ಮನೋರಂಜನೆ

ರಜನಿಕಾಂತ್ ಅಭಿನಯದ ‘ಲಿಂಗಾ’ ಚಿತ್ರವಿಮರ್ಶೆ: ‘ಲಿಂಗಾ’ ಮೆಚ್ಚಿ ಅಹುದಹುದು…!

Pinterest LinkedIn Tumblr

rajani

ರಜನಿ ಅಭಿನಯದ ಬಹು ನಿರೀಕ್ಷಿತ ‘ಲಿಂಗಾ’ ಇಂದು ವಿಶ್ವದಾದ್ಯಂತ ಏಕ ಕಾಲಕ್ಕೆ ತೆರೆ ಕಂಡಿದ್ದು, ಲಿಂಗಾ ಮೆಚ್ಚಿ ಪ್ರೇಕ್ಷಕ ಅಹುದಹುದು ಎನ್ನುತ್ತಿದ್ದಾನೆ.

ರಜನಿಕಾಂತ್ ಹುಟ್ಟುಹಬ್ಬದಂದೇ ಬಿಡುಗಡೆಗೊಂಡಿರುವ ‘ಲಿಂಗಾ’ ಬಹುತೇಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ ಮತ್ತು ಈ ಚಿತ್ರದ ಕುರಿತು ಹುಟ್ಟಿಕೊಂಡಿದ್ದ ಹಲವು ಊಹಾಪೋಹಗಳಿಗೆ ತೆರೆ ಎಳೆದಿದೆ.

ಕಥೆ ಏನು?

‘ಲಿಂಗಾ’, ಇತಿಹಾಸ ಮತ್ತು ಸಮಕಾಲೀನ ಸಮಸ್ಯೆಯನ್ನು ಬಿಂಬಿಸುವ ಸ್ವಾರಸ್ಯಕರ ಕಥೆಯನ್ನು ಹೊಂದಿದೆ.

‘ಲಿಂಗಾ’ ಚಿತ್ರದಲ್ಲಿ ಬಾಲ ಕಾರ್ಮಿಕ ಪದ್ದತಿ ಸೇರಿದಂತೆ ಸಮಾಜದಲ್ಲಿ ಪ್ರಮುಖ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ದೇಶದ ಅಭಿವೃದ್ಧಿಯಲ್ಲಿ ಕೃಷಿಯ ಮಹತ್ತರ ಪಾತ್ರವನ್ನು ನಿರ್ದೇಶಕ ಕೆ.ಎಸ್.ರವಿಕುಮಾರ್ ಕ್ಯಾಮೆರಾ ಮೂಲಕ ವಿವರಿಸಿದ್ದಾರೆ.

ನದಿ ನೀರು ಪೋಲಾಗುವುದನ್ನು ತಡೆಯಲು ನದಿ ಜೋಡಣೆ ಯೋಜನೆಯ ಮೂಲಕ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತದೆ. ಈ ಅಣೆಕಟ್ಟಿನ ಸಹಾಯದೊಂದಿಗೆ ಕೃಷಿಗೆ ಉತ್ತೇಜನ ನೀಡುವ ಕಥೆಯನ್ನಾಧರಿಸಿದೆ ‘ಲಿಂಗಾ’.

‘ಲಿಂಗಾ’ ಚಿತ್ರದಲ್ಲಿ ರಜನಿಕಾಂತ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎರಡು ಪಾತ್ರಗಳಲ್ಲೂ ‘ಲಿಂಗೇಶ್ವರನ್’ ಆಗಿ ರಜನಿ ಮನೋಜ್ಞ ಅಭಿನಯ ನೀಡಿದ್ದಾರೆ. ಕಥೆ, ಚಿತ್ರಕಥೆ, ಹಾಡು, ಸಂಗೀತ, ಕಾಮಿಡಿ, ಆಕ್ಷ್‌ನ್, ಡೈಲಾಗ್ಸ್ ಹೀಗೆ ಪ್ರೇಕ್ಷಕನ ಎಲ್ಲ ಬಗೆಯ ನಿರೀಕ್ಷೆಯನ್ನು ತೃಪ್ತಿಗೊಳಿಸುಲ್ಲಿ ‘ಲಿಂಗಾ’ ಯಶಸ್ವಿಯಾಗಿದೆ ಎಂಬುದು ಪ್ರೇಕ್ಷಕರು ಕೊಟ್ಟ ತೀರ್ಪು.

ಭಾರತದಲ್ಲಿನ ಬ್ರಿಟಿಷ್ ಕಾಲಾವಧಿ ಹಾಗೂ ಸಮಕಾಲೀನ ಸಮಸ್ಯೆಗಳನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ. ರಾಜವಂಶಸ್ಥ ಕುಟುಂಬದಲ್ಲಿ ಜನಿಸಿದ ಲಿಂಗೇಶ್ವರನ್(ರಜನಿ), ಬ್ರಿಟಿಷ್ ಭಾರತದ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಾರೆ.

ಆ ಊರಿನಲ್ಲಿ ನೀರಿಲ್ಲದೆ ಬರಗಾಲದಿಂದ ಗ್ರಾಮಸ್ಥರು ತತ್ತರಿಸುವುದನ್ನು ಕಾಣುವ ಲಿಂಗೇಶ್ವರನ್ (ರಜನಿ), ತಮ್ಮ ಸ್ವಂತ ಖರ್ಚಿನಲ್ಲಿ ಅಣೆಕಟ್ಟನ್ನು ಕಟ್ಟಲು ಮುಂದಾಗುತ್ತಾರೆ. ಅದಕ್ಕಾಗಿ ತಮ್ಮ ಕೆಲಸವನ್ನೂ ತೊರೆಯುವ ಪ್ರಸಂಗ ಎದುರಾಗುತ್ತದೆ. ಅಣೆಕಟ್ಟು ನಿರ್ಮಾಣ ವೇಳೆ ಬ್ರಿಟಿಷರು ಹಾಗೂ ಸ್ಥಳೀಯ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಹಲವು ತೊಡಕುಗಳ ಬಳಿಕ ಅಣೆಕಟ್ಟು ನಿರ್ಮಾಣವಾಗುತ್ತದೆ. ಯಾವ ಜನತೆಗಾಗಿ ಅಣೆಕಟ್ಟನ್ನು ನಿರ್ಮಿಸುತ್ತಾರೋ ಅದೇ ಜನತೆಯಿಂದ ಊರಿನಿಂದ ಹೊರಗಟ್ಟಲ್ಪಡುತ್ತಾರೆ ರಜನಿಕಾಂತ್.

‘ಲಿಂಗಾ’ ಚಿತ್ರದಲ್ಲಿ ನಿರ್ದೇಶಕ ಕೆ.ಎಸ್.ರವಿಕುಮಾರ್, ರಜನಿಕಾಂತ್ ಅವರನ್ನು ಯುವಕನಾಗಿ, ವಯಸ್ಕನಾಗಿ, ವೃದ್ದ ಸೇರಿದಂತೆ ವಿವಿಧ ವಯೋವಾನದಲ್ಲಿ ತೋರಿಸಿದ್ದಾರೆ. ಸಮಾಜಸೇವೆ ಮಾಡುವ ಮೂಲಕ ಜನಮನ ಸೂರೆಗೊಳಿಸುವಲ್ಲಿ ರಜನಿಯ ಅಭಿನಯದ ಲಿಂಗಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದೆ.

70 ವರ್ಷಗಳ ಬಳಿಕ ರಜನಿ ನಿರ್ಮಿಸಿದ್ದ ಅಣೆಕಟ್ಟಿಗೆ ಸ್ಥಳೀಯ ರಾಜಕಾರಣಿಗಳಿಂದ ಅಪಾಯ ಎದುರಾಗುತ್ತದೆ. ಆಗ ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಜನಿ ರಾಜಕಾರಣಿಗಳ ಕುತಂತ್ರದಿಂದ ಅಣೆಕಟ್ಟು ಹಾಗೂ ಆ ಊರಿನ ಜನತೆಯನ್ನು ಹೇಗೆ ಕಾಪಾಡುತ್ತಾರೆ ಎಂಬುದು ಕಥೆಯ ಸಾರಾಂಶ

ಕಥೆಯಲ್ಲಿ ಸುಮಾರು 1 ಘಂಟೆಗೂ ಅಧಿಕ ಫ್ಲಾಶ್‌ಬ್ಲಾಕ್ ಕಥೆಯನ್ನು ತೋರಿಸಲಾಗುತ್ತದೆ. ಪ್ರತಿಯೊಂದು ಶಾಟ್ ಅತ್ಯುತ್ತಮವಾಗಿ ಮೂಡಿಬಂದಿದೆ. ಛಾಯಾಗ್ರಾಹಕ ರತ್ನವೇಲು ಅವರ ತಮ್ಮ ಅಪೂರ್ವ ಛಾಯಾಗ್ರಹಣದಿಂದ ಪ್ರೇಕ್ಷಕರ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದಾರೆ.

ನಿರ್ದೇಶಕ ಕೆ.ಎಸ್.ರವಿಕುಮಾರ್ ಹಾಗೂ ಛಾಯಾಗ್ರಾಹಕ ರತ್ನವೇಲು ಮತ್ತು ರಜನಿಕಾಂತ್‌ರ ತ್ರಿವಳಿ ಸಂಗಮ ಚಿತ್ರವನ್ನು ಮನರಂಜಕವಾಗಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಹಾಗೆಯೇ ಚಿತ್ರದಲ್ಲಿ ಮೂಡಿಬಂದಿರುವ ಹಾಡುಗಳೆಲ್ಲವೂ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಎ.ಆರ್.ರೆಹಮಾನ್ ತಮ್ಮ ಎಂದಿನ ಮೋಡಿ ಇಲ್ಲೂ ಮುಂದುವರೆಸಿದ್ದಾರೆ.

ರಜನಿಗೆ ನಾಯಕಿಯರಾಗಿ ಸೋನಾಕ್ಷಿ ಸಿನ್ಹಾ ಮತ್ತು ಅನುಷ್ಕಾ ಶೆಟ್ಟಿ ಅಭಿನಯಿಸಿದ್ದಾರೆ. ಬ್ರಿಟಿಷ್ ಭಾರತದ ಕಾಲದಲ್ಲಿನ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸೋನಾಕ್ಷಿ, ಸರಳ ಹಾಗೂ ವೀರ ವನಿತೆಯಾಗಿ ನಟನೆ ಮಾಡಿದ್ದಾರೆ. ಮನರಂಜನೆಗೆ ಮೋಸ ಮಾಡದ ರಜನಿಕಾಂತ್ ಅವರ ‘ಲಿಂಗಾ’ ಮೆಚ್ಚಿ ಪ್ರೇಕ್ಷಕ ಅಹುದಹುದು ಎನ್ನುವುದರಲ್ಲಿ ಉತ್ಪ್ರೇಕ್ಷೆ ಇಲ್ಲ.

-ಆರ್.ಲಕ್ಷ್ಮೀ

Write A Comment