ಮನೋರಂಜನೆ

ಅಂಬರೀಶ್ ನನ್ನ ತಂದೆಯಿದ್ದಂತೆ ಎಂದ ವೈಭವಿ

Pinterest LinkedIn Tumblr

ambi

ಬೆಂಗಳೂರು: ನಟ ಮತ್ತು ರಾಜಕೀಯ ಮುಖಂಡ ಅಂಬರೀಶ್ ಮತ್ತೆ ಸುದ್ದಿಯಲ್ಲಿದ್ದಾರೆ. ವಿಧಾನಸಭೆಯಲ್ಲಿ ಮೊಬೈಲ್ ಉಪಯೋಗಿಸಿ ಎಚ್ಚರಿಕೆ ಪಡೆದಿದ್ದ ಘಟನೆಯ ಕಾವು ಇನ್ನೂ ಆರಿಲ್ಲ ಅಷ್ಟರಲ್ಲೇ ವಸತಿ ಸಚಿವ, ನಟ ಜೈಜಗದೀಶ್ ಅವರ ಪುತ್ರಿ ವೈಭವಿ ಅವರ ಗಲ್ಲಕ್ಕೆ ಚುಂಬಿಸಿದ ಫೋಟೋದಿಂದ ಮತ್ತೆ ವಿವಾದಕ್ಕೊಳಗಾಗಿದ್ದಾರೆ. ವೈಭವಿಯ ಹುಟ್ಟುಹಬ್ಬದ ದಿನ ಕ್ಲಿಕ್ ಮಾಡಿರುವ ಈ ಫೋಟೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.

“ನಾನು ಸಾಮಾಜಿಕ ಜಾಲತಾಣವನ್ನು ದೂಷಿಸುವುದಿಲ್ಲ. ಎಲ್ಲರೂ ತಾವು ತೆಗೆದ ಚಿತ್ರಗಳನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುವುದು ಸಹಜ. ಆದರೆ ನನ್ನ ಫೋಟೊವನ್ನು ದುರ್ಬಳಕೆ ಮಾಡಿಕೊಂಡಿರುವುದು ನನಗೆ ಅತೀವ ಬೇಸರ ತಂದಿದೆ” ಎನ್ನುತ್ತಾರೆ ೨೧ ವರ್ಷದ ವೈಭವಿ.

ಕಾನೂನು ವಿದ್ಯಾರ್ಥಿಯಾಗಿರುವ ವೈಭವಿಗೆ, ಈ ವಿವಾದ ಕಾಲೇಜಿನಲ್ಲಿ ಅಹಿತಕರ ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. “ಇದು ಎಲ್ಲಿಯವರೆಗೆ ಬಂದಿದೆ ಎಂದರೆ, ಅಂಕಲ್ ಜೊತೆಗಿನ ನನ್ನ ಸಂಬಂಧ ಏನು ಎಂದು ಪ್ರಶ್ನಿಸುವವರೆಗೂ ಬಂದಿದೆ. ಅಂಬರೀಶ್ ಯಾವಾಗಲೂ ನನ್ನ ತಂದೆಯಂತೆ ಎಂದು ಸ್ಪಷ್ಟೀಕರಿಸಲು ಇಚ್ಛಿಸುತ್ತೇನೆ. ಇದು ನಿಜಕ್ಕೂ ಸರಿಯಲ್ಲ ಏಕೆಂದರೆ ನಾನು ಇನ್ನೂ ಸಣ್ಣವಳು ಹಾಗೂ ಜನ ನನ್ನ ತಂದೆಗೆ ಸಮಾನರಾದ ಹಾಗೂ ನನ್ನ ತಂದೆಯ ವಯಸ್ಸಿನವರಾದ ಅಂಬರೀಶ್ ಜೊತೆ ನನಗೆ ಪ್ರಣಯ ಸಂಬಂಧ ಇದೆ ಎಂಬಂತೆ ಗದ್ದಲ ಮಾಡುತ್ತಿದ್ದಾರೆ. ನನ್ನ ಪೋಷಕರು ನಟರಾಗಿರುವುದರಿಂದ ಹಾಗೂ ನಾನು ಮಾಧ್ಯಮಗಳ ಬಗ್ಗೆ ಬಲ್ಲೆನಾದ್ದರಿಂದ ಈ ವಿಷಯವನ್ನು ನಿಭಾಯಿಸಲು ಸಾಧ್ಯವಾಗುತ್ತಿದೆ. ಇದೇ ತರಹದ ಘಟನೆ ಯಾವುದೇ ಸಾಮಾನ್ಯ ಹುಡುಗಿಗಾದರೆ ಏನು ಗತಿ? ಅವಳು ಇಂತಹ ಸಂದರ್ಭಗಳಲ್ಲಿ ಏನು ಮಾಡಲು ಸಾಧ್ಯ?” ಎನ್ನುತ್ತಾರೆ ವೈಭವಿ.

ಈ ಫೋಟೋಗಳು ಇಂಟರ್ ನೆಟ್ ನಲ್ಲಿ ಹರಿದಾಡುತ್ತಿರುವುದರ ಬಗ್ಗೆ ನಾನು ತಿಳಿಸುವವರೆಗೂ ಅಂಬರೀಶ್ ಅವರಿಗೆ ಅರಿವಿರಲಿಲ್ಲ ಎಂದ ವೈಭವಿ. “ನಾನು ಅವರ  ಮಗಳಿದ್ದಂತೆ ಎಂದು ಜನರಿಗೆ ತಿಳಿಸಲು ಅಂಕಲ್ ಹೇಳಿದರು. ಬೆನ್ನಿನ ಹಿಂದೆ ಮಾತನಾಡಿಕೊಳ್ಳುವವರ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಅವರು ಧೈರ್ಯ ಕೊಟ್ಟರೂ, ಇದು ನನಗೆ ನೋವುಂಟು ಮಾಡಿದೆ. ನಾನು ಹುಡುಗಿ. ನಾನು ಚಾರಿತ್ರ್ಯವಧೆಗೆ ಒಳಗಾಗಿದ್ದೇನೆ. ಮಾನನಷ್ಟ ಮೊಕದ್ದಮೆ ಹೂಡಬೇಕೆಂದುಕೊಂಡಿದ್ದೇನೆ, ಆದರೆ ಈ ಫೋಟೊಗಳನ್ನು ಅಪ್ಲೋಡ್ ಮಾಡಿದ್ದು ಯಾರು ಎಂದು ತಿಳಿದು ಬಂದಿಲ್ಲ” ಎನ್ನುತ್ತಾರೆ.

ವದಂತಿಗಳನ್ನು ಹರಡಲು ಅಂತರ್ಜಾಲವನ್ನು ಬಳಸಿಕೊಳ್ಳಬಾರದು ಎನ್ನುತ್ತಾರೆ ವೈಭವಿ.

Write A Comment