ಮನೋರಂಜನೆ

ಲಿವರ್‌ಪೂಲ್ ಕ್ಲಬ್‌ಗೆ ಗೆರಾರ್ಡ್ ವಿದಾಯ

Pinterest LinkedIn Tumblr

garaldಲಂಡನ್, ಜ.2: ಲಿವರ್‌ಪೂಲ್ ಫುಟ್ಬಾಲ್ ಕ್ಲಬ್ ತಂಡದ ನಾಯಕ ಸ್ಟೀವನ್ ಗೆರಾರ್ಡ್ 2014-15 ಋತುವಿನ ಅಂತ್ಯದಲ್ಲಿ ಕ್ಲಬನ್ನು ತೊರೆಯಲು ನಿರ್ಧರಿಸಿದ್ದಾರೆ. ಲಿವರ್‌ಪೂಲ್‌ನ ಹೊಸ ಗುತ್ತಿಗೆಯ ಆಫರನ್ನು ಒಪ್ಪಿಕೊಳ್ಳದಿರಲು ನಿರ್ಧರಿಸಿರುವ 34ರ ಹರೆಯದ ಮಿಡ್‌ಫೀಲ್ಡರ್ ಗೆರಾರ್ಡ್ ಋತುವಿನ ಮಧ್ಯದಲ್ಲೇ ಕ್ಲಬನ್ನು ತೊರೆಯುವುದಾಗಿ ಘೋಷಿಸಿದ್ದಾರೆ.

ಗೆರಾರ್ಡ್ 2014ರ ಫುಟ್ಬಾಲ್ ವಿಶ್ವಕಪ್‌ನ ವೇಳೆ ಇಂಗ್ಲೆಂಡ್ ಫುಟ್ಬಾಲ್ ತಂಡದಿಂದ ನಿವೃತ್ತಿಯಾಗಿದ್ದರು. ಇದೀಗ ದೇಶಿಯ ಕ್ಲಬ್‌ನಿಂದಲೂ ಮುಕ್ತರಾಗಿರುವ ಗೆರಾರ್ಡ್ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ‘‘ನಾನು ಫುಟ್ಬಾಲ್ ಆಡುವುದನ್ನು ಮುಂದುವರಿಸುವೆ. ನಾನು ಯಾವ ಕ್ಲಬ್‌ನಲ್ಲಿರುತ್ತೇನೆ ಎಂದು ಈಗ ಖಚಿತಪಡಿಸುವ ಸ್ಥಿತಿಯಲ್ಲಿಲ್ಲ. ಆದರೆ, ಪ್ರಮುಖ ಕ್ಲಬ್‌ನಲ್ಲಿ ಆಡುವುದಿಲ್ಲ. ನನ್ನ ವೃತ್ತಿಜೀವನ ಕೊನೆ ಹಂತದಲ್ಲಿರುವುದಕ್ಕೆ ಬೇಸರವಿಲ್ಲ’’ ಎಂದು ಲಿವರ್‌ಪೂಲ್‌ನ ಶ್ರೇಷ್ಠ ಆಟಗಾರ ಹಾಗೂ 2014ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದ ಗೆರಾರ್ಡ್ ಹೇಳಿದ್ದಾರೆ.

‘‘ಕ್ಲಬನ್ನು ತೊರೆಯುವ ನಿರ್ಧಾರ ನನ್ನ ಜೀವನದ ತ್ರಾಸದಾಯಕ ಕ್ಷಣ. ಮುಂದೊಂದು ದಿನ ಲಿವರ್‌ಪೂಲ್ ಕ್ಲಬ್‌ಗೆ ಯಾವುದಾದರೂ ಪಾತ್ರದಲ್ಲಿ ಮರಳುವ ವಿಶ್ವಾಸ ನನಗಿದೆ. ಕೊನೆಯ ಪಂದ್ಯದ ತನಕ ಕ್ಲಬ್‌ಗೆ ಬದ್ಧನಾಗಿರುತ್ತೇನೆ. ಅಭಿಮಾನಿಗಳನ್ನು ಆಟಗಾರನಾಗಿ ಹಾಗೂ ನಾಯಕನಾಗಿ ಪ್ರತಿನಿಧಿಸಿದ್ದು ನನ್ನ ಭಾಗ್ಯ. ನಾನು ಪ್ರತಿ ಸೆಕೆಂಡನ್ನು ಆನಂದಿಸಿದ್ದೇನೆ. ಲಿವರ್‌ಪೂಲ್ ವೃತ್ತಿಜೀವನವನ್ನು ಧನಾತ್ಮಕವಾಗಿ ಕೊನೆಗೊಳಿಸುವ ವಿಶ್ವಾಸ ನನಗಿದೆ’’ ಎಂದು ಗೆರಾರ್ಡ್ ಹೇಳಿದರು. ಗೆರಾಲ್ಡ್ ಆರರ ಹರೆಯದಲ್ಲಿ ಲಿವರ್‌ಪೂಲ್ ಕ್ಲಬ್ ಅಕಾಡಮಿಗೆ ಸೇರ್ಪಡೆಯಾಗಿದ್ದರು. 14 ವರ್ಷಗಳ ಕಾಲ ಇಂಗ್ಲೆಂಡ್ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದರು.

ಲಿವರ್‌ಪೂಲ್ ಕ್ಲಬ್‌ನಲ್ಲಿ 695 ಪಂದ್ಯಗಳನ್ನು ಆಡಿರುವ ಗೆರಾರ್ಡ್ 180 ಗೋಲುಗಳನ್ನು ಬಾರಿಸಿದ್ದಾರೆ. ಚಾಂಪಿಯನ್ಸ್ ಲೀಗ್, ಯುಇಎಫ್‌ಎ ಕಪ್, ಎಫ್‌ಎ ಕಪ್ ಹಾಗೂ ಲೀಗ್ ಕಪನ್ನು ಜಯಿಸಿದ್ದಾರೆ. ಕಳೆದ 17 ವರ್ಷಗಳಿಂದ ಲಿವರ್‌ಪೂಲ್‌ನಲ್ಲಿ ಆಡಿರುವ ಗೆರಾರ್ಡ್ 12 ವರ್ಷಗಳಿಂದ ತಂಡದ ನಾಯಕನಾಗಿದ್ದು ಅವರಿಗೆ ಪ್ರೀಮಿಯರ್ ಲೀಗನ್ನು ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ವರ್ಷ ಟ್ರೋಫಿಯ ಸನಿಹಕ್ಕೆ ತೆರಳಿದ್ದ ಲಿವರ್‌ಪೂಲ್ ತಂಡ ಕೊನೆಯ ಹಂತದಲ್ಲಿ ಕುಸಿತ ಕಂಡು 8ನೆ ಸ್ಥಾನಪಡೆದಿತ್ತು.

Write A Comment