ಮನೋರಂಜನೆ

ಇಂದಿನಿಂದ ಬಾಕ್ಸಿಂಗ್ ಡೇ ಟೆಸ್ಟ್: ಸರಣಿ ಸೋಲು ತಪ್ಪಿಸಲು ಭಾರತದ ಹೋರಾಟ

Pinterest LinkedIn Tumblr

DHONI-SMITH

ಮೆಲ್ಬೋರ್ನ್,ಡಿ.25: ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಮೂರನೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಗೆಲುವಿಗಾಗಿ ಹೋರಾಟ ನಡೆಸಲಿದೆ.

ನಾಲ್ಕು ಟೆಸ್ಟ್‌ಗಳ ಸರಣಿಯ ಮೂರನೆ ಪಂದ್ಯದಲ್ಲಿ ಭಾರತ ಸೋತರೆ ಅಥವಾ ಡ್ರಾಗೊಳಿಸಿದರೆ ಆಸ್ಟ್ರೇಲಿಯಕ್ಕೆ ಸರಣಿ ಜಯ ಒಲಿಯಲಿದೆ. ಈ ಕಾರಣದಿಂದಾಗಿ ಭಾರತ ಸರಣಿ ಸೋಲನ್ನು ತಪ್ಪಿಸಲು ಅಂತಿಮ ಎರಡು ಪಂದ್ಯಗಳಲ್ಲ್ಲಿ ಜಯ ಗಳಿಸಬೇಕಾಗಿದೆ.

ಭಾರತ ಮೊದಲ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸುವ ಎಲ್ಲ್ಲಾ ಅವಕಾಶ ಇತ್ತು. ಆದರೆ ಬ್ಯಾಟಿಂಗ್ ದೌರ್ಬಲ್ಯದಿಂದಾಗಿ ಸೋಲು ಅನುಭವಿಸಿತ್ತು. ಎರಡನೆ ಟೆಸ್ಟ್‌ನ ಆರಂಭದಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ಸೂಚನೆ ನೀಡಿತ್ತು. 6 ವಿಕೆಟ್ ನಷ್ಟದಲ್ಲಿ 247 ರನ್ ಮಾಡಿದ್ದ ಆಸ್ಟ್ರೇಲಿಯ ತಂಡ ಬಳಿಕ 505 ರನ್ ಕಲೆ ಹಾಕಿತ್ತು. ಮಿಚೆಲ್ ಜಾನ್ಸನ್ ಔಟಾಗದೆ 88 ರನ್ ಗಳಿಸಿ ಆಸ್ಟ್ರೇಲಿಯ ತಂಡವನ್ನು ಕಷ್ಟದಿಂದ ಪಾರು ಮಾಡಿದ್ದರು.

ಎರಡನೆ ಟೆಸ್ಟ್ ಕಳೆದುಕೊಂಡ ಬಳಿಕ ಭಾರತದ ಉಪನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ದಾಂಡಿಗ ಶಿಖರ್ ಧವನ್ ನಡುವಿನ ಜಗಳದಿಂದಾಗಿ ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿ ಅಶಾಂತಿ ಉಂಟಾಗಿದೆ. ಆದರೆ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದಾರೆ. ಇಂತಹ ವಿಚಾರಗಳನ್ನು ಟೀಮ್ ಇಂಡಿಯಾದ ಆಟಗಾರರು ಬದಿಗೊತ್ತಿ ಮೂರನೆ ಟೆಸ್ಟ್‌ನಲ್ಲಿ ಗೆಲ್ಲಲು ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ.

ಆಸ್ಟ್ರೇಲಿಯ ತಂಡ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಅದು ಒತ್ತಡದಿಂದ ದೂರವಾಗಿದೆ. ಕ್ರಿಸ್ಮಸ್ ಆಚರಣೆಯ ಬಳಿಕ ಎಂಸಿಜಿ ಸ್ಟೇಡಿಯಂನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಅದು ತಯಾರಿ ನಡೆಸಿದೆ. ಆಸ್ಟ್ರೇಲಿಯ ಎದುರಿಸುತ್ತಿದ್ದ ಸಮಸ್ಯೆ ದೂರವಾಗಿದೆ. ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲೂ ಶತಕ ಸಿಡಿಸಿದ್ದ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್‌ಗೆ ಎರಡನೆ ಟೆಸ್ಟ್‌ನಲ್ಲಿ ಆಡುತ್ತಿದ್ದಾಗ ಅವರ ಎಡಗೈಯ ಹೆಬ್ಬೆರಳಿಗೆ ಗಾಯವಾಗಿತ್ತು. ಅವರು ಇದೀಗ ಫಿಟ್‌ನೆಸ್ ಸಮಸ್ಯೆಯಿಂದ ದೂರವಾಗಿದ್ದಾರೆ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಡುವ ಉತ್ಸಾಹದಲ್ಲಿದ್ದಾರೆ. ಶೇನ್ ವ್ಯಾಟ್ಸನ್ ಮತ್ತು ಮಿಚೆಲ್ ಸ್ಟಾರ್ಕ್ ನೆಟ್ ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ದರು. ಆದರೆ ಅವರು ಚೇತರಿಸಿಕೊಂಡಿದ್ದಾರೆ. ಗಾಯಗೊಂಡಿರುವ ಮಿಚೆಲ್ ಮಾರ್ಷ್ ಆಡುವುದು ಸಂಶಯ. ಅವರ ಬದಲಿಗೆ ಕ್ವೀನ್ಸ್‌ಲ್ಯಾಂಡ್‌ನ ಬ್ಯಾಟ್ಸ್‌ಮನ್ ಜೋ ಬರ್ನ್ಸ್ ಚೊಚ್ಚಲ ಟೆಸ್ಟ್ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ನಾಯಕ ಸ್ಟೀವನ್ ಸ್ಮಿತ್ ನಾಯಕತ್ವ ವಹಿಸಿದ್ದ ಚೊಚ್ಚಲ ಟೆಸ್ಟ್‌ನಲ್ಲೇ ಶತಕ ದಾಖಲಿಸಿ ತಂಡದ ಗೆಲುವಿಗೆ ನೆರವಾಗಿದ್ದಾರೆ.

ಭಾರತದ ವೇಗದ ಬೌಲಿಂಗ್ ಪಡೆ ಇನ್ನಷ್ಟು ಬಲಿಷ್ಠವಾಗಬೇಕಿದೆ. ವರುಣ್ ಆ್ಯರೊನ್ ಪ್ರದರ್ಶನ ಚೆನ್ನಾಗಿಲ್ಲ. ಇಶಾಂತ್ ಶರ್ಮ ಬೌಲಿಂಗ್‌ನಲ್ಲಿ ಸುಧಾರಣೆಯಾಗಿದೆ. ಉಮೇಶ್ ಯಾದವ್ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿದ್ದಾರೆ. ಯಾದವ್ 2011ರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಬೌಲಿಂಗ್‌ನಲ್ಲಿ ಝಹೀರ್ ಖಾನ್‌ಗೆ ಸಾಥ್ ನೀಡಿದ್ದರು. 7 ವಿಕೆಟ್ ಉಡಾಯಿಸಿದ್ದರು. ಈ ವರ್ಷ ಯಾದವ್ ಇನ್ನಿಬ್ಬರು ವೇಗದ ಬೌಲರ್‌ಗಳೊಂದಿಗೆ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳ ರನ್ ಪ್ರವಾಹವನ್ನು ನಿಯಂತ್ರಿಸಲು ತಂತ್ರ ರೂಪಿಸಬೇಕಾಗಿದೆ. ರವಿಚಂದ್ರನ್ ಅಶ್ವಿನ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಮೂರನೆ ಟೆಸ್ಟ್‌ಗೆ ವೇಗಿ ಭುವನೇಶ್ವರ ಕುಮಾರ್ ಆಡುವ ಸಾಧ್ಯತೆ ಇದೆ. ಅವರು ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದರೆ ವರುಣ್ ಆ್ಯರೊನ್ ಜಾಗ ತೆರವುಗೊಳಿಸಬೇಕಾಗುತ್ತದೆ.

ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳ ಪೈಕಿ ಶೇನ್ ವ್ಯಾಟ್ಸನ್ ಕಳೆದ 8 ಟೆಸ್ಟ್‌ಗಳಲ್ಲಿ 1 ಅರ್ಧಶತಕ ಸಿಡಿಸಿದ್ದಾರೆ. ಅವರ ರನ್ ಸರಾಸರಿ 18. ಅವರು ನಾಲ್ಕು ಇನಿಂಗ್ಸ್‌ಗಳಲ್ಲಿ ದಾಖಲಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ 33 ರನ್. ಕಳೆದ ವರ್ಷ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಔಟಾಗದೆ 83 ರನ್ ಗಳಿಸಿದ್ದರು. ಬಳಿಕ ಅವರ ಬ್ಯಾಟಿಂಗ್ ಕಳಪೆಯಾಗಿದೆ. ಭಾರತದ ಸಂಭಾವ್ಯ ತಂಡ: ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಆರ್.ಅಶ್ವಿನ್, ಭುವನೇಶ್ವರ ಕುಮಾರ್/ವರುಣ್ ಆ್ಯರೊನ್, ಉಮೇಶ್ ಯಾದವ್, ಇಶಾಂತ್ ಶರ್ಮ.

ಆಸ್ಟ್ರೇಲಿಯ: ಸ್ಟೀವನ್ ಸ್ಮಿತ್(ನಾಯಕ), ಕ್ರಿಸ್ ರೋಜರ್ಸ್‌, ಡೇವಿಡ್ ವಾರ್ನರ್, ಶೇನ್ ವ್ಯಾಟ್ಸನ್, ಶಾನ್ ಮಾರ್ಷ್, ಜೋ ಬರ್ನ್ಸ್, ಬ್ರಾಡ್ ಹಡಿನ್ (ವಿಕೆಟ್ ಕೀಪರ್), ಮಿಚೆಲ್ ಜಾನ್ಸನ್, ರ್ಯಾನ್ ಹ್ಯಾರಿಸ್, ಜೋಶ್ ಹೇಝ್ಲಾವುಡ್, ನಥನ್ ಲಿನ್.

ಪಂದ್ಯದ ಸಮಯ: ಬೆಳಗ್ಗೆ 5 ಗಂಟೆಗೆ ಆರಂಭ.

ರಾಹುಲ್‌ಗೆ ಸ್ಥಾನ?
ಚೊಚ್ಚಲ ಟೆಸ್ಟ್‌ನಲ್ಲಿ ಆಡುವ ಕನಸಿನೊಂದಿಗೆ ಆಸ್ಟ್ರೇಲಿಯಕ್ಕೆ ತೆರಳಿರುವ ಕರ್ನಾಟಕದ ಯುವ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್‌ಗೆ ಮೂರನೆ ಟೆಸ್ಟ್‌ನಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

ಟೀಮ್ ಇಂಡಿಯಾದ ಅಂತಿಮ 11 ಆಟಗಾರರ ಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ರಾಹುಲ್ ಅವಕಾಶ ಪಡೆದರೆ ಶಿಖರ್ ಧವನ್ ಅಥವಾ ರೋಹಿತ್ ಶರ್ಮ ಸ್ಥಾನ ತೆರವುಗೊಳಿಸಬೇಕಾಗುತ್ತದೆ. ರಾಹುಲ್ ಗುರುವಾರ ನೆಟ್ ಪ್ರಾಕ್ಟೀಸ್‌ನಲ್ಲಿ ಬಹಳ ಹೊತ್ತು ಅಭ್ಯಾಸ ನಡೆಸಿದ್ದಾರೆ.

Write A Comment