ಮನೋರಂಜನೆ

ಪಾಸ್‌ಪೋರ್ಟ್, ವೀಸಾ ಇಲ್ಲದೆ ಸಲ್ಮಾನ್ ಭೇಟಿಗೆ ಬಂದ ಪಾಕ್ ಮಹಿಳೆ !

Pinterest LinkedIn Tumblr

salman_khan

ಅಮೃತಸರ: ಪಾಸ್‌ಪೋರ್ಟ್, ವೀಸಾ ಸೇರಿ ಯಾವುದೇ ಪ್ರಯಾಣ ದಾಖಲೆಗಳಿಲ್ಲದೇ, ಸಂಝೋತಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪಾಕಿಸ್ತಾನಿ ಮಹಿಳೆಯನ್ನು ರೈಲ್ವೆ ಪೊಲೀಸರು ಜಲಂಧರ್‌ನಲ್ಲಿ ಬಂಧಿಸಿದ್ದಾರೆ. ಈಕೆ ಭಾರತಕ್ಕೆ ಬಂದಿದ್ದಕ್ಕೆ ವಿಭಿನ್ನ ಕಾರಣಗಳನ್ನು ನೀಡುತ್ತಿದ್ದು, ಮೊನ್ನೆಯಷ್ಟೇ ಪಂಜಾಬ್‌ನ ಗುರುದಾಸ್‌ಪುರ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚು ಜಾಗರೂಕರಾಗಿದ್ದಾರೆ.

ಕರಾಚಿಯ ಫೌಜಿಯಾ ಅಲಿಯಾಸ್ ಚಂದಾ ಖಾನ್ (27) ಬಂಧಿತ ಮಹಿಳೆ. ಮಕ್ಕಳಿಲ್ಲದ ಕಾರಣ ದಿಲ್ಲಿಯ ದರ್ಗಾದಲ್ಲಿ ಪ್ರಾರ್ಥಿಸಲು ಭಾರತಕ್ಕೆ ಬಂದಿರುವುದಾಗಿ ಒಮ್ಮೆ ಹೇಳಿದರೆ, ‘ನಾನು ಬಾಲಿವುಡ್ ನಟ ಸಲ್ಮಾನ್ ಖಾನ್‌ ಅಭಿಮಾನಿಯಾಗಿದ್ದು, ಆತನನ್ನು ಭೇಟಿಯಾಗಲು ಬಂದಿರುವೆ,’ ಎಂದೂ ಹೇಳಿದ್ದಾಳೆ. ಪ್ರಯಾಣ ದಾಖಲೆಗಳ ಬಗ್ಗೆ ವಿಚಾರಿಸಿದರೆ, ‘ತಾಯಿಯ ಸಹೋದರ ಸಂಬಂಧಿಯೂ ನನ್ನೊಂದಿಗೆ ಪಯಣಿಸುತ್ತಿದ್ದು, ಅವರ ಬಳಿ ಎಲ್ಲ ದಾಖಲೆಗಳಿವೆ,’ ಎಂದಿದ್ದಳು. ಆದರೆ, ಪರಿಶೀಲಿಸಿದಾಗ ಆಕೆಯ ಸಂಬಂಧಿಕರು ಯಾರೂ ಲಾಹೋರ್‌ನಿಂದ ದಿಲ್ಲಿಗೆ ಪಯಣಿಸುತ್ತಿದ್ದ ರೈಲಿನಲ್ಲಿ ಇರಲಿಲ್ಲ.

ವಿದೇಶೀಯರ ಕಾಯ್ದೆ, ಭಾರತೀಯ ಪಾಸ್‌ಪೋರ್ಟ್ ಕಾಯ್ದೆ ಅಡಿಯಲ್ಲಿ ಈ ಪಾಕಿಸ್ತಾನಿ ಮಹಿಳೆ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಜಲಂಧರ್‌ನಿಂದ ಅಮೃತಸರಕ್ಕೆ ಕರೆದುಕೊಂಡು ಬರಲಾಗಿದೆ. ಈ ಮಹಿಳೆ ಪಂಜಾಬಿ, ಉರ್ದು, ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾಳೆ. ವಿಚಾರಣೆ ಮುಂದುವರಿದಿದೆ.

Write A Comment