ಮನೋರಂಜನೆ

‘ಚಂದನವನ’ ಚಿತ್ರಕ್ಕೆ ಹೊಸ ಪಾದಾರ್ಪಣೆ ಕೊಡಗಿನ ಬೆಡಗಿ ನಿಧಿ ಕುಶಾಲಪ್ಪ

Pinterest LinkedIn Tumblr

NIDHI

‘ಪಂಚರಂಗಿ’ಯಲ್ಲಿ ಯೋಗರಾಜ್ ಭಟ್ಟರಿಗೆ ನಿಧಿ (ನಿಧಿ ಸುಬ್ಬಯ್ಯ) ಸಿಕ್ಕಿದ್ದೀಗ ಹಳೆಯ ವಿಚಾರ. ಈಗ ಗಾಂಧಿ ನಗರದಲ್ಲಿ ಮತ್ತೊಂದು ನಿಧಿಯ ಶೋಧವಾಗಿದೆ. ಕೊಡಗಿನ ಬೆಡಗಿ ನಿಧಿ ಕುಶಾಲಪ್ಪ ನಾಯಕಿಯಾಗಿ ‘ಚಂದನವನ’ಕ್ಕೆ ಕಾಲಿರಿಸಿದ್ದಾರೆ. ಅದು ತಮಿಳಿನ ಹೆಸರಾಂತ ನಿರ್ದೇಶಕ ಖದಿರ್ ಅವರ ‘ನನ್ ಲವ್ ಟ್ರ್ಯಾಕ್’ ಚಿತ್ರದ ಮೂಲಕ.

ದಾಖಲೆಗಳ ಪ್ರಕಾರ ನಿಧಿ ಅವರ ನಿಜವಾದ ಹೆಸರು ನಿವೇದಿತಾ. ಆದರೆ ಮುದ್ದಿನಿಂದ ಕರೆಯುತ್ತಿದ್ದುದು ಮಾತ್ರ ನಿಧಿ. ಅವರ ತಂದೆ, ಅಜ್ಜ ಎಲ್ಲರೂ ಅಬಕಾರಿ ಇಲಾಖೆಯ ಸಹಾಯಕ ಕಮಿಷನರ್ ಆಗಿ ಸೇವೆ ಸಲ್ಲಿಸಿದವರು. ನಿಧಿಯೂ ವಂಶ ಪಾರಂಪರ್ಯದಂತೆ ಚೆನ್ನಾಗಿ ಓದಿ ಸರ್ಕಾರಿ ಹುದ್ದೆ ಗಿಟ್ಟಿಸಬಹುದಿತ್ತು. ಆದರೆ ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಅಭಿನಯಿಸಿದ್ದ ನಿಧಿ ನಟನೆಯ ರುಚಿ ಹತ್ತಿಸಿಕೊಂಡಿದ್ದರು. ಅದೇ ಕಾರಣಕ್ಕೆ ಪದವಿ ಓದುವಾಗ ಸಂವಹನ ವಿಷಯವನ್ನು ಆಯ್ದುಕೊಂಡರು. ಮಂಗಳೂರಿನಲ್ಲಿ ಪದವಿ ಓದುವಾಗ ಪ್ರತಿ ವಾರ ಒಂದು ಗಂಟೆಯ ಟಿವಿ ಕಾರ್ಯಕ್ರಮ ನೀಡುವುದು ಕಡ್ಡಾಯವಾಗಿತ್ತು. ಈ ಅವಕಾಶವನ್ನು ಬಳಸಿಕೊಂಡ ನಿಧಿ, ನಿರೂಪಣೆ, ಕಿರುಚಿತ್ರ, ಸಾಕ್ಯ್ಷಚಿತ್ರಗಳ ನಿರ್ಮಾಣ, ನಟನೆ ಹೀಗೆ ಹಲವು ವಿಭಾಗಗಳಲ್ಲಿ ಪಳಗಿಕೊಂಡರು. ಶಿಕ್ಷಣ ಮುಗಿಯುತ್ತಿದ್ದಂತೆಯೇ ಚಿತ್ರರಂಗಕ್ಕೆ ಪ್ರವೇಶವನ್ನೂ ಪಡೆದರು. ಅಂದಹಾಗೆ ಭರತನಾಟ್ಯ ನಿಧಿಯ ಮತ್ತೊಂದು ಆಸಕ್ತಿ.

ನಿಧಿ ಕಾಲೇಜಿನಲ್ಲಿದ್ದಾಗ, ‘ಖದಿರ್ ಅವರು ತಮ್ಮ ತಮಿಳಿನ ಚಿತ್ರವೊಂದಕ್ಕೆ ಹೊಸ ಮುಖವನ್ನು ಅರಸುತ್ತಿದ್ದಾರೆ. ನೀನೇಕೆ ಪ್ರಯತ್ನ ಮಾಡಬಾರದು’ ಎಂಬ ಸಲಹೆ ಸ್ನೇಹಿತರಿಂದ ಸಿಕ್ಕಿತು. ಆಡಿಷನ್‌ನಲ್ಲಿ ಭಾಗಿಯಾಗಿ ಭಾವಚಿತ್ರ ತೆಗೆಸಿಕೊಂಡ ನಿಧಿಗೆ ಒಂದು ದಿನ, ‘ಖದಿರ್ ಅವರು ತಮಿಳು ಚಿತ್ರ ಮಾಡುತ್ತಿಲ್ಲ. ಕನ್ನಡದಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದೀಯಾ’ ಎಂಬ ಸಿಹಿ ಸುದ್ದಿ ಸಿಕ್ಕಿತು. ಕೆಲವು ಜಾಹೀರಾತುಗಳಿಗೂ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದ ನಿಧಿಗೆ ತಮ್ಮ ಮೊದಲ ಚಿತ್ರಕ್ಕಾಗಿ ಮೊದಲ ಬಾರಿ ಕ್ಯಾಮೆರಾ ಎದುರಿಸುತ್ತಿದ್ದೇನೆ ಎಂಬ ಭಯವೇ ಕಾಡಲಿಲ್ಲವಂತೆ.

‘ನನ್ ಲವ್ ಟ್ರ್ಯಾಕ್’ನಲ್ಲಿ ಕಾಲೇಜು ವಿದ್ಯಾರ್ಥಿನಿಯ ಪಾತ್ರ ನಿರ್ವಹಿಸಿರುವ ನಿಧಿ, ಚಿತ್ರದಲ್ಲಿ ತೀರಾ ಸಿಂಪಲ್ ಹುಡುಗಿಯಂತೆ. ‘ಈ ಚಿತ್ರ ಸಂಪೂರ್ಣ ಕಮರ್ಷಿಯಲ್ ಅಲ್ಲ. ಸ್ನೇಹದ ಮೇಲೆ ಹೆಚ್ಚು ಒತ್ತು ಕೊಡಲಾಗಿದೆ. ನಾನು ಬಯಸುವಂತಹ ಪಾತ್ರವೇ ನನಗೆ ಸಿಕ್ಕಿದೆ’ ಎನ್ನುತ್ತಾರೆ ನಿಧಿ. ಪ್ರತಿ ಹುಡುಗಿಯೂ ‘ಇದು ನಾನೇ’ ಎಂದುಕೊಳ್ಳುವಂತಹ ಪಾತ್ರ ಮಾಡಬೇಕೆನ್ನುವುದು ನಿಧಿ ಆಸೆಯಂತೆ. ‘ಹಾಗೆಂದು ಬೇರೆ ರೀತಿಯ ಪಾತ್ರಗಳನ್ನು ಮಾಡುವುದಿಲ್ಲ ಎಂದಲ್ಲ’ ಎನ್ನುತ್ತಾರೆ. ಆದರೆ ತುಂಬಾ ಬೋಲ್ಡ್‌, ಗ್ಲಾಮರ್, ಎಕ್ಸ್‌ಪೋಸ್ ಪಾತ್ರಗಳನ್ನು ಎಂದೂ ಮಾಡುವುದಿಲ್ಲವಂತೆ.

ವಿದೇಶಿ ಚಿತ್ರಗಳನ್ನು ಹೆಚ್ಚಾಗಿ ನೋಡುವ ನಿಧಿ ಬೇರೆ ಭಾಷೆಯ ಚಿತ್ರರಂಗದಿಂದ ಅವಕಾಶ ಬಂದರೆ ಖಂಡಿತ ಹೋಗುತ್ತೇನೆ ಎನ್ನುತ್ತಾರೆ. ಹಾಲಿವುಡ್ ತಲುಪುವುದು ಅವರ ಗುರಿ. ‘ಈಗಿನ್ನೂ ಆರಂಭಿಕ ಹಂತದಲ್ಲಿರುವುದರಿಂದ ತುಂಬಾ ಚೂಸಿಯಾಗಿರುವುದೂ ಸಾಧ್ಯವಿಲ್ಲ. ಹಾಗಂತ ಬಂದಿದ್ದೆಲ್ಲ ಒಪ್ಪಿಕೊಳ್ಳುವ, ಐಟಂ ಡಾನ್ಸ್‌ ಕುಣಿಯುವ ನಾಯಕಿಯೂ ನಾನಲ್ಲ. ಅಂತಿಮವಾಗಿ ನನಗೆ ಚಿತ್ರಗಳ ಸಂಖ್ಯೆಗಿಂತ ಗುಣಮಟ್ಟವೇ ಮುಖ್ಯ. ಅದರಲ್ಲೂ ಕನ್ನಡವೇ ನನ್ನ ನೆಲೆ’ ಎನ್ನುತ್ತಾರೆ.

ನಿರ್ದೇಶಕಿ ಆಗಬೇಕೆಂಬುದು ನಿಧಿ ಅವರ ಮಹತ್ವಾಕಾಂಕ್ಷೆ. ಆದರೆ ಅದಕ್ಕಿಂತ ಮೊದಲು ಚಿತ್ರರಂಗದಲ್ಲಿದ್ದುಕೊಂಡು ಸಿನಿಮಾದ ಒಳ ಹೊರಗನ್ನು ಅರಿತು, ಸಂಪೂರ್ಣ ನಿರ್ದೇಶಕಿಯಾಗುವ ಸಾಮರ್ಥ್ಯ ಪಡೆದ ನಂತರವಷ್ಟೇ ನಿರ್ದೇಶನದ ಜವಾಬ್ದಾರಿ ಹೊರುವ ನಿರ್ಧಾರ ಅವರದು. ಒಂದರ್ಥದಲ್ಲಿ ನಟನೆ ಅವರ ಸಿನಿಮಾ ಪಯಣದ ‘ಸ್ಟಾರ್ಟ್‌ಅಪ್’ ಅಷ್ಟೇ. ಅವರ ಗುರಿ ನಿರ್ದೇಶನ. ಅದಕ್ಕೆ ಪೂರಕವೆಂಬಂತೆ ಹಲವು ಕಥೆಗಳೂ ಅವರ ಬಳಿ ಇವೆಯಂತೆ.

ಚಿತ್ರಗಳಲ್ಲಿ ಕಮರ್ಷಿಯಲ್ ಅಥವಾ ಕಲಾತ್ಮಕ ಎಂಬ ಭೇದ ಅವರಿಗಿಲ್ಲ. ಇಷ್ಟವಾಗುವಂತಿದ್ದರೆ ಎಲ್ಲ ಬಗೆಯ ಚಿತ್ರಗಳಲ್ಲೂ ಕಾಣಿಸಿಕೊಳ್ಳಲು ಅವರು ಸಿದ್ಧ. ಸಾಮಾಜಿಕ ವಿಚಾರಗಳನ್ನಿಟ್ಟುಕೊಂಡು ಚಿತ್ರಗಳನ್ನು ಮಾಡುವುದು ಅವರ ಕಾಳಜಿ. ‘ನಮ್ಮ ಕನಸನ್ನು ನಾವು ಹಿಂಬಾಲಿಸಿದರೆ ಅದರಲ್ಲಿ ನೂರು ಪ್ರತಿಶತ ತೊಡಗಿಕೊಳ್ಳಬಹುದು. ಬೇರೆಯವರ ಒತ್ತಾಯಕ್ಕೆ ಮಣಿದು ದಾರಿ ಬದಲಿಸಿದರೆ ಖುಷಿಯನ್ನೇ ಕಳೆದುಕೊಳ್ಳುತ್ತೇವೆ. ನಮ್ಮ ಕನಸನ್ನು ಬೇರೆಯವರಿಗೆ ನಿಯಂತ್ರಿಸಲು ಬಿಡವಾರದು’ ಎಂಬುದು ಅವರ ನುಡಿ.
ಸದ್ಯ ಅವರ ಪೂರ್ಣ ಗಮನ ‘ನನ್ ಲವ್ ಟ್ರ್ಯಾಕ್’ ಮೇಲೆ. ಈ ಚಿತ್ರ ಯಶಸ್ವಿಯಾಗಿ ಭವಿಷ್ಯದಲ್ಲಿ ಕೈ ತುಂಬ ಕೆಲಸ ತಂದುಕೊಡುವ ವಿಶ್ವಾಸ ಅವರದು.

Write A Comment