ಇಡೀ ಸಿನಿಮಾಕಥೆ ಒಂದು ಪುಸ್ತಕವನ್ನು ಆಧರಿಸಿರುವಂಥದು. ಅದು ನಾಯಕಿ ಬರೆದಿಟ್ಟ ಡೈರಿ. ಅದರಲ್ಲಿ ನಾಯಕನ ಜತೆಗಿನ ಪ್ರೀತಿ–ಪ್ರೇಮ ಇತ್ಯಾದಿಗಳೆಲ್ಲ ಇರುತ್ತವೆ. ಹೀಗಾಗಿ ಚಿತ್ರದ ಹೆಸರೇ ‘ಪ್ರೀತಿ ಕಿತಾಬು’.
ಟಿವಿ ಚಾನೆಲ್ನಲ್ಲಿ ಪತ್ರಕರ್ತನಾಗಿ ಹಲವು ವರ್ಷ ಕೆಲಸ ಮಾಡಿದ ಅನುಭವವಿರುವ ವಿಠ್ಠಲ ಭಟ್, ಈ ಸಿನಿಮಾ ನಿರ್ದೇಶನದೊಂದಿಗೆ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಬೆಂಗಳೂರಿನ ನಾಗರಭಾವಿ ಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಳೆದ ವಾರ ನಡೆದ ಚಿತ್ರಮುಹೂರ್ತ ಸರಳವಾಗಿತ್ತು. ನಟ ಶ್ರೀನಗರ ಕಿಟ್ಟಿ ಹಾಗೂ ಛಾಯಾಗ್ರಾಹಕ ಎಚ್.ಎಂ.ರಾಮಚಂದ್ರ ಶುಭ ಕೋರಿ, ಆರಂಭ ಫಲಕ ತೋರಿದರು.
ಸುದ್ದಿಮಿತ್ರರ ಜತೆ ಮಾತಿಗೆ ಕುಳಿತ ನಿರ್ದೇಶಕ ವಿಠ್ಠಲ ಅವರಲ್ಲಿ ಖುಷಿ ತುಂಬಿ ತುಳುಕುತ್ತಿದ್ದುದು ಕಾಣಿಸುತ್ತಿತ್ತು. ‘ಮೊದಲ ಸಿನಿಮಾ. ಹೀಗಾಗಿ ಕಾತರ, ನಿರೀಕ್ಷೆ ಹೆಚ್ಚಿವೆ’ ಎಂದ ಅವರು ಚಿತ್ರದ ಕಥೆಯನ್ನು ಚುಟುಕಾಗಿ ತೆರೆದಿಟ್ಟರು. ಯಾವುದೋ ಸಂಶೋಧನೆಗೆಂದು ನಾಯಕಿಯು ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಾಳೆ. ಅಲ್ಲಿ ನಾಯಕನ ಪ್ರೇಮದ ಸುಳಿಗೆ ಸಿಲುಕುತ್ತಾಳೆ. ಬಳಿಕ ಏನಾಯಿತು ಎಂಬುದು ಆಕೆ ಬರೆದಿಟ್ಟ ಡೈರಿಯಿಂದ ಬಯಲಾಗುತ್ತ ಹೋಗುತ್ತದೆ. ರಮೇಶ ಭಟ್, ಅವಿನಾಶ್, ಹೊನ್ನವಳ್ಳಿ ಕೃಷ್ಣ, ವಿ.ಮನೋಹರ್, ಕೆ.ಎಸ್.ಶ್ರೀಧರ್ ಇದರಲ್ಲಿದ್ದಾರೆ.
ಹಲವು ವರ್ಷಗಳ ಹಿಂದೆ ತೆರೆ ಕಂಡಿದ್ದ ‘ಯಾರದು’ ಎಂಬ ಚಿತ್ರದ ನಾಯಕ ನೇಹಲ್ ‘ಪ್ರೀತಿ ಕಿತಾಬು’ ನಾಯಕ. ‘ದುನಿಯಾ’ ಚಿತ್ರದ ಬಳಿಕ ಒಳ್ಳೆ ಪಾತ್ರ ಸಿಕ್ಕ ಸಂತಸ ರಶ್ಮಿಯಲ್ಲಿದೆ. ‘ದುನಿಯಾ ನಂತರ ಉತ್ತಮ ಸಿನಿಮಾ ಹಾಗೂ ಅಷ್ಟೇ ಒಳ್ಳೆಯ ಪಾತ್ರಕ್ಕಾಗಿ ನಾನು ಕಾಯುತ್ತಿದ್ದೆ. ಈ ಸಿನಿಮಾ ಅಂಥ ಅವಕಾಶ ಕೊಡಲಿದೆ’ ಎಂದರು. ಗುಜರಾತ್ ಮೂಲದ ಪೂರ್ವಿ ಜೋಶಿ ಇನ್ನೊಬ್ಬ ನಾಯಕಿ.
ಸಂಗೀತ ಸಂಯೋಜಿಸಲಿರುವ ವಿ.ಮನೋಹರ್, ‘ಪ್ರೀತಿ ಕಿತಾಬು’ ಚಿತ್ರಕ್ಕೆ ವಿಶೇಷ ಆಸಕ್ತಿ ವಹಿಸಿದ್ದಾರೆ.
‘ದುನಿಯಾ’ ಹಾಗೂ ‘ಕಿರಾತಕ’ ಬಳಿಕ ಪ್ರೇಕ್ಷಕರನ್ನು ಹೆಚ್ಚು ಸೆಳೆಯುವ ಹಾಡುಗಳು ಇದರಲ್ಲಿ ಇರಲಿವೆ ಎಂದು ಮನೋಹರ್ ಹೇಳಿದರು. ನಿರ್ಮಾಪಕ ಶಮಂತ ಕೆ, ಸಂಕಲನಕಾರ ಮೋಹನ್ ಕಾಮಾಕ್ಷಿ ಹಾಗೂ ಛಾಯಾಗ್ರಾಹಕ ಗಣೇಶ ಹೆಗಡೆ ಉಪಸ್ಥಿತರಿದ್ದರು. ಸಾಗರ, ಕೊಡಚಾದ್ರಿ, ಜೋಗ, ಶರಾವತಿ ಹಿನ್ನೀರು ಸೇರಿದಂತೆ ಮಲೆನಾಡಿನ ಹಲವು ತಾಣಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕಿದೆ.