ನಿರ್ದೇಶಕ ಆರ್. ರಘುರಾಜ್ ಅವರ ಐದನೇ ಕನ್ನಡ ಚಿತ್ರ ‘ಸುಪಾರಿ ಸೂರ್ಯ’. ಚಿತ್ರೀಕರಣ ಮುಗಿಸಿಕೊಂಡು ಚಿತ್ರವನ್ನು ತೆರೆಕಾಣಿಸುವ ಸಿದ್ಧತೆ ನಡೆಸುತ್ತಿರುವ ಚಿತ್ರತಂಡ, ಹಾಡುಗಳ ಸಿ.ಡಿ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದೆ. ಗೀತೆಗಳ ಅನಾವರಣ ಕಾರ್ಯಕ್ರಮ ಚಿತ್ರತಂಡದ ಸದಸ್ಯರು ಪರಸ್ಪರ ಧನ್ಯವಾದ ಹೇಳಿಕೊಳ್ಳಲು ಹಾಗೂ ಡಬ್ಬಿಂಗ್ ವಿರುದ್ಧ ತಮ್ಮ ಪ್ರತಿಭಟನೆ ದಾಖಲಿಸಲು ವೇದಿಕೆಯಾಗಿ ಬದಲಾಯಿತು.
‘ಸುಪಾರಿ ಸೂರ್ಯ’ ಚಿತ್ರದಲ್ಲಿ ಸಂಪೂರ್ಣವಾಗಿ ಹೊಸ ರೀತಿಯ ಪ್ರಯತ್ನ ಮಾಡಿದ್ದೇನೆ ಎನ್ನುವುದು ನಿರ್ದೇಶಕ ರಘುರಾಜ್ ಅವರ ಆತ್ಮವಿಶ್ವಾಸದ ಮಾತು. ಈ ಆತ್ಮವಿಶ್ವಾಸಕ್ಕೆ ಉದಾಹರಣೆಯಾಗಿ ಅವರು ಚಿತ್ರದ ಅಡಿ ಟಿಪ್ಪಣಿ ‘ನೋ ಸೆಕೆಂಡ್ ಶಾಟ್’ ಎನ್ನುವುದನ್ನು ಒತ್ತಿ ಹೇಳುತ್ತಾರೆ. ಈ ಅಡಿ ಟಿಪ್ಪಣಿ ನಿರ್ಮಾಪಕ ಚಂದ್ರು ಅವರಿಗೂ ಖುಷಿ ಕೊಟ್ಟಿದೆ.
ರೌಡಿಯೊಬ್ಬನ ಜೀವನವನ್ನು ಆತನ ಕೌಟುಂಬಿಕ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಪ್ರಯತ್ನ ‘ಸುಪಾರಿ ಸೂರ್ಯ’ ಚಿತ್ರದಲ್ಲಿ ಇದೆ. ನಿರ್ದೇಶಕರ ಪ್ರಕಾರ ‘ಇದೊಂದು ಮಾಸ್ ಎಂಟರ್‌ಟೇನರ್’.
ಹೊಸ ನಾಯಕ ವಿರಾಟ್ ಮತ್ತು ನಾಯಕಿ ಮಧುರಿಮಾ ಬ್ಯಾನರ್ಜಿ ಎಲ್ಲರಿಗೂ ಧನ್ಯವಾದ ತಿಳಿಸುವುದಕ್ಕೆ ತಮ್ಮ ಮಾತುಗಳನ್ನು ಸೀಮಿತಗೊಳಿಸಿದರು. ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಹಾಗೂ ಹಾಡುಗಳ ಹಕ್ಕು ಪಡೆದ ‘ಲಹರಿ’ ಸಂಸ್ಥೆಯ ವೇಲು, ನಿರ್ಮಾಪಕ ಸಾ.ರಾ. ಗೋವಿಂದ್ ಡಬ್ಬಿಂಗ್‌ಗೆ ತಮ್ಮ ವಿರೋಧ ವ್ಯಕ್ತಪಡಿಸಿದರು.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್ ಹಾಗೂ ವಿನಯ್ ಹಾಡುಗಳನ್ನು ಬರೆದಿದ್ದಾರೆ. ಟಿಪ್ಪು, ಅಪೂರ್ವ ಶ್ರೀಧರ್, ನವೀನ್ ಸಜ್ಜು, ಶಶಾಂಕ್ ಶೇಷಗಿರಿ, ಸಂಗೀತ ರವೀಂದ್ರ, ಚೇತನ್ ನಾಯಕ್, ಸಂತೋಷ್ ವೆಂಕಿ ಹಾಡಿದ್ದಾರೆ.
ಹಾಡುಗಳ ಜೊತೆಗೆ ಒಂದು ಟ್ರೇಲರ್ ಕೂಡ ಬಿಡುಗಡೆ ಮಾಡಲಾಯಿತು. ವಿಶೇಷವೆಂದರೆ ಆ ಟ್ರೇಲರ್ ಸಂಪೂರ್ಣ ಹಿಮ್ಮುಖ ಚಲನೆಯಲ್ಲಿ ನಿರೂಪಣೆಯಾಗಿದೆ. ಅಂದರೆ ಮುಂದಕ್ಕೆ ಓಡುತ್ತಿರುವ ವ್ಯಕ್ತಿ ಹಿಮ್ಮುಖವಾಗಿ ಓಡುತ್ತಿರುವ ಭಾವ ನೀಡುವ ಟ್ರೇಲರ್ ಅದು. ಈ ರೀತಿಯ ಟ್ರೇಲರ್ ಬಿಡುಗಡೆ ಮಾಡುತ್ತಿರುವುದು ಭಾರತದಲ್ಲಿ ಇದೇ ಮೊದಲು ಎಂಬುದು ನಿರ್ದೇಶಕರ ಹೇಳಿಕೆ. ನಿರ್ಮಾಪಕ ಚಾಮುಂಡಿ ಚಂದ್ರು, ನಟ ಕರಿಸುಬ್ಬು, ಸಂಸದ ಪಿ.ಸಿ. ಮೋಹನ್ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.