ಉಡುಪಿ, ಡಿ.19: ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ಮಹಿಳೆಯರ ರಾಷ್ಟ್ರ ಮಟ್ಟದ ರಾಜೀವ್ ಗಾಂಧಿ ಖೇಲ್ ಅಭಿಯಾನದ ಗ್ರೂಪ್-3ರ ಸ್ಪರ್ಧೆಗಳಲ್ಲಿ ಶುಕ್ರವಾರ ಆತಿಥೇಯ ಕರ್ನಾಟಕ ಮಹಿಳೆಯರು ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.
ಸ್ಪರ್ಧೆಯ ಎರಡನೇ ದಿನವಾದ ಶುಕ್ರವಾರ ಅಥ್ಲೆಟಿಕ್ನ 400ಮೀ., ಲಾಂಗ್ಜಂಪ್ ಹಾಗೂ ಮಹಿಳೆಯರ 100ಮೀ. ರಿಲೇ ಸ್ಪರ್ಧೆಗಳಲ್ಲಿ ಕರ್ನಾಟಕ ಮಹಿಳೆಯರು ಮೊದಲಿಗರಾಗಿ ಚಿನ್ನದ ಪದಕಗಳನ್ನು ಜಯಿಸಿದರು. 400ಮೀ.ನಲ್ಲಿ ರೀನಾ ಜಾರ್ಜ್, ಲಾಂಗ್ಜಂಪ್ನಲ್ಲಿ ಐಶ್ವರ್ಯ ಜಿ.ಎಂ., ಮೊದಲಿಗರಾಗಿ ಗುರಿಮುಟ್ಟಿದರೆ, ರಿಲೇ ಸ್ಪರ್ಧೆಯಲ್ಲಿ ರೀನಾ ಜಾರ್ಜ್ ಕಾವೇರಿ ಪಾಟೀಲ್, ಭುವಿ ಶಂಕರ ಹಾಗೂ ಅರ್ಪಿತಾ ಎಂ ಅವರನ್ನೊಳಗೊಂಡ ತಂಡ ಮೊದಲಿಗರಾಗಿ ಗುರಿಮುಟ್ಟಿತು. ಇನ್ನು ಬ್ಯಾಡ್ಮಿಂಟನ್ ತಂಡ ಸ್ಪರ್ಧೆಯ ಫೈನಲ್ನಲ್ಲಿ ಹರ್ಯಾಣ ತಂಡ, ತಮಿಳುನಾಡು ತಂಡವನ್ನು 2-0ಯಿಂದ ಸೋಲಿಸಿ ಚಾಂಪಿಯನ್ ಎನಿಸಿಕೊಂಡರೆ, ತೆಲಂಗಾಣವನ್ನು 2-0 ಅಂತರದಿಂದ ಮಣಿಸಿದ ಮಹಾರಾಷ್ಟ್ರ ಮೂರನೇ ಸ್ಥಾನ ಪಡೆಯಿತು.
ಬ್ಯಾಡ್ಮಿಂಟನ್ ಸ್ಪರ್ಧೆಯ ಸಿಂಗಲ್ಸ್ನಲ್ಲಿ ಮಾಹಾರಾಷ್ಟ್ರದ ಕರುಣಾ, ತೆಲಂಗಾಣದ ವಿ.ಪ್ರಮೋದ, ಹರ್ಯಾಣದ ಲಲಿತಾ ದಹಿಯಾ, ತೆಲಂಗಾಣದ ಕೆ.ಎಸ್.ಎಸ್.ದಿವ್ಯ, ದಿಲ್ಲಿಯ ರಂಜನಿ, ತಮಿಳುನಾಡಿನ ಶಕ್ತಿ ಮಹೇಶ್ವರಿ, ಅಶ್ವಿನಿ ಗಾಂಧಿ ಮಿತಿ ಹಾಗೂ ಮಹಾರಾಷ್ಟ್ರದ ಭಕ್ತಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಮಹಿಳೆಯರ ಡಬಲ್ಸ್ನಲ್ಲಿ ಕರ್ನಾಟಕದ ಶೀತಲ್ ಸುದರ್ಶನ್ ಮತ್ತು ಅಮೃತ ಬಿ.ಎಸ್., ದಿಲ್ಲಿಯ ಶೃದ್ಧಾ ಮತ್ತು ಯಾಮಿನಿ ಶರ್ಮ, ಹರ್ಯಾಣದ ಜಾಗೃತಿ ನಾಶೀರ್ ಮತ್ತು ಲಲಿತಾ ದಹಿಯಾ, ಉತ್ತರಖಂಡದ ಊರ್ವಶಿ ಮತ್ತು ಶೌರ್ಯ, ಮಹಾರಾಷ್ಟ್ರದ ಭಕ್ತಿ ಮತ್ತು ವಲ್ಲೇರಿ, ತಮಿಳುನಾಡಿನ ಕ್ಷಮಾ ಮತ್ತು ಯೋಗಿತಾ, ಮಧ್ಯಪ್ರದೇಶದ ಪ್ರಿಯಾಂಕ ಮತ್ತು ಶೈಕ್ಷಾ, ಉತ್ತರ ಪ್ರದೇಶದ ಅನಿಶಾ ಪಟೇಲ್ ಮತ್ತು ಜಮಿಲ್ಲಾ ಶರ್ಮ ಹಾಗೂ ರಾಜಸ್ತಾನದ ಮೇಘಾ ಮತ್ತು ಯುಕ್ತಾ ಅವರು ಕ್ವಾರ್ಟರ್ ಫೈನಲ್ಗೇರಿದ್ದಾರೆ.
ಇಂದು ಸಂಜೆ ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ವನ್ನು ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷ ಯುವರಾಜ್ ಪಿ., ರಾಜೀವ್ ಗಾಂಧಿ ಖೇಲ್ ಅಭಿಯಾನದ ವಿ.ಕೆ.ಮಿಶ್ರ ಹಾಗೂ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ಆರ್.ಕೆ.ಗುಪ್ತ ಉಪಸ್ಥಿತರಿದ್ದರು. ಜಿಲ್ಲಾ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ದಿನದ ಅಥ್ಲೆಟಿಕ್ ಸ್ಪರ್ಧೆಯ ಫಲಿತಾಂಶ
400ಮೀ.: 1.ರೀನಾ ಜಾರ್ಜ್ (ಕರ್ನಾಟಕ), 2.ಗಾಯಕವಾಡ್ ಸಾರ್ಫಿಯಾ (ಗುಜರಾತ್), 3.ಸಂತೋಷ ಕುಮಾರಿ (ದಿಲ್ಲಿ). 1,500ಮೀ.: 1.ಮೊನಿಕಾ ಚೌಧುರಿ (ದಿಲ್ಲಿ), 2.ನಂದಿನಿ ಗುಪ್ತಾ (ಉತ್ತರ ಪ್ರದೇಶ), 3.ಶೃತಿ ಕೆ.ಸಿ. (ಕರ್ನಾಟಕ). ಶಾಟ್ಫುಟ್: 1.ರೀನು (ದಿಲ್ಲಿ), 2.ಉಮಾ ಪಿ.ಎ. (ಕರ್ನಾಟಕ), 3.ಕೆ.ಅನಿತಾ ದೇವಿ (ಆಂದ್ರ ಪ್ರದೇಶ).
ಲಾಂಗ್ಜಂಪ್: 1.ಐಶ್ವರ್ಯ ಜಿ.ಎಂ.(ಕರ್ನಾಟಕ), 2.ರೇಖಾ (ದಿಲ್ಲಿ), 3.ಪಿ.ಪುನಿತಾವಲ್ಲಿ (ತಮಿಳುನಾಡು). 100ಮೀ. ರಿಲೇ:1. ಕರ್ನಾಟಕ, 2.ದಿಲ್ಲಿ, 3.ಕೇರಳ.