ಮನೋರಂಜನೆ

ಕೂಲಿಯಾಗಿ ಜೀವನ ತಳ್ಳುತ್ತಿರುವ ಬಾಕ್ಸರ್: ಪದಕ ಗೆದ್ದರೂ ಹಸನಾಗದ ಬಾಳು: ಸಂಕಷ್ಟದಲ್ಲೂ ಮತ್ತೆ ಮೇಲೆಳುವ ಗೀಳು

Pinterest LinkedIn Tumblr

mrunal-boshle

ಮುಂಬೈ: ಆತ ಒಬ್ಬ ಬಾಕ್ಸರ್. ಅಷ್ಟೇ ಅಲ್ಲ ರಾಷ್ಟ್ರೀಯ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ವಿಜೇತ. ಪುಣೆಯಲ್ಲಿನ ನೆಹರೂ ಕ್ರೀಡಾಂಗಣದ ಸಿಬ್ಬಂದಿ, ಈತನನ್ನು ಕಂಡರೆ ಆತ್ಮೀಯತೆಯಿಂದಲೇ ಮಾತಾಡಿಸುತ್ತಾರೆ. ಆದರೆ, ಕ್ರೀಡಾಂಗಣದ ಹೊರಗೆ ಮಾತ್ರ ಈತನೊಬ್ಬ ಸಾಮಾನ್ಯ ಕೂಲಿಕಾರ. ಜನಸಾಮಾನ್ಯರು ಈತನನ್ನು ಗುರುತಿಸುವುದು `ಟೆಂಪೋವಾಲಾ ಅಂತ. ಇದು ಯಾವುದೇ ಲೈಮ್ ಲೈಟ್‍ಗೆ ಬಾರದ, ಯಾರೂ ಗುರುತಿಸದ, ಯಾರಿಂದಲೂ ಸಹಾಯ ಸಿಗದ ಒಬ್ಬ ಕ್ರೀಡಾಳುವಿನ ಕರುಣಾ ಜನಕ ಕಥೆಯನ್ನು ಮಿಡ್ ಡೇ ವರದಿ ಮಾಡಿದೆ. ಇವರ ಹೆಸರು ಮೃಣಾಲ್ ಭೋಸಲೆ. ಇದೇ ವರ್ಷ ಜನವರಿಯಲ್ಲಿ ನಾಗ್ಪುರದಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 64 ಕೆಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಇವರು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಆದರೆ, ಸರ್ಕಾರದ  ನಿರ್ಲಕ್ಷ್ಯಕ್ಕೊಳಗಾಗಿರುವ ಈತ ಟೆಂಪೋ ಓಡಿಸುವುದು, ತಳ್ಳುಗಾಡಿಗಳಲ್ಲಿ ಸಾಮಗ್ರಿಗಳನ್ನು ಕೊಂಡೊಯ್ಯುವುದು, ಡಿಟಿಎಚ್ ಸಂಪರ್ಕಗಳನ್ನು ಮಾರಾಟ ಮಾಡುವುದು, ಹೋರ್ಡಿಂಗ್ಸ್ ಅಥವಾ ಪೋಸ್ಟರ್ ಗಳನ್ನು ಅಂಟಿಸುವುದು ಮುಂತಾದ ಕಾಯಕಗಳಲ್ಲಿ ತೊಡಗಿಸಿಕೊಂಡು ಅದರಿಂದ ಬಂದ ಅಲ್ಪಸ್ವಲ್ಪ ಸಂಪಾದನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಕಷ್ಟದಲ್ಲೂ ಅಭ್ಯಾಸ ನಿಂತಿಲ್ಲ… ತುತ್ತಿನ ಚೀಲ ತುಂಬಿಸಿಕೊಳ್ಳಲು ಹೀಗೆ ಸಿಕ್ಕ ಕೆಲಸವನ್ನೆಲ್ಲಾ ಮಾಡುವ ಇವರು ಸಂಜೆಯಾಗುತ್ತಲೇ ಕ್ಲಬ್ ವೊಂದರಲ್ಲಿ ಮರಳು ತುಂಬಿದ ಚೀಲಕ್ಕೆ ಪಂಚ್ ಮಾಡುತ್ತಾ ಬಾಕ್ಸಿಂಗ್ ಕಲಿಯುತ್ತಾರೆ. ಅದು ಕತ್ತಲಾಗುವುದರೊಳಗೆ ಅಭ್ಯಾಸ ನಡೆಸುತ್ತಾರೆ. ಇಲ್ಲವಾದರೆ, ಅಲ್ಲಿ ಕ್ಲಬ್ ಮುಚ್ಚುತ್ತದೆ. ಆದರೂ, ಛಲ ಬಿಡದೇ ಕಲಿಯುತ್ತಿದ್ದಾರೆ. ಕೂಲಿ ಮಾಡಿ ಬದುಕು ಸಾಗಿಸುವುದು ಇವರ ಜೀವನವಾದರೆ, ಬಾಕ್ಸಿಂಗ್ ಇವರ ಅಭೀಪ್ಸೆ. ಟೆಂಪೊಗಳಲ್ಲಿ ಸಾಮಗ್ರಿಗಳನ್ನು ನಿರ್ದಿಷ್ಟ ಸ್ಥಳಗಳಿಗೆ ತಲುಪಿಸುವುದು ಇವರ ನಿತ್ಯದ ಕಾಯಕ. ಆದರೆ, ಇದು ಕೈಹಿಡಿಯುವ ಉದ್ಯೋಗವಲ್ಲ. ಕೆಲವೊಮ್ಮೆ ಬಿಡುವಿಲ್ಲದ ದುಡಿಮೆಯಾದರೆ, ಕೆಲವೊಮ್ಮೆ ಲಾಟರಿ ಹೊಡೆಯಬೇಕಾಗುತ್ತದೆ. ಟೆಂಪೋ ಚೆನ್ನಾಗಿ ಓಡಿದರೆ, ದಿನಕ್ಕೆ 200ರಿಂದ 500ರವರೆಗೆ ಕೈಗೆ ಕಾಸು ಸಿಗುತ್ತೆ. ಅದರಲ್ಲಿ ಎಷ್ಟು ಬೇಕೋ ಅಷ್ಟು ಉಳಿಸಿಕೊಂಡು ಉಳಿದಿದ್ದನ್ನು ಎತ್ತಿಡಬೇಕು. ಕೆಲಸವಿಲ್ಲದ ದಿನಗಳಲ್ಲಿ ಉಳಿಸಿದ ಹಣ ಹೊಟ್ಟೆಗೆ ಹಿಟ್ಟು ನೀಡುತ್ತದೆ ಎನ್ನುತ್ತಾರೆ  ಅವರು.

ಸಹಾಯಕ್ಕೆ ಬಂದ ಸಾಯ್

`ಮಿಡ್ ಡೇ’ಯಲ್ಲಿ ವರದಿ ಬಂದ ಮೇಲೆ ಎಚ್ಚೆತ್ತುಕೊಂಡ ರಾಷ್ಟ್ರೀಯಕ್ರೀಡಾ ಪ್ರಾಧಿ ಕಾರ (ಸಾಯ್) ಈತನಿಗೆ ತನ್ನ ತರಬೇತಿ ಕೇಂದ್ರಗಳಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡಿದೆ. ಅಲ್ಲದೆ, ಒಂದು ವರ್ಷದ ಡಿಪ್ಲಮಾ ತರಬೇತಿ ನೀಡಲು ಮುಂದಾಗಿದೆ. ಈ ಕೋರ್ಸ್ ಮುಗಿದಮೇಲೆ ಆತನಿಗೆ ಅಲ್ಲೇ ಕೋಚ್ ಆಗಿ ಕೆಲಸ ನೀಡುವ ಚಿಂತನೆಯನ್ನೂ ಸಾಯ್ ಹೊಂದಿದೆ. ಆದರೆ, ಮೃಣಾಲ್ ಅವರಿಗೆ ಕೋಚ್ ಆಗುವುದಕ್ಕಿಂತ ಓರ್ವ ಚಾಂಪಿಯನ್ ಆಗಬೇಕೆನ್ನುವ ಕನಸಿದೆ. ಮತ್ತೆ ರಾಷ್ಟ್ರಮಟ್ಟದಲ್ಲಿ ಮಿಂಚಬೇಕು. ಹಲವಾರು ಬಂಗಾರದ ಪದಕಗಳನ್ನು ಗೆಲ್ಲಬೇಕು ಎನ್ನುವ ಛಲವಿದೆ. ಆದರೆ, ಸದ್ಯಕ್ಕೆ ಆ ಬಗ್ಗೆ ಯೋಚಿಸುವ ಹಾಗೂ ಇಲ್ಲ. ಏಕೆಂದರೆ,ತಜ್ಞರ ಸಲಹೆಯಂತೆ ಅವರು ನಿರ್ದಿಷ್ಠ ಮಾದರಿಯ ಪೌಷ್ಠಿಕ ಆಹಾರ ಸೇವಿಸುವ ಶಕ್ತಿಯಿಲ್ಲ. ಬರೀ ಇಷ್ಟೇ ಅಲ್ಲ. ಯಾವುದೇ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕೆಂದರೂ ಟೂರ್ನಿ ನಡೆಯುವ ಊರಿಗೆ ತೆರಳಲು, ಅಲ್ಲಿ ಊಟದ ವ್ಯವಸ್ಥೆ ಮಾಡಿಕೊಳ್ಳಲೂ ಹಣಕಾಸು ಅಡಚಣೆಯಿದೆ. ಹಾಗಾಗಿ, ಸಾಯ್ ನೀಡಿರುವ ಒಂದೇ ಸಹಾಯದ ಹುಲ್ಲುಕಡ್ಡಿಯನ್ನೇ ಬಳಸಿಕೊಂಡು ಜೀವನ ಪ್ರವಾಹದಿಂದ ಪಾರಾಗಲು ಯತ್ನಿಸುತ್ತಿದ್ದಾರೆ ಅವರು.

Write A Comment