ಮುಂಬೈ

ಶಿವಸೇನೆ-ಎನ್‌ಸಿಪಿ 30-30 ಮ್ಯಾಚ್‌, ಕಾಂಗ್ರೆಸ್ ಪಾಲಿಗೆ ಐದು ವರ್ಷ ಡಿಸಿಎಂ ಸ್ಥಾನ

Pinterest LinkedIn Tumblr


ಹೊಸದಿಲ್ಲಿ/ಮುಂಬಯಿ: ಮಹಾರಾಷ್ಟ್ರದಲ್ಲಿಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್‌ ಮೈತ್ರಿ ಸರಕಾರ ರಚನೆ ಬಹುತೇಕ ಖಚಿತವಾಗಿದೆ. ಶಿವಸೇನೆಯನ್ನು ತಮ್ಮೊಟ್ಟಿಗೆ ಸೇರಿಸಿಕೊಳ್ಳುವ ಬಗ್ಗೆ ಅಸಮಾಧಾನ ಹೊಂದಿದ್ದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೊನೆಗೂ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸಂಧಾನಕ್ಕೆ ಮಣಿದಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ಅಗತ್ಯವಿರುವುದರಿಂದ ಶಿವಸೇನೆಗೆ ಬೆಂಬಲ ನೀಡಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಕೇವಲ 2.5 ವರ್ಷ ಮಾತ್ರ ಸಿಎಂ ಸ್ಥಾನವನ್ನು ಶಿವಸೇನೆಗೆ ಬಿಟ್ಟುಕೊಡಲು ಸೋನಿಯಾ ಸಮ್ಮತಿಸಿದ್ದಾರೆ. ಅದರಂತೆ ಮೊದಲ 30 ತಿಂಗಳು ಶಿವಸೇನೆಗೆ ಸಿಎಂ ಸ್ಥಾನ ದೊರೆಯಲಿದ್ದು, ನಂತರದ 30 ತಿಂಗಳು ಎನ್‌ಸಿಪಿಗೆ ಬಿಟ್ಟುಕೊಡಬೇಕಿದೆ.

ಕಾಂಗ್ರೆಸ್‌ಗೆ ಉಪಮುಖ್ಯಮಂತ್ರಿ ಸ್ಥಾನ ಐದು ವರ್ಷ ಪೂರ್ಣಾವಧಿಗೆ ಸಿಗಲಿದ್ದು, ಜತೆಗೆ ವಿಧಾನಸಭೆ ಸ್ಪೀಕರ್‌ ಸ್ಥಾನವನ್ನು ಕೂಡ ಬಿಟ್ಟುಕೊಡಲು ಎನ್‌ಸಿಪಿ ಮುಖ್ಯಸ್ಥ ಪವಾರ್‌ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸ್ಥಾನ ಹಂಚಿಕೆ ಸೂತ್ರ

ಶರದ್‌ ಪವಾರ್‌ ಅವರ ಹೊಸದಿಲ್ಲಿ ನಿವಾಸದಲ್ಲಿ ಬುಧವಾರ ಸಂಜೆ ನಡೆದ ಎನ್‌ಸಿಪಿ-ಕಾಂಗ್ರೆಸ್‌ ಮುಖ್ಯಸ್ಥರ ಸಭೆಯಲ್ಲಿ ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ಹಂಚಿಕೆ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ವಿಧಾನಸಭೆಯಲ್ಲಿ ಮೈತ್ರಿ ಪಕ್ಷಗಳು ಹೊಂದಿರುವ ಶಾಸಕ ಸ್ಥಾನ ಆಧರಿಸಿ ಶಿವಸೇನೆಗೆ 16, ಎನ್‌ಸಿಪಿಗೆ 15 ಹಾಗೂ ಕಾಂಗ್ರೆಸ್‌ಗೆ 12 ಸಚಿವ ಸ್ಥಾನಗಳನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌, ಜೈರಾಮ್‌ ರಮೇಶ್‌, ಅಹ್ಮದ್‌ ಪಟೇಲ್‌ ಜತೆಗೆ ಎನ್‌ಸಿಪಿ ಮುಖಂಡರಾದ ಶರದ್‌ ಪವಾರ್‌, ಸುಪ್ರಿಯಾ ಸುಳೆ, ನವಾಬ್‌ ಮಲಿಕ್‌ ಉಪಸ್ಥಿತರಿದ್ದರು.

5-6 ದಿನಗಳಲ್ಲಿ ಸರಕಾರ ರಚನೆ ಕಾರ್ಯ ಪೂರ್ಣಗೊಳ್ಳಲಿದೆ. ಡಿಸೆಂಬರ್‌ ಆರಂಭದೊಳಗೆ ಸದೃಢ ಸರಕಾರ ರಾಜ್ಯಕ್ಕೆ ಸಿಗಲಿದೆ. ಗುರುವಾರ ಮಧ್ಯಾಹ್ನದೊಳಗೆ ಹೊಸ ಸರಕಾರದ ಸ್ಪಷ್ಟ ಚಿತ್ರಣ ಸಿಗಲಿದೆ.
– ಸಂಜಯ್‌ ರಾವತ್‌, ಶಿವಸೇನೆ ಮುಖಂಡ

Comments are closed.