ಮನೋರಂಜನೆ

ಬಾಹು”ಬಲಿ”ಗೆ 400 ಕೋಟಿ: 10 ದಿನಗಳಲ್ಲಿ ರಾಜ್ಯದಲ್ಲೇ 50 ಕೋಟಿ ರೂ.

Pinterest LinkedIn Tumblr

bahubaliಬೆಂಗಳೂರು: ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಅವರ ದೃಶ್ಯಕಾವ್ಯ ಬಾಹುಬಲಿ 10 ದಿನಗಳಲ್ಲಿ ವಿಶ್ವದೆಲ್ಲೆಡೆ 400 ಕೋಟಿ ರೂ. ಕಲೆಕ್ಷನ್‌ ಮಾಡಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ.

ಇದಕ್ಕಿಂತಲೂ ವಿಶೇಷವೆಂದರೆ ನಮ್ಮ ರಾಜ್ಯದಲ್ಲಿ ಬಾಹುಬಲಿ ಅನೇಕ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದು, ಈಗಾಗಲೇ 50 ಕೋಟಿ ರೂ. ಸಂಗ್ರಹಿಸಿದೆ ಎಂದು ವಿಕ ಸೋದರ ಪತ್ರಿಕೆ ಟೈಮ್ಸ್‌ ಆಫ್‌ ಇಂಡಿಯಾ ವರದಿ ತಿಳಿಸಿದೆ.

ಇದು ನಮ್ಮ ರಾಜ್ಯದ ಮಟ್ಟಿಗೆ ಕನ್ನಡೇತರ ಸಿನಿಮಾವೊಂದು ನಿರ್ಮಿಸಿದ ವಿನೂತನ ದಾಖಲೆ. ಈವರೆಗೆ ಯಾವುದೇ ಭಾಷೆಯ ಚಿತ್ರ 50 ಕೋಟಿ ರೂ. ಕಲೆಕ್ಷನ್‌ ಮಾಡಿದ ದಾಖಲೆ ಇರಲಿಲ್ಲ. ಬಾಹುಬಲಿಯ ಕಾಲ್ಪನಿಕ ಕತೆ ಕನ್ನಡಿಗರ ಮನಸ್ಸು ಗೆದ್ದಿದ್ದು, ಕೇವಲ 10 ದಿನಗಳಲ್ಲೇ ಅರ್ಧ ಶತಕ ಬಾರಿಸಿ ಇನ್ನೂ ಅದೇ ವೇಗದಲ್ಲಿ ಮುಂದೆ ಸಾಗುತ್ತಿದೆ. ಈಗಲೂ ಈ ಸಿನಿಮಾ ಕರ್ನಾಟಕದ ಬಹುತೇಕ ಸಿನಿಮಾ ಮಂದಿರಗಳಲ್ಲಿ ಹೌಸ್‌ಫುಲ್‌ ಆಗಿ ಓಡುತ್ತಿದೆ. ಇದರ ವೇಗ ಹೀಗೇ ಮುಂದುವರಿದರೆ ಇನ್ನೂ ದೊಡ್ಡ ದಾಖಲೆ ಬಾಹುಬಲಿ ಪಾಲಾಗುವುದರಲ್ಲಿ ಅಚ್ಚರಿಯಿಲ್ಲ ಎನ್ನುತ್ತಾರೆ ಚೆನ್ನೈ ಮೂಲದ ಸಿನಿಮಾ ವಿಶ್ಲೇಷಕ ತ್ರಿನಾಥ್‌.

ಈ ಹಿಂದಿನ ಕನ್ನಡೇತರ ಭಾಷೆಯ ಸಿನಿಮಾದ ಅತಿ ಹೆಚ್ಚಿನ ಕಲೆಕ್ಷನ್‌ ದಾಖಲೆ ಇದ್ದಿದ್ದು ರಜನಿಕಾಂತ್‌ ಅಭಿನಯದ ಎಂಥಿರನ್‌ ಹಾಗೂ ಶಂಕರ್‌ ನಿರ್ದೇಶನದ ಐ ಚಿತ್ರಕ್ಕೆ. ಅವರೆಡೂ ಸಿನಿಮಾಗಳು ಹೆಚ್ಚು ಕಡಿಮೆ 15 ಕೋಟಿ ರೂ. ಸಂಗ್ರಹಿಸಿದ ದಾಖಲೆ ಮಾಡಿದ್ದವು. ಇದೆಲ್ಲ ದಾಖಲೆಗಳನ್ನು ಬಿಡುಗಡೆಯಾಗಿ ವಾರವಾಗುವ ಮುನ್ನವೇ ಬಾಹುಬಲಿ ಧೂಳಿಪಟ ಮಾಡಿತ್ತು.

ಹಿಂದಿಯಲ್ಲೂ ದಾಖಲೆ:

ಇತ್ತ ಹಿಂದಿಗೆ ಡಬ್‌ ಮಾಡಲಾದ ಸಿನಿಮಾವೊಂದು 100 ಕೋಟಿ ರೂ. ಸಂಗ್ರಹಿಸಿದ ಇನ್ನೊಂದು ದಾಖಲೆಯತ್ತ ಈ ಚಿತ್ರ ಮುನ್ನಡೆದಿದೆ. ಈಗಾಗಲೇ 60 ಕೋಟಿ ರೂ. ದಾಟಿದ್ದು, ಇದೇ ಮೊದಲ ಬಾರಿಗೆ ಡಬ್‌ ಆದ ಚಿತ್ರವೊಂದು ಉತ್ತರ ಭಾರತ ವಲಯದಲ್ಲಿ ಸೆಂಚುರಿ ಬಾರಿಸಿ ಮುನ್ನಡೆದಿದೆ.

ಕರ್ನಾಟಕವಲ್ಲದೆ ಪಕ್ಕದ ತಮಿಳುನಾಡು, ಕೇರಳದಲ್ಲೂ ಬಾಹುಬಲಿ ಭರ್ಜರಿ ಜಯಭೇರಿ ಬಾರಿಸುತ್ತಿದೆ. ತಮಿಳುನಾಡಿನಲ್ಲಿ 10 ದಿನಗಳಲ್ಲಿ 30 ಕೋಟಿ ರೂ. ಕಲೆಕ್ಷನ್ ಮಾಡಿದೆ ಬಾಹುಬಲಿ. ರಾಜಮೌಳಿ ಅವರದ್ದೇ ನಿರ್ದೇಶನದ ನಾನ್‌ ಇ ಸಿನಿಮಾ ಈ ಹಿಂದೆ 25 ಕೋಟಿ ರೂ. ಗಳಿಸಿದ್ದು ತಮಿಳೇತರ ಸಿನಿಮಾದ ಅತಿ ದೊಡ್ಡ ಕಲೆಕ್ಷನ್‌ ಆಗಿತ್ತು.

ಕೇರಳದಲ್ಲಿ 10 ಕೋಟಿ ರೂ ಸಂಗ್ರಹಿಸಿರುವ ಬಾಹುಬಲಿಯ ಮಲಯಾಳಂ ಅವತರಿಣಿಕೆ ಅಲ್ಲೂ ಹಳೇ ದಾಖಲೆಗಳನ್ನು ಪುಡಿಗಟ್ಟಿ ಮುಂದುವರಿದಿದೆ.

Write A Comment