ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಚಿತ್ರೋದ್ಯಮಿ ವರುಣ್ ಮಣಿಯನ್ ಜೊತೆಗಿನ ತಮ್ಮ ನಿಶ್ಚಿತಾರ್ಥ ಮುರಿದು ಬಿದ್ದ ಬಳಿಕ ‘ಲಿವ್ ಇನ್ ಟುಗೆದರ್’ ಸಂಬಂಧವೇ ಬೆಟರ್ ಎಂದಿದ್ದರು. ಇದೀಗ ಅವರು ತಮ್ಮ ಹಳೆಯ ಗೆಣೆಕಾರ ‘ಬಾಹುಬಲಿ’ ಖ್ಯಾತಿಯ ರಾಣಾ ಜೊತೆ ಮತ್ತೆ ಒಂದುಗೂಡಿದ್ದಾರೆಂಬ ಗುಸುಗುಸು ಕೇಳಿ ಬರುತ್ತಿದೆ.
ವರುಣ್ ಮಣಿಯನ್ ಜೊತೆಗಿನ ನಿಶ್ಚಿತಾರ್ಥಕ್ಕೂ ಮುನ್ನವೇ ರಾಣಾ ದಗ್ಗುಬಾಟಿ ಜೊತೆ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತ್ರಿಷಾ ಕೃಷ್ಣನ್ ದಿಢೀರನೇ ವರುಣ್ ಮಣಿಯನ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಾಗ ಚಿತ್ರರಂಗದ ಮಂದಿ ಹುಬ್ಬೇರಿಸಿದ್ದರು. ರಾಣಾ ಹಾಗೂ ತ್ರಿಷಾ ನಡುವಿನ ಬಿರುಕಿಗೆ ರಾಣಾ ಜೊತೆ ಮತ್ತೊಬ್ಬ ನಟಿ ಅತ್ಮೀಯವಾಗಿದ್ದೇ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು.
ಈಗ ವರುಣ್ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದಿರುವ ಕಾರಣ ತ್ರಿಷಾ ಒಂಟಿಯಾಗಿದ್ದು, ರಾಣಾ ದಗ್ಗುಬಾಟಿ ಕೂಡಾ ಆ ನಟಿಯೊಂದಿಗಿನ ಒಡನಾಟ ತೊರೆದಿದ್ದಾರೆಂದು ಹೇಳಲಾಗಿದೆ. ಒಂಟಿಯಾಗಿರುವ ರಾಣಾ ಹಾಗೂ ತ್ರಿಷಾ ಈಗ ಮತ್ತೆ ಒಂದುಗೂಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ದುಬೈನಲ್ಲಿ ಇತ್ತೀಚೆಗೆ ನಡೆದ ‘ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಆವಾರ್ಡ್ಸ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಬ್ಬರೂ ಪಾರ್ಟಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.