ಮನೋರಂಜನೆ

ಕೃಷ್ಣಲೀಲಾ ಚಿತ್ರ ವಿಮರ್ಶೆ: ಸಾಲ, ಮೊಬೈಲ್, ಕುಡಿತದ ಜೊತೆ ಪ್ರೇಮಕಥೆ

Pinterest LinkedIn Tumblr

13krishana

ಬೆಂಗಳೂರು: ಇಂದಿನ ಚಟಗಳಾದ ಸಾಲ, ಮೊಬೈಲ್ ಮತ್ತು ಕುಡಿತದ ವಿಷಯವನ್ನು ಮಧ್ಯಮವರ್ಗದ ಕುಟುಂಬದ ಯುವಕ ಯುವತಿಯ ಪ್ರೇಮ ಕಥೆಯ ಜೊತೆಜೊತೆಯಲ್ಲೇ ಹೊಸೆದು ಈ ರೊಮ್ಯಾಂಟಿಕ್ ಹಾಸ್ಯದ ಮಾಸ್ ಸಿನೆಮಾವನ್ನು ಯುಗಾದಿಯ ಮನರಂಜನೆಗೆ ನೀಡಿದ್ದಾರೆ ಶಶಾಂಕ್. ಯಾವುದೇ ಹಿಟ್ ಸ್ವಮೇಕುಗಳಿಲ್ಲದೆ ಕುಂಟುತ್ತಾ ಸಾಗುತ್ತಿದ್ದ ಕನ್ನಡ ಚಿತ್ರರಂಗಕ್ಕೆ ತುಸು ಚುರುಕು ನೀಡಲಿದೆಯೇ ಕೃಷ್ಣ ಲೀಲಾ?

ಕೃಷ್ಣ (ಅಜಯ್ ರಾವ್) ಟ್ಯಾಕ್ಸಿ ಚಾಲಕ. ಮನೆಯಲ್ಲಿ ಅಕ್ಕನ ಮದುವೆಯ ದಿನವೇ ಮದುವೆಗೆಂದೇ ಮಾಡಿಸಿದ ಚಿನ್ನದ ಸರವನ್ನು ಅಡವಿಟ್ಟು ಬಾರಿನಲ್ಲಿ ಕೂರುವ ಅಪ್ಪ (ಅಚ್ಯುತ ರಾವ್). ಮಧ್ಯಮ ವರ್ಗದ ಈ ಕುಟುಂಬಕ್ಕೆ ದುಡಿಯುವವನು ಕೃಷ್ಣ ಒಬ್ಬನೇ. ಮೈತುಂಬಾ ಸಾಲ. ಜೀವನದ ಮೇಲೆ ಹತಾಶೆ. ಲೀಲಾ(ಮಯೂರಿ) ಕಾಲೇಜು ಹುಡುಗಿ. ಮತ್ತೊಂದು ಮಧ್ಯಮವರ್ಗದ ಮನೆ. ಅಪ್ಪ ಕುಡುಕನಲ್ಲ. ಆದರೆ ಕುಡಿಯದೇ ಯಾವಾಗಲು ಹೆಂಡತಿ-ಮಗಳನ್ನು ಅವಾಚ್ಯವಾಗಿ ಬೈಯ್ಯುತ್ತಲೇ ಇರುತ್ತಾನೆ. ಒಮ್ಮೆ ಲೀಲಾಗೆ ರಂಗೋಲಿ ಸ್ಪರ್ಧೆಯಲ್ಲಿ ಬಹುಮಾನವಾಗಿ ಮೊಬೈಲ್ ಫೋನ್  ದೊರೆಯುತ್ತದೆ. ತನ್ನ ಗೆಳತಿಯ ಸಲಹೆಯಂತೆ ಮೊಬೈಲ್ ಫೋನಿಗೆ ಕರೆನ್ಸಿ ಹಾಕಿಸಲು ಅನಾಮಧೇಯ ಕರೆ ಮಾಡಿ, ಕೃಷ್ಣನೊಂದಿಗೆ ಗೆಳೆತನ ಬೆಳೆಯುತ್ತದೆ. ಈ ಮಧ್ಯೆ ಕೃಷ್ಣ ಮತ್ತು ಅವನ ತಂಗಿಗೆ ಒಂದೇ ಕುಟುಂಬದಲ್ಲಿ ಮದುವೆ ಏರ್ಪಾಡಾಗುತ್ತದೆ. ಇದನ್ನು ಲೀಲಾಗೆ ಕೂಡ ತಿಳಿಸಲು ಕೃಷ್ಣ ಮುಂದಾಗುತ್ತಾನೆ. ಲೀಲಾ ಜೊತೆ ಕೃಷ್ಣ ದೂರವಾಣಿ ಸಂಭಾಷಣೆಯಲ್ಲಿರುವಾಗ, ತಂದೆ ಫೋನ್ ಕಿತ್ತುಕೊಂಡು ತನ್ನ ಮೇಲೆ ಹಲ್ಲೆ ಮಾಡುವದರಿಂದ ಅವಳು ಮನೆ ಬಿಟ್ಟು ಓಡಿಹೋಗುತ್ತಾಳೆ. ಲೀಲಾ ತಂದೆ ಕೃಷ್ಣನ ನಂಬರ್ ಹಿಡಿದು ಪೊಲೀಸ್ ಗೆ ದೂರು ನೀಡುತ್ತಾನೆ. ಮುಂದೇನಾಗುತ್ತದೆ?

ಬಹಳ ದಿನಗಳ ನಂತರ ಮಧ್ಯಮವರ್ಗದ ಕುಟುಂಬದ-ಯುವಕರ ಕಥೆಯನ್ನು ಕನ್ನಡ ಸಿನೆಮಾದ ಮುನ್ನಲೆಗೆ ಬಂದಿರುವುದು ಸಂತಸದ ವಿಷಯ. ಇಂದು ಯುವ ಜನರಿಗೆ-ಮಧ್ಯಮವರ್ಗವರಿಗೆ ಚಟವಾಗಿರುವ ಮೊಬೈಲ್ ಫೋನ್, ಸಾಲ ಮತ್ತು ಕುಡಿತದ ವಸ್ತುವನ್ನು ಪ್ರಧಾನವಾಗಿಟ್ಟುಕೊಂಡು ನವಿರಾದ ಪ್ರೇಮಕಥೆಯೊಂದನ್ನು ಶಶಾಂಕ್ ಹೊಸೆದಿದ್ದಾರೆ. ಚುರುಕಾಗಿ ಸಾಗುವ ಚಿತ್ರ ಬೋರು ಹೊಡೆಸದೆ ಅಲ್ಲಲ್ಲಿ ಕಚಗುಳಿ ನೀಡುತ್ತಾ ಸಾಗುತ್ತದೆ. ಚಿತ್ರಗೀತೆಗಳು ಕ್ಲಾಸಿಕ್ ಅಲ್ಲದೆ ಹೋದರು ಚಿತ್ರದ ಜೊತೆ ಮಿಳಿತವಾಗಿವೆ. ಶ್ರೀಧರ್ ವಿ ಸಂಭ್ರಮ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಮೊಬೈಲ್ ಫೋನಿನ ಅವಾಂತರಗಳನ್ನು “ಮಾತಾಡ್ರೊ” ಹಾಡಿನಲ್ಲಿ ಸೊಗಸಾಗಿ ದೃಶ್ಯದ ಮೂಲಕ ಕಟ್ಟಿಕೊಡುತ್ತಾರೆ. ನಟನೆಯ ಪಕ್ವತೆ-ನಿರ್ದೇಶಕನ ಕುಸುರಿ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿರುವುದೇ ಚಿತ್ರದ ಹೈಲೈಟ್. ಅಜಯ್ ರಾವ್ ತಮ್ಮ ನಟನೆಯನ್ನು ಇನ್ನು ಉತ್ತಮಪಡಿಸಿಕೊಂಡಿದ್ದಾರೆ, ಕಿರುತೆರೆಯ ಜನಪ್ರಿಯ ನಟಿ ಮಯೂರಿ ತಮ್ಮ ಮೊದಲನೇ ಚಿತ್ರದಲ್ಲಿಯೇ ಲೀಲಾಜಾಲವಾಗಿ ನಟಿಸಿ ಗಮನ ಸೆಳೆಯುತ್ತಾರೆ. ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ಅವರನ್ನು ಸಶಕ್ತವಾಗಿ ಬಳಸಿಕೊಂಡಿರುವುದು ನಿರ್ದೇಶಕನ ಜಾಣ್ಮೆ. ಇನ್ನುಳಿದ ಪೋಷಕ ವರ್ಗದ ನಟನೆಯೂ ಉತ್ತಮವಾಗಿದೆ. ಅಜಯ್ ರಾವ್ ಪರಿಚಯದ ಹಾಡು ಮತ್ತು ಅವರು ಮಾಡುವ ಒಂದು ಫೈಟ್ ಅನವಶ್ಯಕ ಎಂದೆನಿಸುತ್ತದೆ. ಇವುಗಳನ್ನು ಹೊರಗಿಡಬಹುದಿತ್ತು. ದೃಶ್ಯಾವಳಿಗಳು-ಘಟನೆಗಳು ಕೆಲವೊಮ್ಮೆ ಅತಿ ಬೇಗನೆ ಮುಗಿದು ನಿರಂತರತೆ ಇಲ್ಲದೆ ಬೇರೆ ದೃಶ್ಯಕ್ಕೆ ಹಾರಿಬಿಡುವುದು ಕೆಲವೊಮ್ಮೆ ಕಸಿವಿಸಿ ಮೂಡಿಸುತ್ತದೆ. ಒಟ್ಟಿನಲ್ಲಿ ಮನರಂಜನೆಯ ದೃಷ್ಟಿಯಿಂದ ಶಶಾಂಕ್ ಒಳ್ಳೆಯ ಚಿತ್ರವೊಂದನ್ನು ನೀಡಿದ್ದಾರೆ.

ಕನ್ನಡ ಚಿತ್ರೋದ್ಯಮದಿಂದ ಕಾಣೆಯಾಗಿದ್ದ ಓಣಿಗಳು, ಸಣ್ಣ ಮನೆಗಳು-ಕೋಣೆಗಳು, ದಿವಾನದ ಹಾಸಿಗೆಯ ಮೇಲೆ ಮಲಗುವ, ಕೆಳಗೆ ಕೂತು ಊಟ ಮಾಡುವ, ಮುದ್ದೆ ಉಣ್ಣುವ ದೃಶ್ಯಗಳನ್ನು ಮರುಕಳಿಸಿರುವುದು ಶಶಾಂಕ್ ಅವರ ಸಿದ್ಧತೆ, ಜಾಣ್ಮೆ ಮತ್ತು ಬದ್ಧತೆ ತೋರಿಸುತ್ತದೆ. ಆದರೆ ಹೀಗೆ ಮಧ್ಯಮ ವರ್ಗದ ಕಥೆಯೊಂದನ್ನು ತೆರೆಗೆ ತಂದಾಗ ಮಧ್ಯಮವರ್ಗದ ಪೂರ್ವಾಗ್ರಹಗಳು ಕೂಡ ಸೇರಿಕೊಂಡುಬಿಡುತ್ತವೆ. ಅಂತಹವುಗಳನ್ನು ಆದಷ್ಟು ಸೂಕ್ಷ್ಮತೆಯಿಂದ ಹ್ಯಾಂಡಲ್ ಮಾಡಬೇಕಾಗುತ್ತದೆ. ಆ ಸೂಕ್ಷ್ಮತೆ ಕುಡಿತದ ಬಗ್ಗೆ ನಿರ್ದೇಶಕರು ತೋರಿಸಿದ್ದಾರೆ ಎಂದೆನಿಸುತ್ತದೆ. ಆದರೆ ಗಂಡಿನ ಜೀವನವನ್ನು ಹಾಳು ಮಾಡಲು ಹೆಣ್ಣೆ ಕಾರಣ ಎಂಬ ಪೂರ್ವಾಗ್ರಹಗಳನ್ನು ಎತ್ತಿ ಹಿಡಿಯುವ ಒಂದು ದೃಶ್ಯ, ‘ಹೆಣ್ಣಿಗಿಂತ ಕುಡಿತವೇ ವಾಸಿ’ ಎಂಬ ಹಾಡಿನ ಒಂದು ಸಾಲು ಜನರಿಗೆ ತಪ್ಪು ಸಂದೇಶ ರವಾನಿಸುವ ಸಾಧ್ಯತೆ ಇದೆ. ಇವುಗಳನ್ನು ಹೊರತುಪಡಿಸಿದರೆ ಒಟ್ಟಿನಲ್ಲಿ ಜೀವನದಲ್ಲಿ ಮೂಡುವ ಹತಾಶೆ ಜೀವನದ ಬಗ್ಗೆ ಪ್ರೀತಿಯನ್ನೂ ಹುಟ್ಟಿಸುತ್ತದೆ ಎಂಬ ಧೀಮಂತರೊಬ್ಬರ ಮಾತನ್ನು ನೆನಪಿಸುವಂತಹ ಈ ಸಿನೆಮಾವನ್ನು ಒಮ್ಮೆ ನೋಡಿ.

– ಗುರುಪ್ರಸಾದ್

Write A Comment