ಹೊಸದಿಲ್ಲಿ: ಇತ್ತೀಚೆಗಷ್ಟೆ ವಿಂಬಲ್ಡನ್ ಡಬ್ಬಲ್ಸ್ ಗೆದ್ದ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಸಾನಿಯಾ ದೇಶದ ಪ್ರತಿಷ್ಠಿತ ಕ್ರೀಡಾ ಪುರಸ್ಕಾರವಾದ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಭಾಜನರಾಗುತ್ತಿರುವ ಮೊದಲ ಮಹಿಳಾ ಹಾಗೂ ಎರಡನೇ ಟೆನಿಸ್ ಆಟಗಾರ್ತಿ. 1996-97ರಲ್ಲಿ ಲಿಯಾಂಡರ್ ಪೇಸ್‌ಗೆ ಈ ಪ್ರಶಸ್ತಿ ಸಿಕ್ಕಿತ್ತು.
ಈ ತಿಂಗಳ ಆದಿಯಲ್ಲಿಯೇ ಕ್ರೀಡಾ ಸಚಿವಾಲಯ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಹೆಸರನ್ನು ಶಿಫಾರಸು ಮಾಡಿತ್ತಾದರೂ, ಅಂತಿಮ ನಿರ್ಧಾರ ಪ್ರಶಸ್ತಿ ಸಮಿತಿಗೆ ಸೇರಿದ್ದು, ಎಂದು ಸ್ಪಷ್ಟಪಡಿಸಿತ್ತು.
ಸ್ವಿಡ್ಜರ್ಲ್ಯಾಂಡ್‌ನ ಮಾರ್ಟಿನಾ ಹಿಂಗಿಸ್ ಜತೆ ಸಾನಿಯಾ ಇದೇ ಮೊದಲ ಬಾರಿಗೆ ವಿಂಬಲ್ಡನ್ ಡಬ್ಬಲ್ಸ್ ಪ್ರಶಸ್ತಿ ಪಡೆದಿದ್ದು, ಅದಕ್ಕೂ ಮುನ್ನ ಅನೇಕ ಚಾಂಪಿಯನ್‌ಶಿಪ್‌ಗಳನ್ನು ಗೆದ್ದು, ವಿಶ್ವದ ನಂ.ಒನ್ ಆಟಗಾರ್ತಿಯಾಗಿದ್ದರು.
ಸಾನಿಯಾ ಮೂರು ಬಾರಿ ಮಿಶ್ರ ಡಬ್ಬಲ್ಸ್ ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದಿದ್ದಾರೆ. ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಮತ್ತು ಡಿಸ್ಕಸ್ ಆಟಗಾರ ವಿಕಾಸ್ ಗೌಡ ಅವರು ಈ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದರು.