ಮನೋರಂಜನೆ

ಅಪೂರ್ವ ಸಂಗಮ: ತಾತನ ಆಶೀರ್ವಾದ ಅಜ್ಜಿ ಹಾರೈಕೆ

Pinterest LinkedIn Tumblr

raaj-family

‘ಇದು 3ಜಿ ಸರ್ಕಲ್‌’ ಹಾಗಂತ ಘೋಷಿಸಿದ್ದು ರಾಘವೇಂದ್ರ ರಾಜ್‌ಕುಮಾರ್. ಮಾತಿನ ನಡುವೆ ‘ಇದು 3ಜಿ ಅಲ್ಲ, 4ಜಿ’ ಅಂದಿದ್ದು ಹಿರಿಯ ನಿರ್ದೇಶಕ ಭಗವಾನ್. ಅರೆ, ಇವರಿಬ್ಬರು ಯಾವುದಾದರೂ ಮೊಬೈಲ್ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗುತ್ತಿದ್ದಾರೆಯೇ? ಅಂದುಕೊಳ್ಳಬೇಡಿ.

ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ಬಣ್ಣದ ಜಗತ್ತಿಗೆ ಬಂದಿರುವ ಸುದ್ದಿ ನಿಮಗೆ ಗೊತ್ತಿದೆ. ಡಾ.ರಾಜ್‌ಕುಮಾರ್ ನಂತರ ಅವರ ಮೂರು ಮಕ್ಕಳು, ಇವರ ನಂತರ ಈಗ ವಿನಯ್.

ಹೀಗಾಗಿ ಇದು ಮೂರನೇ ತಲೆಮಾರು ಎನ್ನುವ ಅರ್ಥದಲ್ಲಿ 3ಜಿ ಅಂದರೆ. ಹಾಜೆ ನೋಡಿದರೆ ಭಗವಾನ್ ಇದು 3ಜಿ ಅಲ್ಲ, 4ಜಿ ಅಂದಿದ್ದು ಯಾಕೋ? ಡಾ.ರಾಜ್‌ಕುಮಾರ್ ಅವರಿಗೂ ಮುನ್ನ ಸಿಂಗನೆಲ್ಲೂರು ಪುಟ್ಟಸ್ವಾಮಿ ಅವರೇ ಅಭಿನಯಕ್ಕಿಳಿದವರು. ಅಲ್ಲಿಗೆ ವಿನಯ್ ಎಂಟ್ರಿ 4 ಜಿ ಎಂಬುದು ಭಗವಾನ್ ಅವರ ವಾದ.

ಅಂದ ಹಾಗೆ ಈ 3ಜಿ ಮತ್ತು 4ಜಿ ಕುರಿತು ಮಾತು ಶುರುವಾಗಿದ್ದು, ‘ಸಿದ್ದಾರ್ಥ’ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ. ಅದು ಅರಮನೆ ಮೈದಾನ. ಕಲರ್‌ಫುಲ್ ವೇದಿಕೆ. ನಾಲ್ಕು ತಲೆಮಾರಿನ ಕಲಾ ಪಯಣವನ್ನು ಸ್ಮರಿಸಿಕೊಂಡ ಗಳಿಗೆ ಅದು.

ಮುತ್ತಾತ, ತಾತ, ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ… ಇವರೆಲ್ಲರ ಸ್ಫೂರ್ತಿಯಿಂದ ಈಗಷ್ಟೇ ಬಣ್ಣ ಹಚ್ಚಿಕೊಂಡು ಒಂದು ಸಿನಿಮಾ ಮುಗಿಸಿರುವುದು ನಟ ವಿಜಯ್ ರಾಜ್‌ಕುಮಾರ್. ಅವರ ಮೊದಲ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದು. ವಿನಯ್‌ನ ಮೊದಲ ಸಿನಿಮಾದ ಆಡಿಯೋ ಬಿಡುಗಡೆ ಜತೆಗೆ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನದ ಸಂಭ್ರಮ ಕೂಡ ಅಂದು ನಡೆಯಿತು.

ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದ ವಿಶೇಷ ಅಂದರೆ ಇಡೀ ರಾಜ್ ಮನೆತನದ ಮೂರು ಮುತ್ತುಗಳು(ಶಿವಣ್ಣ, ರಾಘಣ್ಣ ಮತ್ತು ಪುನೀತ್) ವೇದಿಕೆ ಮೇಲೆ ನಿಂತು ವಿನಯ್ ಅವರಿಗೆ ಸ್ವಾಗತ ಕೋರಿದ್ದು, ಜತೆಗೆ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ರಾಘವೇಂದ್ರ ರಾಜ್‌ಕುಮಾರ್ ಅವರೇ ವಹಿಸಿಕೊಂಡು ನಡೆಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

‘ನಮ್ಮಮ್ಮ ಶಾರದೆ…’ ಎಂದು ಹಾಡುತ್ತ ವೇದಿಕೆ ಮೇಲೆ ಬಂದ ರಾಘವೇಂದ್ರ ರಾಜ್‌ಕುಮರ್, ರಾಜ್ ಕುಟುಂಬದ ತಲೆಮಾರನ್ನು ಪರಿಚಯಿಸಿದರು. ನಂತರ ವಿನಯ್ ಅವರನ್ನು ವೇದಿಕೆಗೆ ಕರೆದರು. ವೇದಿಕೆಗೆ ಬಂದ ವಿನಯ್ ಶಿವಣ್ಣ ಮತ್ತು ಪುನೀತ್‌ರನ್ನು ಸ್ವಾಗತಿಸಿದರು.

ಅಲ್ಲಿಂದ ನಾಲ್ಕು ಜನರ ನಡುವೆ ಮಾತು, ಕಾಲೆಳೆದಿದ್ದು, ತಮಾಷೆ ಮಾಡಿದ್ದು ಎಲ್ಲವೂ ಆದ ಮೇಲೆ ಚಿತ್ರದ ಛಾಯಾಗ್ರಾಹಕ ಕೆ.ಕೃಷ್ಣ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನಿರ್ದೇಶಕ ಪ್ರಕಾಶ್, ನಾಯಕಿ ಅಪೂರ್ವ ವೇದಿಕೆ ಏರಿದರು. ಕ್ರೇಜಿಸ್ಟಾರ್ ರವಿಚಂದ್ರನ, ರಾಕ್‌ಲೈನ್ ವೆಂಕಟೇಶ್, ಥಾಮಸ್ ಡಿಸೋಜಾ, ಎಚ್.ಡಿ.ಗಂಗರಾಜು, ಜಯಂತ್ ಕಾಯ್ಕಿಣಿ ಸೇರಿದಂತೆ ಹಲವರು ಆಗಮಿಸಿ ವಿನಯ್ ಚಿತ್ರಕ್ಕೆ ಶುಭ ಕೋರಿದರು.

‘ರಾಜ್ ಕುಟುಂಬದ ಕಾರ್ಯಕ್ರಮ ಅಂದರೆ ಮನೆಯಿಂದಲೇ ಕೈ ಕಟ್ಟಿಕೊಂಡು ಬರುತ್ತೇವೆ. ಅವರ ಮೇಲೆ ಭಯಕ್ಕಲ್ಲ. ಗೌರವದಿಂದ. ರಾಜ್ ಕುಟುಂಬದ ಈ ಮೂರು ತಲೆಮಾರಿನ 3ಜಿ ಸರ್ಕಲ್‌ನಲ್ಲಿ ನಾನಿದ್ದೇನೆ ಎನ್ನುವುದು ಖುಷಿ. ಪುನೀತ್‌ಗೆ ಮೊದಲ ಚಿತ್ರದಿಂದ ಕ್ಲಾಪ್ ಮಾಡುತ್ತಲೇ ಇದ್ದೇನೆ.

ಕ್ಲಾಪ್ ಮಾಡುವ ಕೆಲಸದಿಂದ ನಿವೃತ್ತಿಯಾಗುವ ಮುನ್ನ ಈಗ ವಿನಯ್ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದೇನೆ. ಡಾ.ರಾಜ್‌ಕುಮಾರ್ ಅವರ ವಿನಯ ಮತ್ತು ಅವರ ಮಾರ್ಗದರ್ಶನ ನಿನ್ನ ಜೊತೆ ಇರುತ್ತದೆ. ಇವೆರಡು ನಿನ್ನೊಟ್ಟಿಗೆ ಇದ್ದರೆ ಚಿತ್ರರಂಗದಲ್ಲಿ ನಿನ್ನ ದಾರಿ ದೊಡ್ಡದಾಗಿ ಬೆಳೆಯುತ್ತದೆ. ಒಳ್ಳೆಯ ಸಿನಿಮಾ ಮಾಡು’ ಎಂದು ಮೊದಲಿಗೆ ವಿನಯ್ ಅವರಿಗೆ ಹಿತನುಡಿ ಹೇಳಿದ್ದು ನಟ ರವಿಚಂದ್ರನ್.

‘ಇಮೇಜು, ಕುಟುಂಬದ ಹೆಸರು ಇಟ್ಟುಕೊಂಡು ಬೆಳೆಯುವುದು ಕಷ್ಟ. ಹಕ್ಕಿ ಮರದ ಗೂಡನ್ನು ಹೊತ್ತುಕೊಂಡು ಹಾರಲ್ಲ. ಅದು ಸ್ವತಂತ್ರವಾಗಿ ರೆಕ್ಕೆ ಬಿಚ್ಚಿಕೊಂಡು ಹಾರುತ್ತದೆ. ವಿನಯ್‌ಗೆ ಕೂಡ ಈಗ ಹಾರುವ ಸಮಯ. ಆತನಿಗೆ ಯಾವುದೇ ಇಮೇಜು ಅಡ್ಡ ಬಾರದಿರಲಿ’ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಶುಭ ಕೋರಿದರು. ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳ ಬಗ್ಗೆ ಎಲ್ಲರು ಮೆಚ್ಚುಗೆ ಸೂಚಿಸಿದರು. ಅಂದ ಹಾಗೆ ಚಿತ್ರದ ಎಲ್ಲ ಹಾಡುಗಳನ್ನು ಜಯಂತ್ ಅವರೇ ಬರೆದಿದ್ದಾರೆ.

‘ಒಂದು ಮ್ಯೂಜಿಕಲ್ ಲವ್ ಸಿನಿಮಾ. ಎಲ್ಲ ವರ್ಗದ ಪ್ರೇಕ್ಷಕರಿಗೂ ಮೆಚ್ಚುಗೆಯಾಗುವಂಥ ಚಿತ್ರ ಮಾಡಿದ್ದೇವೆ’ ಎಂದರು ವಿನಯ್‌ರಾಜ್‌ಕುಮಾರ್. ಲಹರಿ ಆಡಿಯೋ ಸಂಸ್ಥೆ ಚಿತ್ರದ ಹಾಡುಗಳನ್ನು ಮಾರುಕಟ್ಟೆ ಮಾಡಲಿದೆ.

ತಾತನ ಆಶೀರ್ವಾದ, ಅಜ್ಜಿಯ ಪ್ರೀತಿ, ಅಪ್ಪ-ಅಮ್ಮನ ಬೆಂಬಲ, ದೊಡ್ಡಪ್ಪ, ಚಿಕ್ಕಪ್ಪನ ಪ್ರೇರಣೆಯಿಂದ ಚಿತ್ರರಂಗಕ್ಕೆ ಬಂದಿರುವುದಾಗಿ ವಿನಯ್ ಹೇಳಿಕೊಂಡರು. ವಿನಯ್ ಯಾವ ಕಾರಣಕ್ಕೂ ಹೊಸ ನಟ ಅನಿಸಲ್ಲ. ಅಷ್ಟು ಚೆನ್ನಾಗಿ ನಟಿಸಿದ್ದಾನೆ ಎಂದಿದ್ದು ನಿರ್ದೇಶಕ ಪ್ರಕಾಶ್, ಚಿತ್ರತಂಡದವರು ಒಬ್ಬೊಬ್ಬರಾಗಿ ಚಿತ್ರದ ಬಗ್ಗೆ ಹೇಳಿಕೊಂಡರು.

Write A Comment