ಉಡುಪಿ, ಡಿ.21: ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ 3 ದಿನಗಳ ಮಹಿಳೆಯರ ರಾಷ್ಟ್ರ ಮಟ್ಟದ ರಾಜೀವ್ ಗಾಂಧಿ ಖೇಲ್ ಅಭಿಯಾನದ ಗ್ರೂಪ್-3ರ ಕ್ರೀಡಾಕೂಟದಲ್ಲಿ ದಿಲ್ಲಿ 44 ಅಂಕಗಳೊಂದಿಗೆ ಚಾಂಪಿಯನ್ ಆಗಿ ಮೂಡಿಬಂದರೆ, ಕರ್ನಾಟಕ ರಾಜ್ಯ 36 ಅಂಕಗಳೊಂದಿಗೆ ರನ್ನರ್- ಅಪ್ ಸ್ಥಾನವನ್ನು ಗೆದ್ದುಕೊಂಡಿತು.
ಮಹಿಳೆಯರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ತಂಡ ಪ್ರಶಸ್ತಿಯನ್ನು ಹರ್ಯಾಣ ಗೆದ್ದುಕೊಂಡರೆ, ತಮಿಳುನಾಡು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಪಥಸಂಚಲನದಲ್ಲಿ ಕರ್ನಾಟಕ ತಂಡ ವಿನ್ನರ್ ಆಗಿ ಹಾಗೂ ದಿಲ್ಲಿ ತಂಡ ರನ್ನರ್- ಅಪ್ ಆಗಿ ಮೂಡಿಬಂತು.
ಕ್ರೀಡಾಕೂಟದ ಕೊನೆಯ ದಿನದ ಸ್ಪರ್ಧೆಗಳ ಫಲಿತಾಂಶಗಳು
200ಮೀ.: 1.ದೀಪಿಕಾ ಕೋಟ್ಯಾನ್, ಮಹಾರಾಷ್ಟ್ರ (25.4ನಿ), 2. ಗಾಯಕ್ವಾರ್ ಸೇರ್ಪಿಯಾ, ಗುಜರಾತ್, 3.ಇಂದು ಪ್ರಸಾದ್, ಮಧ್ಯಪ್ರದೇಶ. 100ಮೀ. ಹರ್ಡಲ್ಸ್: 1.ಜಸ್ಪ್ರೀತ್ ಕೌರ್, ಪಂಜಾಬ್(14.6ಸೆ.), 2. ಸುಗಿನಾ ಎಂ., ಕೇರಳ, 3.ಆಯನಾ ಥಾಮಸ್, ದಿಲ್ಲಿ.
3,000ಮೀ.:1.ಸುಧಾ ಪಾಲ್, ಉತ್ತರ ಪ್ರದೇಶ (10:17.1ಸೆ.), 2.ಅರುಣಾ ಭಾರ್ತಿ, ಉತ್ತರಖಂಡ, 3.ಲಕ್ಷ್ಮೀ ಕಶ್ಯಪ್, ದಿಲ್ಲಿ. ಡಿಸ್ಕಸ್ ಎಸೆತ: 1.ರೇಣು, ದಿಲ್ಲಿ (38.94ಮೀ.), 2.ಪ್ರಿಯಾಂಕಾ ಜೆ.ಎಸ್., ಕರ್ನಾಟಕ, 3.ಕೆ. ಅನಿತಾ ದೇವಿ, ಆಂಧ್ರ ಪ್ರದೇಶ.
ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ರಾಜೀವ್ ಗಾಂಧಿ ಖೇಲ್ ಅಭಿಯಾನದ ಸಮನ್ವಯಾಧಿಕಾರಿ ವಿ.ಕೆ. ಮಿಶ್ರಾ, ಪಾಟಿಯಾಲ ತಾಂತ್ರಿಕ ಅಧಿಕಾರಿ ಆರ್.ಕೆ.ಗುಪ್ತ, ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸತೀಶ್ ಕುಮಾರ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.