ಮನೋರಂಜನೆ

ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ಗೆ ಅಫ್ರಿದಿ ವಿದಾಯ

Pinterest LinkedIn Tumblr

21IN_LPN_AFRIDI_2251989f

ಕರಾಚಿ, ಡಿ.21: ಆಸ್ಟ್ರೇಲಿಯ ಮತ್ತು ನ್ಯೂಝಿಲೆಂಡ್‌ನಲ್ಲಿ ನಡೆಯಲಿರುವ 2015ರ ವಿಶ್ವಕಪ್ ಬಳಿಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿರ್ಗಮಿಸುವೆ. ಆದರೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಹೇಳಿದ್ದಾರೆ.

389 ಏಕದಿನ, 27 ಟೆಸ್ಟ್ ಮತ್ತು 77 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಅಫ್ರಿದಿ ರವಿವಾರ ನಿವೃತ್ತಿಯ ನಿರ್ಧಾರ ಪ್ರಕಟಿಸಿದರು.

‘‘ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೆ. ಆದರೆ ನನಗೆ ಕ್ರಿಕೆಟ್ ಬದುಕು ತೃಪ್ತಿ ನೀಡಿದೆ. ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್ ನಲ್ಲಿರುವಾಗಲೇ ಏಕದಿನ ಕ್ರಿಕೆಟ್‌ನಿಂದ ನಿರ್ಗಮಿಸಲು ಬಯಸಿದ್ದೆ. ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿ ಟ್ವೆಂಟಿ -20 ಕ್ರಿಕೆಟ್‌ನ ಮೇಲೆ ಹೆಚ್ಚು ಗಮನ ನೀಡಲು ಇದೀಗ ನನಗೆ ಇದು ಒಳ್ಳೆಯ ಸಮಯ’’ ಎಂದು ಅಫ್ರಿದಿ ಹೇಳಿದ್ದಾರೆ.

34ರ ಹರೆಯದ ಅಫ್ರಿದಿ ನಿವೃತ್ತಿಯ ಬಗ್ಗೆ ತಂಡದ ಜೊತೆ ಚರ್ಚಿಸಿದ್ದಾರೆ. ಪಾಕ್ ಕ್ರಿಕೆಟ್ ಮಂಡಳಿಗೆ ತನ್ನ ನಿರ್ಧಾರವನ್ನು ಇನ್ನೂ ತಿಳಿಸಿಲ್ಲ. 50 ಓವರ್‌ಗಳ ವಿಶ್ವಕಪ್ ಮುಗಿದ ಬಳಿಕ ಟ್ವೆಂಟಿ-20 ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುವುದಾಗಿ ಹೇಳಿರುವ ಅಫ್ರಿದಿ 2016ರಲ್ಲಿ ಭಾರತದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪ್ರಶಸ್ತಿ ಗೆಲ್ಲುವುದು ತನ್ನ ಕನಸಾಗಿದೆ ಎಂದು ನುಡಿದರು.

ಇತ್ತೀಚೆಗೆ ಯುಎಇಯಲ್ಲಿ ನಾಯಕ ಮಿಸ್ಬಾಹ್ ಉಲ್ ಹಕ್ ಗಾಯದಿಂದಾಗಿ ತಂಡದಿಂದ ಹೊರಗುಳಿದಾಗ ನ್ಯೂಝಿಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ಪಾಕ್ ತಂಡವನ್ನು ನಾಯಕರಾಗಿ ಅಫ್ರಿದಿ ಮುನ್ನಡೆಸಿದ್ದರು. ಮತ್ತೆ ತಂಡದ ನಾಯಕರಾಗಲು ಬಯಸುವಿರಾ ? ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಫ್ರಿದಿ ‘‘ನಾಯಕನಾಗುವ ಇಚ್ಛೆ ನನಗಿಲ್ಲ. ನಾನು ಆ ಸ್ಥಾನವನ್ನು ಬಯಸುವುದಿಲ್ಲ’’ ಎಂದು ಅಫ್ರಿದಿ ಹೇಳಿದರು.

1998, ಅ.22ರಿಂದ 26ರ ತನಕ ಕರಾಚಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದ ಅಫ್ರಿದಿ 2010, ಜುಲೈ 13ರಿಂದ 16ರ ತನಕ ಲಾರ್ಡ್ಸ್‌ನಲ್ಲಿ ಕೊನೆಯ ಟೆಸ್ಟ್ ಆಡಿದ್ದರು. 27 ಟೆಸ್ಟ್‌ಗಳಲ್ಲಿ ಅಫ್ರಿದಿ 5 ಶತಕ ಮತ್ತು 8 ಅರ್ಧಶತಕಗಳಿರುವ 1,716 ರನ್ ಹಾಗೂ 48 ವಿಕೆಟ್ ಪಡೆದಿದ್ದರು. ಅ.1, 1996ರಲ್ಲಿ ನೈರೋಬಿನಲ್ಲಿ ನ್ಯೂಝಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅಫ್ರಿದಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು. 389 ಏಕದಿನ ಪಂದ್ಯವನ್ನಾಡಿರುವ ಅಫ್ರಿದಿ 6 ಶತಕ ಮತ್ತು 38 ಅರ್ಧಶತಕ ಇರುವ 7,870 ರನ್ ಮತ್ತು 391 ವಿಕೆಟ್ ಸಂಪಾದಿಸಿದ್ದರು. 1996, ಅ.4ರಂದು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 50 ನಿಮಿಷಗಳಲ್ಲಿ 40 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 11 ಸಿಕ್ಸರ್ ಇರುವ 102 ರನ್ ಸಂಪಾದಿಸಿ ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕದ ವಿಶ್ವದಾಖಲೆ ಬರೆದಿದ್ದರು. 17 ವರ್ಷಗಳ ಕಾಲ ವೇಗದ ಶತಕದ ದಾಖಲೆ ಅವರ ಹೆಸರಲ್ಲಿತ್ತು. ನ್ಯೂಝಿಲೆಂಡ್‌ನ ಕೋರಿ ಆ್ಯಂಡರ್ಸನ್ 2014ರ ಜನವರಿಯಲ್ಲಿ ವೇಗದ ಶತಕ ದಾಖಲಿಸಿ ಅಫ್ರಿದಿ ದಾಖಲೆಯನ್ನು ಮುರಿದಿದ್ದರು.

ಅಫ್ರಿದಿ 77 ಟ್ವೆಂಟಿ-20 ಪಂದ್ಯಗಳಲ್ಲಿ 1142 ರನ್, 4 ಅರ್ಧಶತಕ ಮತ್ತು 81 ವಿಕೆಟ್ ಪಡೆದಿದ್ದಾರೆ.

Write A Comment