ಮನೋರಂಜನೆ

ರಣಜಿ: ಸಂಕಷ್ಟದಲ್ಲಿ ಕರ್ನಾಟಕ: ಕುನಾಲ್ ಕಪೂರ್ ಅರ್ಧಶತಕ

Pinterest LinkedIn Tumblr

KUNAL-KAPOOR1

ಹೊಸದಿಲ್ಲಿ, ಡಿ.21: ರೈಲ್ವೇಸ್ ವಿರುದ್ಧ ರವಿವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ‘ಎ’ ಗುಂಪಿನ ಮೂರನೆ ಪಂದ್ಯದಲ್ಲಿ ಕರ್ನಾಟಕ ತಂಡ 7 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದೆ. ಕರ್ನಲ್ ಸಿಂಗ್ ಸ್ಟೇಡಿಯಂನಲ್ಲಿ ರವಿವಾರ ಆರಂಭವಾದ ರಣಜಿ ಪಂದ್ಯದಲ್ಲಿ ರೈಲ್ವೇಸ್‌ನ ಕೆ.ಕೆ.ಉಪಾಧ್ಯ(4-75) ಹಾಗೂ ರಂಜಿತ್ ಮಾಲಿ(2-43) ದಾಳಿಗೆ ತತ್ತರಿಸಿದ ಕರ್ನಾಟಕ ಆರಂಭಿಕ ಕುಸಿತ ಕಂಡಿತು.

ಕರ್ನಾಟಕದ ಪರ ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ 40 ರನ್(56 ಎಸೆತ, 6 ಬೌಂಡರಿ) ಕೊಡುಗೆ ನೀಡಿದರೆ, ಕುನಾಲ್ ಕಪೂರ್(53 ರನ್,110 ಎಸೆತ, 9 ಬೌಂಡರಿ) ಅಗ್ರ ಸ್ಕೋರರ್ ಎನಿಸಿಕೊಂಡರು.

ಮೊದಲ ದಿನದಾಟದಂತ್ಯಕ್ಕೆ ವಿಕೆಟ್‌ಕೀಪರ್ ಸಿ.ಎಂ. ಗೌತಮ್ (ಅಜೇಯ 30) ಹಾಗೂ ಶ್ರೇಯಸ್ ಗೋಪಾಲ್ (ಅಜೇಯ 14) 8ನೆ ವಿಕೆಟ್‌ಗೆ 33 ರನ್ ಸೇರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಕರ್ನಾಟಕ ತಂಡ ಬಂಗಾಳದ ವಿರುದ್ಧದ ಪಂದ್ಯದಂತೆಯೇ ಮೊದಲ ಇನಿಂಗ್ಸ್‌ನಲ್ಲಿ ತನ್ನ ಘನತೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಮೋಡ ಕವಿದ ವಾತಾವರಣದಿಂದಾಗಿ 1:15 ನಿಮಿಷ ತಡವಾಗಿ ಆರಂಭವಾದ ಪಂದ್ಯದಲ್ಲಿ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿತ್ತು. ಆದರೆ, ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸ್ಟಾರ್ ಆಟಗಾರರಿದ್ದ ತಂಡದಿಂದ ಸಾಧ್ಯವಾಗಲಿಲ್ಲ. ರೈಲ್ವೇಸ್‌ನ ಬೌಲರ್‌ಗಳಾದ ಉಪಾಧ್ಯ ಹಾಗೂ ಅನುರೀತ್ ಸಿಂಗ್ ಶಿಸ್ತುಬದ್ಧ ಬೌಲಿಂಗ್‌ನಿಂದ ಗಮನ ಸೆಳೆದರು. 100 ರನ್‌ಗೆ 4 ವಿಕೆಟ್ ಕಳೆದುಕೊಂಡ ಕರ್ನಾಟಕ ತಂಡವನ್ನು ಕಪೂರ್ ಹಾಗೂ ಸ್ಟುವರ್ಟ್ ಬಿನ್ನಿ (19) ಆಧರಿಸಿದರು. ಈ ಜೋಡಿ 5ನೆ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿತು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್: 68 ಓವರ್‌ಗಳಲ್ಲಿ 207/7
(ಕುನಾಲ್ ಕಪೂರ್ 53, ರಾಬಿನ್ ಉತ್ತಪ್ಪ 40, ಗೌತಮ್ ಅಜೇಯ 31, ಎಸ್.ಗೋಪಾಲ್ ಅಜೇಯ 14, ಕೆ. ಉಪಾಧ್ಯ 4-75, ರಂಜಿತ್ ಮಾಲಿ 2-43).

Write A Comment