ಮನೋರಂಜನೆ

ಮಾರುತಿ 800ನಲ್ಲಿ ಶ್ರುತಿ ಹರಿಹರನ್‌ ಸವಾರಿ

Pinterest LinkedIn Tumblr

Shruthi-Hariharan-lead“ಬುಲೆಟ್‌ ಬಸ್ಯಾ’ ನಂತರ ಶರಣ್‌ ಅಭಿನಯದ ಮುಂದಿನ ಚಿತ್ರ ಯಾವುದು? “ವಜ್ರಕಾಯ’ ನಂತರ ಹರ್ಷ ನಿರ್ದೇಶಿಸಲಿರುವ ಮುಂದಿನ ಚಿತ್ರ ಯಾವುದು? ಈ ಎರಡೂ ಪ್ರಶ್ನೆಗಳಿಗೆ ಉತ್ತರ “ಜೈಮಾರುತಿ 800′ ಎಂಬುದು ಎಲ್ಲರಿಗೂ ಗೊತ್ತು. ಈ ಬಗ್ಗೆ “ಬಾಲ್ಕನಿ’ಯಲ್ಲಿ ಬಹಳ ಹಿಂದೆಯೇ ಸುದ್ದಿ ಬಂದಿತ್ತು. ಆದರೆ, ಈ ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆ ಉತ್ತರ ಮಾತ್ರ ಸಿಕ್ಕಿರಲಿಲ್ಲ.

ಈಗ ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಶರಣ್‌ಗೆ ನಾಯಕಿಯಾಗಿ ಶ್ರುತಿ ಹರಿಹರನ್‌ ಆಯ್ಕೆಯಾಗಿದ್ದಾರೆ. ಇನ್ನು ಚಿತ್ರದ ಚಿತ್ರೀಕರಣ ಶುರುವಾಗುವುದೊಂದೇ ಬಾಕಿ. ಅದು ಸಹ ನಾಳೆ 13ರಿಂದ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಚಿತ್ರವನ್ನು ಜಯಣ್ಣ ಕಂಬೈನ್ಸ್‌ನಡಿ ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ನಿಜ ಏನು ಎಂದರೆ, ಈ ಚಿತ್ರವನ್ನು ಜಯಣ್ಣ ಕಂಬೈನ್ಸ್‌ ಅರ್ಪಿಸುತ್ತಿದೆ ಅಷ್ಟೇ. ಚಿತ್ರವನ್ನು ನಿರ್ಮಿಸುತ್ತಿರುವವರು ಮಂಜುಳಾ ರಮೇಶ್‌.

ಇದಕ್ಕೂ ಮುನ್ನ ಮಂಜುಳಾ ರಮೇಶ್‌ ಮತ್ತು ರಮೇಶ್‌ ಅವರು “ದುನಿಯಾ’ ವಿಜಯ್‌ ಜೊತೆಗೆ ಸೇರಿ “ಜಯಮ್ಮನ ಮಗ’ ನಿರ್ಮಿಸಿದ್ದರು. ಆ ನಂತರ ಅವರು ಯಾವುದೇ ಚಿತ್ರ ನಿರ್ಮಿಸಿರಲಿಲ್ಲ.

ಈಗ ತಮ್ಮ ಸಂಸ್ಥೆಯಿಂದ ಎರಡನೆಯ ಚಿತ್ರವಾಗಿ “ಜೈಮಾರುತಿ 800′ ನಿರ್ಮಿಸುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಶರಣ್‌ ಸಿಕ್ಸ್‌ ಪ್ಯಾಕ್‌ ಮಾಡಿಕೊಳ್ಳುತ್ತಿರುವುದು.

ಈಗಾಗಲೇ ಕಸರತ್ತು ಪ್ರಾರಂಭಿಸಿರುವ ಶರಣ್‌, ರವಿವರ್ಮ ನಿರ್ದೇಶನದ ಭರ್ಜರಿ ಫೈಟ್‌ವೊಂದರಲ್ಲಿ ತಮ್ಮ ಸಿಕ್ಸ್‌ ಪ್ಯಾಕ್‌ ಪ್ರದರ್ಶಿಸಲಿದ್ದಾರಂತೆ.

ಶರಣ್‌ ಹಾಗೂ ಶ್ರುತಿ ಹರಿಹರನ್‌ ಜೊತೆಗೆ ಸಾಧು ಕೋಕಿಲ, ಅರುಣ್‌ ಸಾಗರ್‌, ಲೋಕಿ, ಮಧು ಗುರುಸ್ವಾಮಿ, ಚಿಕ್ಕಣ್ಣ, ಮೈಕೋ ನಾಗರಾಜ್‌ ಮುಂತಾದವರು ಅಭಿನಯಿಸುತ್ತಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದರೆ, “ವಜ್ರಕಾಯ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಸ್ವಾಮಿ, ಈ ಚಿತ್ರಕ್ಕೂ ಛಾಯಾಗ್ರಹಣ ಮಾಡುತ್ತಿದ್ದಾರೆ. ಜುಲೈ 13ರಿಂದ ಶುರುವಾಗಲಿರುವ ಚಿತ್ರೀಕರಣ ಒಂದು ವಾರ ಕಾಲ ನಡೆಯುತ್ತದೆ. ಆ ನಂತರ ಆಗಸ್ಟ್‌ 5ರಿಂದ ಚಿತ್ರೀಕರಣ ಪ್ರಾರಂಭವಾಗಿ ಒಂದೇ ಹಂತದಲ್ಲಿ ಮುಗಿಯಲಿದೆ.
-ಉದಯವಾಣಿ

Write A Comment