ಮುಂಬೈ

ಗೂಗಲ್‌ ಮ್ಯಾಪ್‌ ಮೂಲಕ ಶೌಚಾಲಯ ಹುಡುಕಿ!

Pinterest LinkedIn Tumblr


ಮುಂಬಯಿ: ಪೇಟೆಯಲ್ಲಿದ್ದೀರಿ.. ಇನ್ನೆಲ್ಲಿಗೋ ಹೋಗಬೇಕು. ಅಷ್ಟರಲ್ಲೇ ಅರ್ಜೆಂಟಾಗಿದೆ. ಅಯ್ಯೋ.. ಟಾಯ್ಲೆಟ್‌ ಎಲ್ಲಿದೆಯಪ್ಪಾ? ಅಂತ ಇನ್ನು ತಲೆಕೆಡಿಸಿಕೊಳ್ಳುವ, ಅವರಿವರ ಬಳಿ ಕೇಳಲೂ ಮುಜುಗರಪಟ್ಟುಕೊಳ್ಳುವ ಸ್ಥಿತಿಯೇ ಇನ್ನಿಲ್ಲ.

ಇನ್ನೇನಿದ್ದರೂ, ಮೊಬೈಲ್‌ ತೆಗೆದು ಗೂಗಲ್‌ ಮ್ಯಾಪ್‌ ನೋಡಿದರೆ ಸಾಕು. ಶೌಚಾಲಯ ಎಲ್ಲಿದೆ? ನಿಮಗಿಂತ ಎಷ್ಟು ದೂರದಲ್ಲಿದೆ ಎಂದು ಥಟ್ಟನೆ ಹೇಳುತ್ತದೆ. 2016ರಲ್ಲಿ ಪ್ರಾಯೋಗಿಕವಾಗಿ ಗೂಗಲ್‌ ಈ ಯೋಜನೆಯನ್ನು ಭಾರತದ ಮೂರು ನಗರಗಳಾದ ಹೊಸದಿಲ್ಲಿ, ಭೋಪಾಲ ಮತ್ತು ಇಂದೋರ್‌ಗಳಲ್ಲಿ ಜಾರಿಗೊಳಿಸಿತ್ತು.

ಇನ್ನು ಮುಂದೆ ಭಾರತಾದ್ಯಂತ 57 ಸಾವಿರ ಸಾರ್ವಜನಿಕ ಶೌಚಾಲಯಗಳ ಬಗ್ಗೆ ಗೂಗಲ್‌ ಮ್ಯಾಪ್‌ನಲ್ಲಿ ಮಾಹಿತಿ ದೊರೆಯಲಿದೆ. 2300 ನಗರಗಳಲ್ಲಿ ಗೂಗಲ್‌ ಗುರುತಿಸಿರುವ ಶೌಚಾಲಯಗಳಿವೆ.

ಜಗತ್ತಿನಾದ್ಯಂತ ಜನರು ವಿವಿಧೆಡೆಗೆ ಪ್ರಯಾಣಿಸುತ್ತಿರುತ್ತಾರೆ. ಇಂತಹವರಿಗೆ ಸುಲಭವಾಗಿ ಶೌಚಾಲಯಗಳು ಸಿಗಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಮತ್ತು ಭಾರತದಲ್ಲಿ ನೈರ್ಮಲಿಕರಣ ಮತ್ತು ಸ್ವತ್ಛಭಾರತದ ಉದ್ದೇಶದಿಂದ ಗೂಗಲ್‌ ಈ ನೆರವು ನೀಡುತ್ತಿದೆ ಎಂದು ಗೂಗಲ್‌ ಮ್ಯಾಪ್‌ನ ಹಿರಿಯ ಪ್ರೋಗ್ರಾಂ ಮ್ಯಾನೇಜರ್‌ ಅನಲ್‌ ಘೋಷ್‌ ಹೇಳಿದ್ದಾರೆ.

ಅಲ್ಲದೇ ಹೆಚ್ಚು ಖಚಿತತೆ ಇರುವಂತೆ ಮತ್ತು ನಿಖರವಾಗಿ ಗುರುತಿಸಲು ಅನುಕೂಲವಾಗುವಂತೆ ಗೂಗಲ್‌ನಲ್ಲಿ ಶೌಚಾಲಯ ಮಾಹಿತಿ ಇರಲಿದೆ. ಆಫ್ಲೈನ್‌ ಮೋಡ್‌ನ‌ಲ್ಲೂ ಇದು ಲಭ್ಯವಾಗಲಿದೆ.

ಇದುವರೆಗೆ ಗೂಗಲ್‌ ಶೌಚಾಲಯವನ್ನು 2.5 ಲಕ್ಷಕ್ಕೂ ಹೆಚ್ಚು ಮಂದಿ ಸರ್ಚ್‌ ಮಾಡಿದ್ದಾರೆ. 32 ಸಾವಿರಕ್ಕೂ ಹೆಚ್ಚು ರಿವ್ಯೂಗಳು ಬಂದಿವೆ ಎಂದು ಗೂಗಲ್‌ ಹೇಳಿದೆ.

Comments are closed.