ಮುಂಬೈ

ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಫಡ್ನವೀಸ್ ಹೇಳಿದ ನಂತರ ಬಿಜೆಪಿ ಜೊತೆ ಸಭೆ ರದ್ದುಗೊಳಿಸಿದ ಶಿವಸೇನೆ

Pinterest LinkedIn Tumblr


ಮುಂಬೈ: ಸರ್ಕಾರ ರಚನೆಯ ಮೈತ್ರಿಯಲ್ಲಿ ಅಧಿಕಾರ ಸಮಾನ ಹಂಚಿಕೆ ಸೂತ್ರದಂತೆ ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನೆಗೆ ನೀಡಬೇಕು ಎಂಬ ಬೇಡಿಕೆಯನ್ನು ಬಿಜೆಪಿಯ ದೇವೇಂದ್ರ ಫಡ್ನವೀಸ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿಯೊಂದಿಗೆ ನಡೆಯಬೇಕಿದ್ದ ಸಭೆಯನ್ನು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ರದ್ದುಗೊಳಿಸಿದ್ದಾರೆ. ಈ ಮೂಲಕ ಮೈತ್ರಿ ಪಕ್ಷಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಗಂಭೀರವಾಗಿದೆ. ಸರ್ಕಾರ ರಚನೆ ಸಂಬಂಧ ಇಂದು ಎರಡು ಪಕ್ಷಗಳ ನಡುವೆ ಮಹತ್ವದ ಸಭೆ ನಡೆಸಲು ಈ ಮೊದಲು ನಿಶ್ಚಯಿಸಲಾಗಿತ್ತು.

ಇಂದು ನಾಲ್ಕು ಗಂಟೆಗೆ ಬಿಜೆಪಿ ಜೊತೆಗೆ ಸಭೆ ನಿಶ್ಚಯವಾಗಿತ್ತು. ಅಧಿಕಾರ ಸಮಾನ ಹಂಚಿಕೆಗೆ ಫಡ್ನವೀಸ್ ಒಪ್ಪದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಅವರು ಈ ಸಭೆಯನ್ನು ರದ್ದುಗೊಳಿಸಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಶಿವಸೇನೆಯ ಹಿರಿಯ ನಾಯಕರು ಭಾಗವಹಿಸಬೇಕಿತ್ತು ಎಂದು ಸೇನೆಯ ಹಿರಿಯ ಮುಖಂಡರು ಹೇಳಿದರು.

ಮುಂದಿನ ಸರ್ಕಾರ ರಚನೆ ಕುರಿತು ಚರ್ಚೆ ಮಾಡಲು ಬಿಜೆಪಿ ಕಡೆಯಿಂದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಪಕ್ಷದ ನಾಯಕ ಭೂಪೇಂದ್ರ ಯಾದವ್ ಭಾಗವಹಿಸಬೇಕಿತ್ತು. ಶಿವಸೇನೆ ಕಡೆಯಿಂದ ಸುಭಾಷ್ ದೇಸಾಯಿ ಮತ್ತು ಸಂಜಯ್ ರಾವತ್ ಪ್ರತಿನಿಧಿಗಳಾಗಿದ್ದರು ಎಂದು ಸೇನೆಯ ನಾಯಕರು ತಿಳಿಸಿದ್ದಾರೆ.

ಶಿವಸೇನೆಯ ಬೇಡಿಕೆಯಂತೆ ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ದೇವೇಂದ್ರ ಫಡ್ನವೀಸ್ ಇಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ ಗಂಟೆಯ ಬಳಿಕ ಈ ಬೆಳವಣಿಗೆ ನಡೆದಿದೆ.

50:50 ಅನುಪಾತದಲ್ಲಿ ಅಧಿಕಾರ ಸಮಾನ ಹಂಚಿಕೆ ಬಗ್ಗೆ ಬಿಜೆಪಿ ಲಿಖಿತ ರೂಪದಲ್ಲಿ ಭರವಸೆ ನೀಡಬೇಕು ಎಂದು ಶಿವಸೇನೆ ಬೇಡಿಕೆ ಇಟ್ಟಿತ್ತು. ಆದರೆ, ಇದೀಗ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಬಿಜೆಪಿ ಸುತಾರಾಂ ತಯಾರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಶಿವಸೇನೆ ಬೆಂಬಲ ನೀಡಿದರೆ, ಮಾತುಕತೆ ಸಿದ್ಧ ಎಂದು ಕಾಂಗ್ರೆಸ್ ಮತ್ತು ಎನ್​ಸಿಪಿ ಮೈತ್ರಿ ಹೇಳಿಕೆ ನೀಡಿದ್ದವು. ಇದೀಗ ಈ ಎಲ್ಲ ಬೆಳವಣಿಗೆಗಳ ನಡುವೆ ಮಹಾರಾಷ್ಟ್ರದಲ್ಲಿ ಮುಂದೆ ಯಾರು ಸರ್ಕಾರ ರಚನೆ ಮಾಡಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

Comments are closed.