ಮನೋರಂಜನೆ

ಹಿಂದಿ ಚಿತ್ರರಂಗದ ಪ್ರಥಮ ಕ್ಯಾಬರೆ ಸಾಮ್ರಾಜ್ಞಿ ಹೆಲೆನ್ ಕಥೆ

Pinterest LinkedIn Tumblr

helen1

‘ಮೇರಾ ನಾಮ್ ಚಿನ್ ಚಿನ್ ಚು… ಚಿನ್ ಚಿನ್ ಚು ಬಾಬಾ ಚಿನ್ ಚಿನ್ ಚೂ’ ಹಾಡಿನಿಂದ ಬಾಲಿವುಡ್ ಬೆಳ್ಳಿ ಪರದೆಯ ಮೇಲೆ ವಿಜೃಂಭಿಸಿ ಮತ್ತೆ ಹಿಂತಿರುಗಿ ನೋಡದಂತೆ ಹಿಂದಿ ಸಿನೆಮಾ ರಂಗವನ್ನು ತಮ್ಮ ಹುಚ್ಚೆಬ್ಬಿಸುವ ಕ್ಯಾಬರೆ ನೃತ್ಯದಿಂದ ಮನಸೂರೆಗೊಂಡ ಹೆಲೆನ್ ಸಿನೆಮಾರಂಗ ಕಂಡ ಪ್ರಥಮ ಕ್ಯಾಬರೆ ಸಾಮ್ರಾಜ್ಞಿ. ಇಂದು, ಮುಂದು, ಎಂದೆಂದೂ ಹೆಲೆನ್‌ಗೆ ಸರಿಸಾಟಿ ಯಾರೂ ಇಲ್ಲ. ಹಿಂದಿ ಚಿತ್ರಲೋಕಕ್ಕೆ ಕ್ಯಾಬರೆ ನೃತ್ಯದ ಹುಚ್ಚು ಹಿಡಿಸಿದ್ದೇ ಹೆಲೆನ್. ಪ್ರತಿಯೊಂದು ಚಿತ್ರದಲ್ಲಿ ಒಂದು ಕ್ಯಾಬರೆ ಹಾಡು ಮತ್ತು ಆ ಹಾಡಿಗೆ ಹೆಲೆನ್ ನೃತ್ಯವಿದ್ದೆ ಇರಬೇಕು ಅನ್ನುವ ಪರಂಪರೆ ಹುಟ್ಟುಹಾಕಿದ್ದೇ ಹೆಲೆನ್ ಅಂದರೂ ತಪ್ಪಾಗಲಿಕ್ಕಿಲ್ಲ. ಅರವತ್ತು ಎಪ್ಪತ್ತರ ದಶಕವನ್ನು ತಮ್ಮ ಆಕರ್ಷಕ ನೋಟ, ಚಂಚಲ ಮಾಟ, ಉನ್ಮತ್ತ ತಾರುಣ್ಯದ ಸಮ್ಮೋಹಕ ಶೈಲಿ, ಮಾದಕ ಕ್ಯಾಬರೆ ನೃತ್ಯ, ಬೆಲ್ಲಿ ಡಾನ್ಸ್ ಮೂಲಕ ‘ಬಾಕ್ಸ್ ಆಫೀಸಿನ’ ಗಲ್ಲಾ ತುಂಬಿಸುತ್ತಿದ್ದ ಹೆಲೆನ್ ಏ-ಬಾಂಬ್ ನರ್ತಕಿಯೆಂದೇ ಪ್ರಸಿದ್ಧಿಯಾದರು. ಹೆಲೆನ್ ಪೂರ್ತಿ ಹೆಸರು ‘ಹೆಲೆನ್ ಜಯರಾಗ್ ರಿಚರ್ಡ್‌ಸನ್ ಖಾನ್‌’. ತನ್ನ ಮಾದಕ ನೋಟದ, ಮೈ ಕುಣಿಸಿ, ಮಣಿಸಿ, ಸಂಮ್ಮೋಹನಗೊಳಿಸುತ್ತಿದ್ದ ಈ ಮೋಹಕ ಮೈಮಾಟದ ಹೆಲೆನ್ ಬದುಕು ಮಾತ್ರ ಯುದ್ಧಭೂಮಿಯಾಗಿತ್ತು. ಹೋರಾಟ, ಸಂಘರ್ಷದ ಬದುಕಿನ ನೋವುಂಡ ಈ ಕಂಗಳಲ್ಲಿ ಅದೇನು ಮಾದಕತೆ! ನೃತ್ಯಕ್ಕೆಂದೇ ಹೇಳಿ ಮಾಡಿಸಿದ ಮೈಮಾಟ, ಅದೇನು ಚೆಲುವನ್ನು ದೇವರು ಕರುಣಿಸಿದ್ದ ಆಕೆಗೆ? ಅದೇ ಅವಳನ್ನು ಚಿತ್ರರಂಗದ ನೃತ್ಯ ಸಾಮ್ರಾಜ್ಞಿಯನ್ನಾಗಿಸಿದ್ದು.

ಆರಂಭಿಕ ಹೋರಾಟ

ಆ್ಯಂಗ್ಲೋ ಇಂಡಿಯನ್ ತಂದೆ ಹಾಗೂ ಬರ್ಮಾ ತಾಯಿಗೆ ನವೆಂಬರ್ 21, 1938ರಲ್ಲಿ ಹೆಲೆನ್ ಹುಟ್ಟಿದಳು.  ತಂದೆ ಸೈನ್ಯದ ಅಧಿಕಾರಿ, ತಾಯಿ ನರ್ಸ್. ಅವಳು ಹುಟ್ಟಿದ ಮರುವರ್ಷವೇ ವಿಶ್ವದ ಎರಡನೇ ಮಹಾಯುದ್ಧದ ಬೆಂಕಿ ತನ್ನ ಕೆನ್ನಾಲಗೆಯನ್ನು ಜಗತ್ತಿನ ಉದ್ದಗಲಕ್ಕೂ ಚಾಚಿತ್ತು. ಜಪಾನ್, ಬರ್ಮಾ ಮೇಲೆ ಆಕ್ರಮಣ ಮಾಡಿದಾಗ ನಿರಂತರ ಗುಂಡಿನ ಸುರಿಮಳೆ, ಸಾವಿನಿಂದ ಜೀವವುಳಿಸಿಕೊಳ್ಳಲು ಲಕ್ಷಾಂತರ ಜನ ಬರ್ಮಾದೇಶದಿಂದ ಗುಳೇ ಹೊರಟರು. ಹೆಲೆನ್ ತಂದೆ ಜಯರಾಗ್ ಯುದ್ಧದಲ್ಲಿ ಸಾವನ್ನಪ್ಪುತ್ತಾರೆ. ತಾಯಿ ಮಕ್ಕಳು ಇತರ ಬರ್ಮಿಗಳ ನಿರಾಶ್ರಿತರ ತಂಡದ ಜತೆ ಮನೆ ಮಠ ಎಲ್ಲ ತೊರೆದು ಕಾಲುನಡಿಗೆಯಲ್ಲೇ ಭಾರತಕ್ಕೆ ವಲಸೆ ಹೊರಡುತ್ತಾರೆ. ಆಗ ಹೆಲೆನ್‌ಗೆ ರೋಜರ್ ಹೆಸರಿನ ಒಬ್ಬ ತಮ್ಮನೂ, ಜೆನಿಫರ್ ಹೆಸರಿನ ತಂಗಿಯೂ ಇರುತ್ತಾರೆ. ಕಾಲು ನಡಿಗೆಯ ನೋವಿನ ಯಾತ್ರೆ. ಹಗಲಿರುಳೆನ್ನದೆ ಒಂದೂರಿನಿಂದ ಇನ್ನೊಂದೂರಿಗೆ ನಡೆಯುತ್ತ ನಡೆಯುತ್ತ ಜನ ಕಿತ್ತು ತಿನ್ನುವ ಹಸಿವು, ಚಳಿ-ಮಳೆ-ಬಿಸಿಲಿಗೆ ಮೈಮುಚ್ಚಿಕೊಳ್ಳಲು ಹಚ್ಚಡವೂ ಸಾಲದೇ ರೋಗ ರುಜಿನಗಳಿಂದ ಸಾಯುತ್ತಿರುತ್ತಾರೆ. ಅಂಥದರಲ್ಲಿ ಹೆಲೆನ್ ಕುಟುಂಬ ಕೂಡ ಸಾವಿರಾರು ಯೋಜನ ನಡೆದು, ನೂರಾರು ಹಳ್ಳಿಗಳನ್ನು ದಾಟುತ್ತ ಸಾಗುತ್ತದೆ. ಪಾದಗಳಲ್ಲಿ ಬೊಕ್ಕೆಗಳೆದ್ದು ರಕ್ತ ಒಸರುತ್ತಿದ್ದರೂ ಲೆಕ್ಕಿಸದೆ ನಡೆಯಬೇಕಾದ ಸ್ಥಿತಿ. ದಾರಿಯಲ್ಲೇ ಹೆಲೆನ್ ತಾಯಿಗೆ ಗರ್ಭಸ್ರಾವವಾಗುತ್ತದೆ. ಅಲ್ಲಲ್ಲಿ ಸಿಗುವ ಹಳ್ಳಿಗಳ ಸಹೃದಯ ಜನತೆ, ಭಾರತೀಯ ಸೇನಾದಳ, ತುತ್ತು ಕೂಳು, ನೀರು, ಬಟ್ಟೆ- ಬರೆ, ಮದ್ದು,  ವಸತಿ ಕೊಟ್ಟು ನಿರಾಶ್ರಿತ ಬರ್ಮಿಗಳನ್ನು ಕಾಪಾಡುತ್ತಾರೆ. ಅಸ್ಸಾಮಿನ ದಿಬ್ರೂಗರ್ ತಲುಪುವ ಹೊತ್ತಿಗೆ ಹೆಲೆನ್ ಮತ್ತು ಅವಳ ತಾಯಿ ಹಸಿವು, ಬಳಲಿಕೆ, ಅನಾರೋಗ್ಯದಲ್ಲಿ ಅಸ್ಥಿಪಂಜರದಂತಾಗಿರುತ್ತಾರೆ. ಜತೆಗೆ ಹೊರಟ ಅಷ್ಟೂ ಸಹಯಾತ್ರಿಕರಲ್ಲಿ ಅರ್ಧದಷ್ಟು ಜನ ದಾರಿ ಮಧ್ಯದಲ್ಲೇ ಹಸಿವು, ರೋಗ ರುಜಿನಗಳಿಂದ ಸಾವನ್ನಪ್ಪಿರುತ್ತಾರೆ. ಲಕ್ಷಾಂತರ ರೋಗರುಜಿನಗಳಿಂದ ನರಳುತ್ತಿದ್ದ ನಿರಾಶ್ರಿತರನ್ನು ದಿಬ್ರೂಗರ್‌ನ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಗುತ್ತದೆ. ಹೆಲೆನ್, ಅವಳ ತಾಯಿ ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿ ಉಪಚಾರ ಪಡೆದು ಚೇತರಿಸಿಕೊಳ್ಳುತ್ತಾರೆ.

ಹೆಲೆನ್ ಮೊದಲ ತಂದೆ ಜಯರಾಗ್ ನಿಧನದ ನಂತರ ತಾಯಿ ಬ್ರಿಟಿಷ್ ಸೈನಿಕನೊಬ್ಬನನ್ನು ಮದುವೆಯಾಗಿರುತ್ತಾಳೆ. ಹೀಗೆ ಹೆಲೆನ್ ತನ್ನ ಮಲತಂದೆ ರಿಚರ್ಡ್‌ಸನ್ ಹೆಸರನ್ನೂ ತನ್ನ ಹೆಸರಿಗೆ ಸೇರಿಸಿ – ಹೆಲೆನ್ ಜಯರಾಗ್ ರಿಚರ್ಡ್‌ಸನ್ ಆಗುತ್ತಾಳೆ. ನರ್ಸ್ ಆಗಿದ್ದ ತಾಯಿ ಮಾರ್ಲಿನ್ ದುಡಿದು ಮೂರು ಮಕ್ಕಳನ್ನು ಸಾಕಬೇಕಿತ್ತು. ತಾಯಿಯ ಸಂಬಳ ಹೊಟ್ಟೆ ಬಟ್ಟೆಗೆ ಏನೇನೂ ಸಾಲದೇ ಹೆಲೆನ್‌ಗೆ ಶಿಕ್ಷಣವನ್ನು ಮುಂದುವರಿಸಲಾಗುವುದಿಲ್ಲ. 1943ರ ಹೊತ್ತಿಗೆ ಹೆಲೆನ್ ಕುಟುಂಬ ಕಲಕತ್ತೆಯಿಂದ ಮುಂಬಯಿಗೆ ವಲಸೆ ಬರುತ್ತದೆ. ಹೊಟ್ಟೆಪಾಡಿಗಾಗಿ ಏನು ಮಾಡಬೇಕೋ ಗೊತ್ತಿಲ್ಲದ ಸ್ಥಿತಿ. ಆಗಿನ ಕುಟುಂಬದ ಸ್ನೇಹಿತೆ ಚಿತ್ರರಂಗದ ನಟಿ- ನೃತ್ಯಗಾತಿ ಕುಕೂ,ಹೆಲೆನ್‌ಗೆ ಚೂರು ನೃತ್ಯ ಹೇಳಿಕೊಟ್ಟು ಒಂದು ಡ್ಯಾನ್ಸ್ ಗ್ರೂಪಿನಲ್ಲಿ ಕೆಲಸ ಕೊಡಿಸುತ್ತಾಳೆ. ಹೀಗೆ ಹೆಲೆನ್ 1951ರಲ್ಲಿ ಬಣ್ಣದಲೋಕವನ್ನು ಹೊಟ್ಟೆಪಾಡಿಗಾಗಿ ಪ್ರವೇಶಿಸಿ ಆವಾರಾ,ಅಲಿಫ್ ಲೈಲಾ ಮುಂತಾದ ಹಲವಾರುಚಿತ್ರಗಳಿಗೆ ಬಣ್ಣಹಚ್ಚಿಕೊಂಡುಕುಣಿಯಬೇಕಾಗುತ್ತದೆ. ಆಗ ಬಹುಶಃ ಆಕೆ ಕನಸು ಮನಸಿನಲ್ಲೂ ಯೋಚಿಸಿರಲಿಕ್ಕಿಲ್ಲ ಮುಂದೆ ತಾನೊಬ್ಬ ಅದ್ಭುತ ಕ್ಯಾಬರೆನೃತ್ಯಗಾತಿಯಾಗುತ್ತೇನೆಂದು, ತನ್ನ ಹೆಸರು ಬಾಲಿವುಡ್ ಯುಗದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆಯಲ್ಪಡಬಹುದು ಎಂದು. ಯುದ್ಧಭೀತಿಯಿಂದ ಜೀವವುಳಿಸಿಕೊಂಡು ಹಸಿವು ನೀರಡಿಕೆಯೆನ್ನದೆ ಬರಿಗಾಲಲ್ಲಿ ನಡೆದ ಎಳೆಪಾದಗಳು, ರಕ್ತ ಸೋರಿ ಚಕ್ಕಳೆಗಟ್ಟಿದ ಅವಳ ಹೂವಿನಂತ ಪಾದಗಳು ಈಗ ಕೆಂಪು ಮಖಮಲ್ಲಿನಹಾಸಿನಲ್ಲಿ ಲಯಬದ್ಧವಾಗಿ ತಿರುಗತೊಡಗಿದ್ದವು. ಹಾವಿನಂತೆ ಬಳಕುತ್ತ, ತೆವಳುತ್ತ ಬಣ್ಣದ ಬಿಲ್ಲಿನಂತೆ ಮಣಿಯುವ ಅವಳದೇಹವೀಗ ಮಖಮಲ್ಲಿನ ನೆಮ್ಮದಿಯಲ್ಲಿನಿದ್ರಿಸುವಂತಾಗಿತ್ತು.

ಯಶಸ್ಸಿನ ಮೆಟ್ಟಿಲು ಹಾಗೂ ಖಾಸಗಿ ಬದುಕು

ಹೆಲನ್‌ಳ ಹತ್ತೊಂಭತ್ತನೇ ವರ್ಷ ಅವಳ ಬದುಕನ್ನೇ ಬದಲಿಸಿಬಿಟ್ಟಿತು. ಆಗ 1958ರಲ್ಲಿ ಶಕ್ತಿ ಸಾಮಂತರ ‘ಹೌರಾ ಬ್ರಿಡ್ಜ್‌’ ಚಿತ್ರದಲ್ಲಿ ಸೋಲೋ ಡಾನ್ಸ್. ‘ಮೇರಾ ನಾಮ್ ಚಿನ್ ಚಿನ್ ಚೂ…’ ಗೀತಾ ದತ್ತಳ ಇನಿದನಿಗೆ ಕುಣಿದ ಹೆಲೆನ್ ಬೆಳಕು ಹರಿಯುವುದರಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಹೋದಳು. ಆನಂತರ ಆಕೆ ಹಿಂತಿರುಗಿ ನೋಡಲಿಲ್ಲ. ಚಿತ್ರಗಳ ಮೇಲೆ ಚಿತ್ರಗಳು. ಎಲ್ಲ ಚಿತ್ರ ನಿರ್ಮಾಪಕರಿಗೂ ಹೆಲೆನ್ ಬೇಕು. ಕ್ಯಾಬರೆ ನೃತ್ಯವಿರದ ಸಿನೆಮಾ ನಡೆದೀತೆ? ಹೆಲೆನ್ ನೃತ್ಯವಿದ್ದರೆ ಬಂಡವಾಳಕಾರರೂ ಬಂಡವಾಳ ಹೂಡಲು ತಾ ಮುಂದು ನಾ ಮುಂದು ಎನ್ನುತ್ತಿದ್ದರು. ಹೆಲೆನ್ ಬೆಳ್ಳಿಪರದೆಯ ಬಂಗಾರದ ಮೊಟ್ಟೆಯಾಗಿದ್ದಳು. ಚಿತ್ರದ ನಾಯಕ ನಾಯಕಿ ಯಾರೇ ಇರಲಿ, ಹೆಲೆನ್ ನೃತ್ಯವಂತೂ ಇರಲೇಬೇಕು! ಬೆಳಗಿನ ಆರೂವರೆಗೆ ಶುರುವಾಗುತ್ತಿದ್ದ ಅವಳ ಕೆಲಸ ರಾತ್ರಿ ಹತ್ತೂವರೆವರೆಗೂ ನಡೆಯುತ್ತಿತ್ತು. ಆಗಲೇ ಹೆಲೆನ್‌ಗೆ ಅರ್ಥವಾಗಿಹೋಗಿತ್ತು. ತನ್ನ ಉನ್ಮತ್ತ ರೂಪು, ಚೂಪುಗಲ್ಲಿನಂತೆ ಸೆಳೆಯುವ ಮಾದಕ ಕಣ್ಣುಗಳು, ಪ್ರೇಕ್ಷಕರನ್ನು ಮೋಡಿಮಾಡುವ ಅವಳ ನೃತ್ಯಭಂಗಿ ಇವೇ ಅವಳ ಆಸ್ತಿಯೆಂದು. ತನ್ನ ಅಂಗಸೌಷ್ಟವವನ್ನು ಸರಿತೂಕದಲ್ಲಿಟ್ಟಕೊಳ್ಳಲು ದಿನವೂ ಅರ್ಧಗಂಟೆ ಯೋಗ ಮಾಡುತ್ತಿದ್ದಳು. ತನ್ನ  ಆಹಾರದ ಮೇಲೂ ವಿಶೇಷ ಗಮನವಿಡುತ್ತಿದ್ದಳು. ಹೆಲೆನ್‌ಗೆ ಬುರ್ಖಾ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡಲು ಆಗುತ್ತಿದ್ದಿಲ್ಲ, ಅಭಿಮಾನಿಗಳು ಗುರುತಿಸಿ ಲಗ್ಗೆಹಾಕಿಬಿಡುತ್ತಿದ್ದರಂತೆ.

1957ರಲ್ಲಿ ಆಕೆ, ಚಿತ್ರ ನಿರ್ದೇಶಕ ಪ್ರೇಮ್‌ನಾರಾಯಣ್ ಅರೋರಾ (ಪಿ.ಎನ್.ಅರೋರಾ) ಜತೆ ಲಿವ್-ಇನ್ ಸಂಬಂಧದಲ್ಲಿದ್ದಳು. ಕೆಲವರು ಮದುವೆಯಾಗಿತ್ತು ಅನ್ನುತ್ತಾರೆ. ಪಿ.ಎನ್. ಅರೋರಾ ಹೆಲೆನ್‌ಗಿಂತ ಇಪ್ಪತ್ತೇಳು ವರ್ಷ ವಯಸ್ಸಿನಲ್ಲಿ ದೊಡ್ಡವರು. ಅದೇನೇ ಇರಲಿ ಪಿ.ಎನ್ ಅರೋರಾರಿಂದ ಅವಳಿಗೆ ಕೆಲಸಕ್ಕೇನೂ ಬರವಿರಲಿಲ್ಲ. ಆದರೆ ತೀರಾ ವ್ಯಾಮೋಹಿ, ಧನಪಿಶಾಚಿಯಾಗಿದ್ದ ಅರೋರಾ ಹೆಲೆನ್‌ಳ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡತೊಡಗಿದ್ದ. ಅವಳ ಹಣವೇ ಅವಳ ಕೈಸೇರುತ್ತಿದ್ದಿಲ್ಲ. ಪ್ರತಿಯೊಂದನ್ನೂ ತನ್ನ ಅಂಕುಶದಲ್ಲಿಟ್ಟುಕೊಂಡಿದ್ದ. ಸ್ಥಿತಿ ಎಲ್ಲಿವರೆಗೆ ಹೋಯಿತೆಂದರೆ ಕೊನೆಗೆ ಹೆಲೆನ್ ಇದ್ದ ಮನೆಯನ್ನೂ ಕೋರ್ಟ್ ಮುಟ್ಟುಗೋಲು ಹಾಕಿಕೊಂಡಿತು. ಆ ಕಷ್ಟಕಾಲದಲ್ಲಿ ಅವಳನ್ನು ಕಾಪಾಡಿದ್ದು ಸಿನೆಮಾಗಳಿಗೆ ಚಿತ್ರಕತೆ ಬರೆಯುತ್ತಿದ್ದ ಸಲೀಮ್‌ಖಾನ್. ಈಗಿನ ಬಾಲಿವುಡ್ ನಟ ಸಲ್ಮಾನ್‌ಖಾನ್ ತಂದೆ. 1973ರಲ್ಲಿ ಹೆಲೆನ್ ಪಿ.ಎನ್.ಅರೋರಾರಿಂದ ದೂರಾದಳು. ಆದರೆ ಕೈ ತಪ್ಪಿಹೋದ ಅವಳ ಅಪಾರ್ಟ್‌ಮೆಂಟಿಗಾಗಿ ಆಕೆ ಹದಿನೇಳು ವರ್ಷ ಕೋರ್ಟ್ ಕಛೇರಿ ಅಲೆದಾಡಬೇಕಾಯಿತು.

1981ರಲ್ಲಿ ಹೆಲೆನ್ ಹಾಗೂ ಸಲೀಮ್‌ಖಾನ್ ಮದುವೆಯಾದರು. ಅದಕ್ಕೂ ಮೊದಲೇ 1962ರಿಂದಲೆ ಹೆಲೆನ್, ಸಲೀಮ್ ಖಾನ್ ಜೊತೆ ‘ಕಾಬ್ಲಿ ಖಾನ್‌’, ‘ತೀಸ್‌ರೀ ಮಂಜಿಲ್‌’, ಚಿತ್ರಗಳಲ್ಲಿ ಕೆಲಸ ಮಾಡಿದ್ದಳು. ಆಗಲೇ ಸಲೀಮ್‌ಖಾನ್ ಅವಳ ಪ್ರೇಮದಲ್ಲಿ ಮನಸೋತಿದ್ದ. ವೈವಾಹಿಕ ಬದುಕಿನ ಆರಂಭದ ದಿನಗಳಲ್ಲಿ ಸಲೀಮ್‌ಖಾನ್ ಮಕ್ಕಳು ಅರ್ಬಾಜ್ ಖಾನ್, ಸೋಹೆಲ್ ಖಾನ್, ಸಲ್ಮಾನ್‌ಖಾನ್ ಮತ್ತು ಅಲ್ವೀರಾ ಈ ಸಂಬಂಧವನ್ನು ಒಪ್ಪಿಕೊಂಡಿರಲಿಲ್ಲ. ಕಾಲಕ್ರಮೇಣ ಹೆಲೆನ್ ಅವರಿಗೂ ಇಷ್ಟವಾಗಿಕುಟುಂಬದಲ್ಲಿ ಮಧುರವಾದ ಸಂಬಂಧ ಬೆಳೆಯಿತು. ಸಲೀಮ್ ಮೊದಲ ಪತ್ನಿ ಸಲ್ಮಾ ಹೃದಯಪೂರ್ವಕವಾಗಿ ಹೆಲೆನ್‌ಳನ್ನು ಒಪ್ಪಿಕೊಳ್ಳುತ್ತಾರೆ. ಇಬ್ಬರು ಹೆಂಡಿರು ಅನ್ಯೋನ್ಯವಾಗಿ ಬಾಳಿದ ಈ ಸಂಬಂಧದ ಮಾಧುರ್ಯತೆ ನಿಜವಾಗಲೂ ಅಪರೂಪದ್ದು. ಈ ವಿಷಯದಲ್ಲಿ ಹೆಲೆನ್ ಅದೃಷ್ಟವಂತೆ. ಸಲೀಂ ಖಾನ್ ಹಾಗೂ ಹೆಲೆನ್‌ರ ದತ್ತು ಪುತ್ರಿ ಅರ್ಪಿತಾಳ ಮದುವೆ ಇತ್ತೀಚೆಗಷ್ಟೇ ನಡೆದದ್ದನ್ನು ಓದಿದ್ದೇವೆ ನಾವೆಲ್ಲ.

ಒಳ್ಳೆ ಅಭಿರುಚಿ ಮತ್ತು ಬಿಂದಾಸ್

ಹೆಲೆನ್ ತನ್ನ ಹೇರ್‌ಸ್ಟೈಲ್, ಮೇಕಪ್, ಯಾವ ಬಣ್ಣದ ವಿಗ್ ಹಾಕಿಕೊಳ್ಳಬೇಕು? ಕಣ್ಣಿಗೆ ಯಾವ ಬಣ್ಣದ ಲೆನ್ಸ್‌ಬೇಕು, ಯಾವ ಡ್ಯಾನ್ಸ್‌ಗೆ ಯಾವ ವಿನ್ಯಾಸದ ಉಡುಗೆ ಬೇಕು? ಇತ್ಯಾದಿಯನ್ನು ತಾನೇ ನಿರ್ಧರಿಸುತ್ತಿದ್ದಳು ಮತ್ತು ಮೇಕಪ್ ಪರಿಕರಗಳನ್ನು ದುಬೈ, ಲಂಡನ್, ಪ್ಯಾರಿಸ್‌ಗಳಿಂದ ತಾನೇ ಶಾಪಿಂಗ್‌ಮಾಡಿಕೊಳ್ಳುತ್ತಿದ್ದಳು. ಅರವತ್ತರ ದಶಕದಲ್ಲಿ ನಟಿಯೊಬ್ಬಳು ಯೋಚಿಸಲೂ ಆಗದ ಆಧುನಿಕ ಸೆಕ್ಸಿ ಕಾಸ್ಟ್ಯೂಂಪರಿಚಯಿಸಿದ್ದೇ ಹೆಲೆನ್.ಅವಳ ಪ್ರತಿಸ್ಪರ್ಧಿಗಳಾಗಿಅವಳ ಶೈಲಿಯನ್ನು ಅನುಸರಿಸಿ ಬಂದ ಬಿಂದು, ಪದ್ಮಾ ಖನ್ನಾ, ಅರುಣಾ ಇರಾನಿ, ಕಲ್ಪನಾ ಅಯ್ಯರ್ ಕ್ಯಾಬರೆ ಕುಣಿದರೂ ಬೆಳ್ಳಿಪರದೆಯ ಮೇಲೆ ಹೆಲೆನ್ ಸೃಷ್ಟಿಸಿದ ಉನ್ಮತ್ತ ಮೋಡಿಯನ್ನೂ ಸೃಷ್ಟಿಸದೇ ಹೋದರು. ಯಾವುದೇ ಕ್ಯಾಬರೆ, ಐಟಂ ನೃತ್ಯಗಾರ್ತಿಯರ ಬದುಕು ಮೂವತ್ತರ ನಂತರ ಹೇಳಹೆಸರಿಲ್ಲವಾಗಿಬಿಡುತ್ತದೆ. ಆದರೆ ಎಪ್ಪತ್ತರ ದಶಕದವರೆಗೆ ತನ್ನ ನಲವತ್ತೆರಡನೇ ವಯಸ್ಸಿನವರೆಗೂ ಅತ್ಯಂತ ಬೇಡಿಕೆಯ ನಟಿಯಾಗಿ ಕ್ಯಾಬರೆ ಲಯಕ್ಕೆ ಕುಣಿದ ಹೆಲೆನ್ ವಿಶಿಷ್ಟವಾಗುತ್ತಾಳೆ.

ಸಲೀಮ್‌ಖಾನ್ ಜೊತೆ ಮದುವೆಯ ನಂತರ ಚಿತ್ರರಂಗದಿಂದ ಸನ್ಯಾಸವನ್ನು ಸೀಕರಿಸಿದ್ದರೂ ಹೆಲೆನ್ ಅನೇಕ ಚಿತ್ರಗಳ ಪೋಷಕ ಪಾತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ‘ಮೊಹಬ್ಬತೇ’ ನಲ್ಲಿನ ಪಾತ್ರ, ‘ಹಮ್ ದಿಲ್ ದೇ ಚುಕೇ ಸನಂ’ನಲ್ಲಿ ಸಲ್ಮಾನ್‌ಖಾನ್ ತಾಯಿಯಾಗಿ ಹೆಲೆನ್ ಮತ್ತೆ ಚಿತ್ರರಸಿಕರಿಗೆ ತಮ್ಮ ಭಾವಪೂರ್ಣ ಅಭಿನಯದ ಪರಿಚಯವನ್ನು ನೀಡಿದ್ದಾರೆ.

ಇತ್ತೀಚಿಗಿನ ಬಹುಕಾಲ ನೆನಪಲ್ಲಿ ಉಳಿಯದ ಅರ್ಥಹೀನ ಐಟಂ ಹಾಡುಗಳಿಗೆ ನರ್ತಿಸುವ ಐಟಂ ಗರ್ಲ್‌ಗಳ ಸಂತೆಯಲ್ಲಿ ಹೆಲೆನ್ ಮರೆಯಾಗಿ ಹೋದರೂ ಸುಮಾರು ಏಳುನೂರಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ತಮ್ಮ ನೃತ್ಯವನ್ನು ದಾಖಲಿಸಿದ ಹೆಲೆನ್ ಸದಾ ನೆನಪಲ್ಲಿ ಉಳಿಯುತ್ತಾರೆ. ಹಳೇ ಮಧುರವಾದ ಗೀತೆಗಳನ್ನು ಕೇಳಿದಾಗೆಲ್ಲ ಹೆಲೆನ್ ನೆನಪಾಗುತ್ತಾಳೆ. ಹೃದಯವೂ ನಲಿಯತೊಡಗುತ್ತದೆ ಹಾಡಿನ ಮಾದಕ ಸಂಗೀತದಲ್ಲಿ.

ಈಗಲೂ ಗಡಿಯಲ್ಲಿಗೋಲಿಬಾರು, ಗುಂಡಿನಸುರಿಮಳೆಯ ಸುದ್ದಿ. ದಾಳಿಗೆ ತೂತುಬಿದ್ದ ಮನೆಯ ಗೋಡೆಗಳನ್ನು ನೋಡುವಾಗ, ಸಾವಿನ ಸುದ್ದಿಯನ್ನು ಟಿವಿ ಪರದೆಯ ಮೇಲೆ ನೋಡುವಾಗ ಹೀಗೆ ಒಂದುಕಾಲಕ್ಕೆಕಾಲುನಡಿಗೆಯಲ್ಲಿ ಬರ್ಮಾ ಗಡಿಯನ್ನು ದಾಟಿ ಹಸಿವು- ಹತಾಶೆ-ದಣಿವಿನಲ್ಲಿ ಕೈಯಲ್ಲಿ ಬಿಡಿಗಾಸೂ ಇಲ್ಲದೇ ಈ ನೆಲದಲ್ಲಿ ಬದುಕನ್ನರಸಿ ಬಂದು ಪ್ರಸಿದ್ಧಿಯ ಶಿಖರದತುತ್ತತುದಿಯನ್ನೇರಿದ ಹೆಲೆನ್‌ಇನ್ನಿಲ್ಲದಂತೆ ನೆನಪಾಗುತ್ತಾರೆ. ಹೆಲೆನ್, ವಿ ಲವ್ ಯೂ… ನಿನಗೆ ನೀನೇ ಸಾಟಿ… ಬೇರಾರು ಅಲ್ಲ..!
-ಕನ್ನಡಪ್ರಭ

Write A Comment