ಮನೋರಂಜನೆ

ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿದೆ ‘ನಿತ್ಯ ಜೊತೆ ಸತ್ಯ’ ಚಿತ್ರ

Pinterest LinkedIn Tumblr

Nithya-Jothe-Sathya_129

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಿನಿಮಾಗಳನ್ನು ನಿಷೇಧಿಸಿರುವುದರಿಂದ ತೆಲುಗು, ತಮಿಳಿನ ಹಲವಾರು ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡ ಭಾಷೆ ಗೊತ್ತಿಲ್ಲದಿದ್ದರೂ ಇಲ್ಲಿಗೆ ಬಂದು ಚಿತ್ರ ನಿರ್ಮಿಸುತ್ತಿದ್ದಾರೆ.  ಅದೇ ರೀತಿ ಈಗ ಮತ್ತೊಂದು ಸಂಸ್ಥೆ ಹೊಸ ಚಿತ್ರವೊಂದನ್ನು ಕನ್ನಡದಲ್ಲಿ ಕಳೆದ ವಾರ ಆರಂಭಿಸಿದೆ.

ಈಗಾಗಲೇ ತೆಲುಗಿನಲ್ಲಿ ಒಂದೆರಡು ಚಿತ್ರಗಳನ್ನು ನಿರ್ದೇಶಿಸಿರುವ ನಾಗೇಂದ್ರಪ್ರಸಾದ್ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ರಚಿಸಿ, ನಿರ್ದೇಶನ ಮಾಡುತ್ತಿದ್ದಾರೆ. ಅಂದ ಹಾಗೆ ಈ ಚಿತ್ರದ ಹೆಸರೇನು ಗೊತ್ತೇ..? ಅದು ನಿತ್ಯ ಜತೆ ಸತ್ಯ.  ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ರಿಂಗ್ ರಸ್ತೆಯ ಹೆಣ್ಣೂರಿನ ಕನಕಶ್ರೀ ಲೇಔಟ್‌ನ ಮನೆಯೊಂದರಲ್ಲಿ ನೆರವೇರಿತು. ತೆಲುಗಿನ ಮನೀಶ್‌ಬಾಬು ಹಾಗೂ ಕನ್ನಡದ ಹುಡುಗಿ ತೇಜಸ್ವಿನಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.  ಇದೊಂದು ಸೈಕಾಲಜಿಕಲ್ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯಾಗಿದ್ದು, ನಾಯಕಿಯ ಮೇಲೆ ಇಡೀ ಚಿತ್ರದ ಕಥೆ ಕೇಂದ್ರೀಕೃತವಾಗಿದೆ.

ಈ ಚಿತ್ರದಲ್ಲಿ 4 ಹಾಡುಗಳಿದ್ದು, ರಘುರಾಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಸ್ವಾಮಿ ಇದರ ಕ್ಯಾಮೆರಾ ಮ್ಯಾನ್. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ನಾಗೇಂದ್ರ ಪ್ರಸಾದ್ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಕನ್ನಡದಲ್ಲಿ ನನಗೆ ಮೊದಲ ಚಿತ್ರವಿದು. ಇದು ಒಂದು ಲವ್ ಥ್ರಿಲ್ಲರ್ ಕಥೆಯಾಗಿದೆ. ನಾಯಕಿ ಪ್ರಧಾನ ಚಿತ್ರ ಇದಾಗಿದ್ದು, ಹೊಸದಾಗಿ ಮದುವೆಯಾದ ಇಬ್ಬರು ದಂಪತಿಗಳ ಮೇಲೆ ಕಥೆ ನಡೆಯುತ್ತದೆ. ನಟ ದೇವರಾಜ್ ಒಬ್ಬ ಪ್ಯಾರಾಸೈಕಾಲಜಿಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ವೈಜ್ಞಾನಿಕವಾಗಿ ಸಾಕಷ್ಟು ಸಂಶೋಧನೆಗಳನ್ನು ಮಾಡಿ ಈ ಚಿತ್ರಕ್ಕೆ ಕಥೆ ಹೆಣೆಯಲಾಗಿದೆ. ಜುಲೈ 10ರವರೆಗೆ ಇಲ್ಲಿ 15 ದಿನಗಳ ಕಾಲ ಮೊದಲ ಹಂತದ ಶೂಟಿಂಗ್ ನಡೆಸಲಿದ್ದೇವೆ.

ನಂತರ ಮೈಸೂರು ಹಾಗೂ ಹೈದರಾಬಾದ್‌ನಲ್ಲಿ 2ನೇ ಹಂತದ ಶೂಟಿಂಗ್ ಮುಂದುವರೆಸುವ ಪ್ಲಾನ್ ಇದೆ ಎಂದು ಹೇಳಿಕೊಂಡರು (ಶ್ರೀರಂಗಪಟ್ಟಣ, ಪಾಂಡವಪುರ ಸುತ್ತ ಹಾಡು). ನಾಯಕಿ ತೇಜಸ್ವಿನಿ ಮಾತನಾಡುತ್ತಾ ನಾಯಕಿ ಪ್ರಧಾನ ಚಿತ್ರವೊಂದರಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ನಿತ್ಯಾಳ ಪಾತ್ರ. ಪ್ರತಿ ದೃಶ್ಯದಲ್ಲೂ ನಾನಿರುತ್ತೇನೆ. ನನಗೊಂದು ಸೈಕಾಲಜಿಕಲ್ ಪ್ರಾಬ್ಲಂ ಇರುತ್ತದೆ. ಅದೇನೆಂದು ಹೇಳುವುದೇ ಈ ಚಿತ್ರದ ಕಥೆ. ನನ್ನ ಪಾತ್ರ ತುಂಬಾ ಕುತೂಹಲ ಮೂಡಿಸುತ್ತದೆ.  ಈಗಾಗಲೇ ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದು, ಇದು 2ನೇ ಚಿತ್ರ. ಈ ರೀತಿಯ ಕಥೆ ಎಲ್ಲೂ ಬಂದಿರಲಾರದು ಎಂದು ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು

.ಚಿತ್ರದ ನಾಯಕ ಮನೀಶ ಮಾತನಾಡಿ ಈಗಾಗಲೇ ತೆಲುಗಿನಲ್ಲಿ 3 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ಸ್ಟೈಲಿಷ್ ಪಾತ್ರ.  ಸಸ್ಪೆನ್ಸ್ ಥ್ರಿಲ್ಲರ್ ಕಥೆ. ನಾಯಕಿಗೊಂದು ಸಮಸ್ಯೆ ಇರುತ್ತದೆ. ಅದೇನೆಂದು ಹೇಳುವುದೇ ಈ ಚಿತ್ರದ ಎಳೆ ಎಂದು ಹೇಳಿದರು. ಹೈದರಾಬಾದ್‌ನಲ್ಲಿ ಕೆಮಿಕಲ್ ಫ್ಯಾಕ್ಟರಿ ಹೊಂದಿರುವ ಮಲ್ಲಿ ಕಾರ್ಜುನ ರೆಡ್ಡಿ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕಿಳಿದಿದ್ದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.  ಈಗಾಗಲೇ ರೆಡ್ ಅಲರ್ಟ್ ಚಿತ್ರಕ್ಕೆ ಕೆಲಸ ಮಾಡಿರುವ ಛಾಯಾಗ್ರಾಹಕ ಕಲ್ಯಾಣಸ್ವಾಮಿ ತೆಲುಗು, ತಮಿಳು, ಮಲಯಾಳಂ ಸೇರಿ 4 ಭಾಷೆಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

Write A Comment