ಮನೋರಂಜನೆ

ಸಚಿನ್ ಶತಮಾನದ ಶ್ರೇಷ್ಠ ಕ್ರಿಕೆಟಿಗ: ಕ್ರಿಕೆಟ್ ಆಸ್ಟ್ರೇಲಿಯಾ

Pinterest LinkedIn Tumblr

Sachin-Tendulkar

ಮೆಲ್ಬೋರ್ನ್: ವಿಶ್ವ ಕ್ರಿಕೆಟ್ ನ ದಂತಕಥೆ ಮತ್ತು ಭಾರತೀಯ ಕ್ರಿಕೆಟ್ ನ ಹೆಮ್ಮೆ ಸಚಿನ್ ತೆಂಡೂಲ್ಕರ್ ಅವರು ಶತಮಾನದ ಕ್ರಿಕೆಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಶತಮಾನದ ಕ್ರಿಕೆಟರ್ ಆಯ್ಕೆಗಾಗಿ ಇತ್ತೀಚೆಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನಡೆಸಿದ್ದ ಅಭಿಮಾನಿಗಳ ಮತ ಸಮೀಕ್ಷೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಶತಮಾನದ ಕ್ರಿಕೆಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ ಸಚಿನ್ ತೆಂಡೂಲ್ಕರ್ ಅವರು ನಂ. 1 ಟೆಸ್ಟ್ ಆಟಗಾರ ಎನಿಸಿಕೊಂಡಿದ್ದಾರೆ. ನಂತರದ ಎರಡನೇ ಸ್ಥಾನದಲ್ಲಿ ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕುಮಾರ್ ಸಂಗಕ್ಕಾರ ಇದ್ದು, ಆಸ್ಟ್ರೇಲಿಯಾದ ಆಡಂ ಗಿಲ್ ಕ್ರಿಸ್ಟ್ ಮೂರನೇ ಸ್ಥಾನದಲ್ಲಿದ್ದಾರೆ.

ಈ ಸಮೀಕ್ಷೆಗೂ ಮುನ್ನ 2000ರಿಂದ ಇಲ್ಲಿ ತನಕದ ಟಾಪ್ 100 ಟೆಸ್ಟ್ ಆಟಗಾರರ ಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿತ್ತು. ಸಮೀಕ್ಷೆಯಲ್ಲಿ ವಿಶ್ವಾದ್ಯಂತ ಸುಮಾರು 16 ಸಾವಿರಕ್ಕೂ ಅಧಿಕ ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ಸಮೀಕ್ಷೆಯಲ್ಲಿ ಸಚಿನ್ ಅವರಿಗೆ ಶೇ 23ರಷ್ಟು ಮತಗಳು ಸಿಕ್ಕಿದ್ದರೆ, ಕುಮಾರ್ ಸಂಗಕ್ಕಾರ ಅವರಿಗೆ ಶೇ 14ರಷ್ಟು ಮತಗಳು ಬಂದಿವೆ. ಟಾಪ್ 10 ಪಟ್ಟಿಯಲ್ಲಿ ನಾಲ್ವರು ಆಸ್ಟ್ರೇಲಿಯನ್ನರು, ಮೂವರು ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಸೇರಿದ್ದು, ಇಬ್ಬರು ಶ್ರೀಲಂಕಾದ ಆಟಗಾರರಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು 2013ರಲ್ಲಿ ತಮ್ಮ ವೃತ್ತಿ ಬದುಕಿನ 200ನೇ ಟೆಸ್ಟ್ ಪಂದ್ಯವನ್ನಾಡಿದ ಬಳಿಕೆ ಮುಂಬೈನಲ್ಲಿ ನಿವೃತ್ತಿ ಘೋಷಿಸಿದ್ದರು. 42 ವರ್ಷದ ಸಚಿನ್ ತೆಂಡೂಲ್ಕರ್ ಅವರು 100 ಅಂತಾರಾಷ್ಟ್ರೀಯ ಶತಕಗಳ ದಾಖಲೆ ಜೊತೆಗೆ ಹಲವು ವಿಶ್ವ ದಾಖಲೆಗಳನ್ನು ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಐಕಾನ್ ಆಟಗಾರರಾಗಿದ್ದು, ಸದ್ಯ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ಅವರೊಂದಿಗೆ ನಿವೃತ್ತ ಕ್ರಿಕೆಟಿಗರಿಗಾಗಿ ಟ್ವೆಂಟಿ-20 ಲೀಗ್ ಆಯೋಜಿಸುತ್ತಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಸಮೀಕ್ಷೆಯಿಂದ ಹೊರಬಿದ್ದ ಫಲಿತಾಂಶ

1. ಸಚಿನ್ ತೆಂಡೂಲ್ಕರ್ – ಭಾರತ (ಶೇ.23ರಷ್ಟು ಮತ)

2. ಕುಮಾರ್ ಸಂಗಕ್ಕಾರ – ಶ್ರೀಲಂಕಾ (ಶೇ.14ರಷ್ಟು ಮತ)

3. ಆಡಂ ಗಿಲ್ ಕ್ರಿಸ್ಟ್-ಆಸ್ಟೇಲಿಯಾ (ಶೇ.13ರಷ್ಟು ಮತ)

4. ರಿಕಿ ಪಾಂಟಿಂಗ್ -ಆಸ್ಟೇಲಿಯಾ (ಶೇ.11ರಷ್ಟು ಮತ)

5. ಜಾಕ್ ಕಾಲೀಸ್- ದಕ್ಷಿಣ ಆಫ್ರಿಕಾ (ಶೇ.11ರಷ್ಟು ಮತ)

6. ಎಬಿ ಡಿವಿಲೆಯರ್ಸ್- ದಕ್ಷಿಣ ಆಫ್ರಿಕಾ (ಶೇ.10ರಷ್ಟು ಮತ)

7. ಶೇನ್ ವಾರ್ನ್ -ಆಸ್ಟ್ರೇಲಿಯಾ (ಶೇ.9ರಷ್ಟು ಮತ)

8. ಗ್ಲೆನ್ ಮೆಗ್ರಾ -ಆಸ್ಟ್ರೇಲಿಯಾ (ಶೇ.5ರಷ್ಟು ಮತ)

9. ಮುತ್ತಯ್ಯ ಮುರಳೀಧರನ್ -ಶ್ರೀಲಂಕಾ (ಶೇ.3ರಷ್ಟು ಮತ)

10. ಡೇಲ್ ಸ್ಟೇನ್ -ದಕ್ಷಿಣ ಆಫ್ರಿಕಾ (ಶೇ.1ರಷ್ಟು ಮತ)

Write A Comment