪ್ರಾಣಿ–ಪಕ್ಷಿಗಳನ್ನು ಸಾಕುವುದು ನನ್ನ ಹವ್ಯಾಸ. ನಮ್ಮ ಮನೆಯನ್ನು ಮಿನಿ ಪೆಟ್ ಪ್ಲಾನೆಟ್ ಎನ್ನಬಹುದು. ಮನೆಯಲ್ಲಿ ಒಂದು ಪರ್ಷಿಯನ್ ಕ್ಯಾಟ್, ಆಫ್ರಿಕನ್ ಲವ್ ಬರ್ಡ್ಸ್, ಆಸ್ಟ್ರೇಲಿಯನ್ ಪಿಂಚ್ ಬರ್ಡ್ಸ್, ಎರಡು ನಾಯಿಗಳಿವೆ. ಬಿಡುವಿನ ಸಮಯವನ್ನೆಲ್ಲಾ ಇವುಗಳೊಂದಿಗೆ ಕಳೆಯುತ್ತೇನೆ. ಅವುಗಳ ಜೊತೆಗಿನ ಒಡನಾಟ ನನಗೆ ತುಂಬ ಖುಷಿ ಕೊಡುತ್ತದೆ’ ಎನ್ನುತ್ತಾರೆ ಟೀನಾ.
ಮಿನುಗು ತಾರೆ ಕಲ್ಪನಾ ಅಭಿನಯಿಸಿದ ರೀತಿಯ ಪಾತ್ರಗಳಲ್ಲಿ ನಟಿಸುವ ಆಸೆ ಇದೆ ಎನ್ನುವ ಟೀನಾಗೆ ಒಂದು ಸಿನಿಮಾದಲ್ಲಿ ಕೇವಲ ಷೋ ಪೀಸ್ ಅಂತೆ ಕಾಣಿಸಿಕೊಳ್ಳುವುದು ಎಳ್ಳಷ್ಟೂ ಇಷ್ಟವಿಲ್ಲವಂತೆ. ‘ನನ್ನ ಅಭಿನಯ ಸಾಮರ್ಥ್ಯಕ್ಕೆ ಸವಾಲೊಡ್ಡುವ ಪಾತ್ರಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳಲು ಇಷ್ಟಪಡುತ್ತೇನೆ ’ ಎನ್ನುವ ಟೀನಾ ಕೈಯಲ್ಲಿ ಈಗ ಒಂದು ತೆಲುಗು ಮತ್ತೊಂದು ಕನ್ನಡ ಚಿತ್ರವಿದೆ.