ಮನೋರಂಜನೆ

“ಖುಷಿ ಖುಷಿಯಾಗಿ” ಸಿನಿಮಾ: ಹೊಸ ವರ್ಷಕ್ಕೆ ಗಣೇಶ್‌ ‘ನಗೆಯ ಕೊಡುಗೆ’

Pinterest LinkedIn Tumblr

kk3

ಜನವರಿ 1 2015 ವರ್ಷದ ಮೊದಲ ದಿನ. ನ್ಯೂ ಯಿಯರ್ ಸೆಲೆಬ್ರೇಟ್ ಮಾಡಲು ಸಿನಿಮಾಗೆ ಹೋಗುವ ಪ್ಲಾನ್ ಮಾಡಿದವರಿಗೆ ಹೊಸ ಸಿನಿಮಾ ರೆಡಿಯಾಗಿದೆ. ಗಣೇಶ್ ಹೊಸ ವರ್ಷದ ಮೊದಲ ದಿನ ಎಲ್ಲರನ್ನೂ ನಗಿಸಲು ಖುಷಿ ಖುಷಿಯಾಗಿ ತೆರೆ ಮೇಲೆ ಬರುತ್ತಿದ್ದಾರೆ.

ಸಾಮಾನ್ಯವಾಗಿ ಜನವರಿ ಮೊದಲ ದಿನ ಹೊಸ ಸಿನಿಮಾಗಳು ತೆರೆಗೆ ಬರುವುದು ತೀರಾ ಕಡಿಮೆ. ಆದರೆ ಖುಷಿ ಖುಷಿಯಾಗಿ ಸಿನಿಮಾ ವರ್ಷದ ಮೊದಲ ದಿನವೇ ತೆರೆಗೆ ಬರುತ್ತಿದೆ. ಸಿನಿಮಾದ ಹೆಸರೇ ಹೇಳುವ ಹಾಗೆ ಖುಷಿ ಖುಷಿಯಾದ ಸಿನಿಮಾ. ಪಕ್ಕಾ ಎಂಟರ್‌ಟೇಯ್ನರ್ ಸಿನಿಮಾ. ಗಣೇಶ್ ಹಾಗೂ ಅಮೂಲ್ಯ ಕಾಂಬಿನೇಷನ್‌ನ ಮೂರನೇ ಸಿನಿಮಾ. ಯೋಗಿ ರಾಜ್ ನಿರ್ದೇಶನದ ಮೊದಲ ಸಿನಿಮಾ.

ತೆಲುಗಿನ ‘ಗುಂಡೆ ಜಾರಿ ಗಲ್ಲಂತಾಯಿಂದೆ’ ಸಿನಿಮಾದ ರಿಮೇಕ್ ಆಗಿರುವ ಖುಷಿ ಖುಷಿಯಾಗಿ ಸಿನಿಮಾ ಪಕ್ಕಾ ಕಲರ್ ಫುಲ್ ಸಿನಿಮಾ ಅಂತಾರೆ ನಿರ್ದೇಶಕ ಯೋಗಿ. ‘ಸಿನಿಮಾ ರಿಮೇಕ್ ಆದರೂ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸಿನಿಮಾ ಮಾಡಿದ್ದೇನೆ. ಕಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಯಾಕೆಂದರೆ ಈಗಾಗಲೇ ಗೆದ್ದಿರುವ ಕಥೆಯನ್ನು ಮತ್ತೆ ಚೇಂಜ್ ಮಾಡಿದರೆ ಅರ್ಥವಿಲ್ಲ. ಹೀಗಾಗಿ ನೇಟಿವಿಗೆ ತಕ್ಕಂತೆ, ಬದಲಾಯಿಸಬಹುದಾದ ಅಂಶಗಳನ್ನು ಮಾತ್ರ ಬದಲಾಯಿಸಿದ್ದೇನೆ’ ಎನ್ನುತ್ತಾರೆ.

ಅಂದಹಾಗೆ ಯೋಗಿಗೆ 2015 ತುಂಬ ಎಗ್ಸೈಟಿಂಗ್ ಆಗಿದೆಯಂತೆ. ಕಾರಣ ಅವರ ಮೊದಲ ನಿರ್ದೇಶನದ ಸಿನಿಮಾ ತೆರೆಗೆ ಬರುತ್ತಿರುವುದು. ‘ಇದು ನನ್ನ ಮೊದಲ ನಿರ್ದೇಶನದ ಚಿತ್ರ. 2015ರಲ್ಲಿ ನಿರ್ದೇಶನ ಮಾಡಬೇಕು ಅನ್ನುವ ಯೋಜನೆ ಇತ್ತು. ಆದರೆ ಎಲ್ಲವೂ ತಾನೇ ತಾನಾಗಿ ಆಯಿತು. ಗಣೇಶ್, ಗುಂಡೆ ಜಾರಿ ಗಲ್ಲಂತಾಯಿಂದೆ ಸಿನಿಮಾವನ್ನು ನಿರ್ದೇಶನ ಮಾಡು ಎಂದಾಗ, ಎರಡನೇ ಯೋಚನೆ ಮಾಡದೇ ಒಪ್ಪಿಕೊಂಡೆ. ನಿರ್ಮಾಪಕರಿಂದ ಹಿಡಿದು, ನಾಯಕ ನಾಯಕಿಯವರೆಗೆ ಚಿತ್ರವನ್ನು ಚೆನ್ನಾಗಿ ಮಾಡಲು ಒಳ್ಳೆ ಟೀಮ್ ಸಿಕ್ಕಿತು. ಈ ಚಿತ್ರವನ್ನು ಯಾರೇ ನೋಡಲಿ ಖುಷಿಖುಷಿಯಿಂದಲೇ ಚಿತ್ರಮಂದಿರದಿಂದ ಹೊರ ಬರುತ್ತಾರೆ’ ಎನ್ನುತ್ತಾರೆ ಯೋಗಿ.

ಯೋಗಿ ಮೂಲತಃ ಕಾಸ್ಟ್ಯೂಮ್ ಡಿಸೈನರ್. ಹೀಗಾಗಿ ಸಿನಿಮಾವನ್ನು ಅಷ್ಟೇ ಕಲರ್ ಫುಲ್ ಆಗಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರಂತೆ. ‘ಅಮೂಲ್ಯಾರಿಗೆ ಈ ಹಿಂದೆ ಗಜ ಕೇಸರಿ ಸಿನಿಮಾದಲ್ಲಿ ನಾನೇ ಹೊಸ ಇಮೇಜ್ ಕೊಟ್ಟಿದ್ದೆ. ಈ ಸಿನಿಮಾದಲ್ಲೂ ನನ್ನ ನಾಯಕ ನಾಯಕಿಯನ್ನು ಅಷ್ಟೇ ನೀಟಾಗಿ, ಕಲರ್‌ಫುಲ್ ಆಗಿ ತೋರಿಸಿದ್ದೇನೆ. ಖುಷಿ ಖುಷಿಯಾಗಿ ಸಿನಿಮಾ ರಿಮೇಕ್ ಆದರೂ ಫ್ರೆಶ್ ಫೀಲ್ ಕೊಡುವಂತೆ ಮಾಡಿದ್ದೇನೆ. ಎಲ್ಲೂ ಸಿನಿಮಾ ಬೋರ್ ಹೊಡೆಯೋದಿಲ್ಲ. ಸಿನಿಮಾದಲ್ಲಿ ಭರಪೂರ ಕಾಮಿಡಿ ಇದೆ’ ಎಂದು ಚಿತ್ರದ ಬಗ್ಗೆ ಭರವಸೆ ನೀಡುತ್ತಾರೆ.

ಕಳೆದ ವರ್ಷ ಕೇವಲ ಒಂದು ಸಿನಿಮಾಗೆ ತೃಪ್ತಿ ಪಟ್ಟುಕೊಂಡಿದ್ದ ಗಣೇಶ್ ಈ ಬಾರಿ, ಹೊಸ ವರ್ಷವನ್ನು ಖುಷಿ ಖುಷಿಯಿಂದ ಆರಂಭಿಸಿಸುತ್ತಿದ್ದಾರೆ. ತಮ್ಮ ಅಭಿಮಾನಿಗಳಿಗೆ ನಗೆಯ ರಸದೌತಣ ನೀಡುವ ಖುಷಿಯಲ್ಲಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಗಣೇಶ್, ‘ಕಳೆದ ವರ್ಷ ಒಂದು ಸಿನಿಮಾ ಬಿಟ್ಟರೆ ಬೇರೆ ಯಾವ ಸಿನಿಮಾವೂ ತೆರೆಗೆ ಬಂದಿಲ್ಲ. ನನ್ನ ನಟನೆಯ ಸಿನಿಮಾ ರಿಲೀಸ್ ಆಗಲೇ ಇಲ್ಲ ಅಂತಾನೆ ಭಾವಿಸಿದ್ದೇನೆ. ಆದರೆ ಈ ಬಾರಿ ಹೊಸ ವರ್ಷವನ್ನು ಖುಷಿ ಖುಷಿಯಾಗಿ ಆರಂಭಿಸುತ್ತಿದ್ದೇನೆ. ವರ್ಷದ ಮೊದಲ ದಿನವೇ ನನ್ನ ಸಿನಿಮಾ ರಿಲೀಸ್ ಆಗುತ್ತಿದೆ. ನನ್ನ ಅಭಿಮಾನಿಗಳಿಗೂ ಸಿನಿಮಾ ತುಂಬಾ ಇಷ್ಟವಾಗುತ್ತದೆ. ಯಾಕೆಂದರೆ ಸಿನಿಮಾದಲ್ಲಿ ಅವರು ನಿರೀಕ್ಷಿಸುವ ಕಾಮಿಡಿ ಸಖತ್ತಾಗಿದೆ. ಲವ್ ಇದೆ. ಹಾಡುಗಳು ಕೂಡ ಅಷ್ಟೇ ಮಜವಾಗಿವೆ. ಹೀಗಾಗಿ ಖುಷಿ ಖುಷಿಯಾಗಿ ಸಿನಿಮಾ ನಮ್ಮ ತಂಡಕ್ಕೆ ಮಾತ್ರವಲ್ಲ, ಸಿನಿಪ್ರಿಯರೆಲ್ಲರಿಗೂ ಹೊಸ ವರ್ಷಕ್ಕೆ ನನ್ನ ಕಡೆಯಿಂದ ಸಿನಿಮಾ ಪ್ರಿಯರಿಗೆ ಕೊಡುತ್ತಿರುವ ಗಿಫ್ಟ್’ ಎನ್ನುತ್ತಾರೆ ಗಣೇಶ್.

Write A Comment