ಮನೋರಂಜನೆ

ಭಾರತ-ಆಸ್ಟ್ರೇಲಿಯ ಟೆಸ್ಟ್ ಸರಣಿ: ಡಿ.9ರಿಂದ ಅಡಿಲೇಡ್‌ನಲ್ಲಿ ಆರಂಭ

Pinterest LinkedIn Tumblr

flecher

ಅಡಿಲೇಡ್, ಡಿ.1: ಕಳೆದ ವಾರ ಆಸ್ಟ್ರೇಲಿಯ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ದುರಂತ ಸಾವಿನ ಹಿನ್ನೆಲೆಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಮೊದಲ ಟೆಸ್ಟ್ ಅಡಿಲೇಡ್‌ನಲ್ಲಿ ಡಿ. 9 ರಿಂದ ಆರಂಭವಾಗಲಿದೆ.

ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿರುವ ಕಾರಣ ಟೀಮ್ ಇಂಡಿಯಾ ಬ್ರಿಸ್ಬೇನ್‌ಗೆ ತೆರಳದೆ ಅಡಿಲೇಡ್‌ನಲ್ಲಿ ಉಳಿದಿದೆ. ಪೂರ್ವ ನಿಗದಿಯಂತೆ ಭಾರತೀಯ ತಂಡ ಗುರುವಾರ ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಈಗಾಗಲೇ ಬ್ರಿಸ್ಬೇನ್‌ಗೆ ತೆರಳಬೇಕಾಗಿತ್ತು. ಆದರೆ, ಫಿಲಿಪ್ ಹ್ಯೂಸ್ ದಾರುಣ ಸಾವಿನ ಹಿನ್ನೆಲೆಯಲ್ಲಿ ಭಾರತ ಬ್ರಿಸ್ಬೇನ್ ಪ್ರವಾಸ ರದ್ದುಪಡಿಸಿತ್ತು. ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.

ಪರಿಷ್ಕೃತ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೋಮವಾರ ಪ್ರಕಟಿಸಿದೆ. ಡಿ.12 ರಿಂದ 16ರ ತನಕ ಎರಡನೆ ಟೆಸ್ಟ್ ಪಂದ್ಯದ ಆತಿಥ್ಯವಹಿಸಬೇಕಾಗಿದ್ದ ಅಡಿಲೇಡ್‌ನಲ್ಲಿ ಸರಣಿಯ ಮೊದಲ ಪಂದ್ಯ ಡಿ.9 ರಿಂದ 13ರ ತನಕ ನಡೆಯಲಿದೆ. ಬ್ರಿಸ್ಬೇನ್‌ನಲ್ಲಿ ಡಿ.17 ರಿಂದ 21ರ ತನಕ ಎರಡನೆ ಟೆಸ್ಟ್ ಹಾಗೂ ಮೂರನೆ ಟೆಸ್ಟ್ ಪಂದ್ಯ ಪೂರ್ವನಿಗದಿಯಂತೆ ಮೆಲ್ಬೋರ್ನ್‌ನಲ್ಲಿ ಡಿ.26-30ರ ತನಕ ನಡೆಯುವುದು. ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಹೊಸ ವರ್ಷದಂದು ಸಿಡ್ನಿಯಲ್ಲಿ ನಡೆಯಲಿದೆ.

ಈ ಪಂದ್ಯ ಜ.6 ರಿಂದ ಆರಂಭವಾಗಲಿದೆ. ಪೂರ್ವ ನಿಗದಿಗಿಂತ ಮೂರು ದಿನ ತಡವಾಗಿ ನಡೆಯುತ್ತಿದೆ. ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಮೊದಲ ಟೆಸ್ಟ್ ಪಂದ್ಯವನ್ನು ಮುಂದೂಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಬ್ರಿಸ್ಬೇನ್‌ಗೆ ತೆರಳಬೇಕಾಗಿದ್ದ ಭಾರತ ತಂಡ ಅಡಿಲೇಡ್‌ನಲ್ಲಿ ಉಳಿದ ಕಾರಣ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆಯಿತ್ತು. ಜನವರಿ 10 ರಂದು ಟೆಸ್ಟ್ ಸರಣಿ ಕೊನೆಗೊಂಡ ನಂತರ ಭಾರತ ತಂಡ ಇಂಗ್ಲೆಂಡ್ ಒಳಗೊಂಡಿರುವ ತ್ರಿಕೋನ ಏಕದಿನ ಸರಣಿಯನ್ನು ಆಡಲಿದೆ.

ಭಾರತ ಹಾಗೂ ಇಂಗ್ಲೆಂಡ್ ಜ.12 ರಂದು ಸಿಡ್ನಿಯಲ್ಲಿ ಏಕದಿನ ಅಭ್ಯಾಸ ಪಂದ್ಯವನ್ನು ಆಡಲಿದೆ. ಹಾಗೂ ಏಕದಿನ ಸರಣಿ ಜ.16 ರಿಂದ ಆರಂಭವಾಗುತ್ತದೆ. ಕಳೆದ ಎರಡು ವರ್ಷದಿಂದ ಫಿಲಿಪ್ ಹ್ಯೂಸ್ ದತ್ತು ಮೈದಾನವಾಗಿರುವ ಅಡಿಲೇಡ್ ಓವಲ್ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಸೂಕ್ತ ತಾಣವಾಗಿದೆ.

Write A Comment