ಮುಂಬೈ

ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಅಯೋಧ್ಯೆಯತ್ತ ಶಿವಸೇನೆ, ವಿಎಚ್​​ಪಿ ಕಾರ್ಯಕರ್ತರು

Pinterest LinkedIn Tumblr


ನವದೆಹಲಿ: ಲೋಕಸಭಾ ಚುನಾವಣೆಗೆ ಮುನ್ನವೇ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ನಾಳೆ ಶಿವಸೇನೆ ನೇತೃತ್ವದಲ್ಲಿ ಧರ್ಮಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿವಸೇನೆ ಸೇರಿದಂತೆ ವಿಶ್ವ ಹಿಂದೂ ಪರಿಷತ್​​ ಕಾರ್ಯಕರ್ತರು ಅಯೋಧ್ಯೆಗೆ ದೌಡಾಯಿಸಿದ್ದಾರೆ. ಹಿಂದೂ ಸಮಾಜದ ಬಹುದಿನಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣ ಮಾಡಲೇಬೇಕೆಂದು ಕೇಂದ್ರಕ್ಕೆ ಆಗ್ರಹಿಸಲು ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಧರ್ಮಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಅಯೋಧ್ಯೆಯಲ್ಲಿ ನಡೆಯಲಿರುವ ಧರ್ಮಸಭೆ ದೇಶದ ವಿವಿಧ ಮೂಲೆಗಳಿಂದ ಸಾವಿರಾರು ಜನ ಈಗಾಗಲೇ ಆಗಮಿಸಿದ್ದಾರೆ. ಅಲ್ಲದೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕೂಡ ಅಯೋಧ್ಯೆಗೆ ಎರಡು ದಿನಗಳ ಭೇಟಿ ನೀಡುತ್ತಿದ್ದು, ಶಿವಸೇನೆ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ಬಂದಿದೆ. ಹೀಗಾಗಿಯೇ ಶುಕ್ರವಾರ ರಾತ್ರಿಯಿಂದಲೇ ಕಾರ್ಯಕರ್ತರು ರೈಲುಗಳಲ್ಲಿ ಮಹಾರಾಷ್ಟ್ರದಿಂದ ಅಯೋಧ್ಯೆಗೆ ಬರುತ್ತಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಶಕ್ತಿ ಪ್ರರ್ಶನಕ್ಕೆ ಶಿವಸೇನೆ ಮುಂದಾಗಿದೆ.

ನಿಷೇದಾಜ್ಞೆ ಜಾರಿ: ಧರ್ಮಸಭೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟೆಚ್ಚರ ಆದೇಶ ಹೊರಡಿಸಿದೆ. ಸದಾ ಕೋಮುಗಲಭೆಗಳಿಂದ ಹೊತ್ತಿ ಉರಿಯುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಭಾರೀ ಬಿಗಿ ಪೊಲೀಸ್​​ ಬಂದೋಬಸ್ತ್​​​ ಮಾಡಲಾಗಿದೆ.

ಇಡೀ ಉತ್ತರಪ್ರದೇಶದಲ್ಲೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೆಲವು ಧಾರ್ಮಿಕ ಮೂಲಭೂತವಾದಿಗಳು ಸಭೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಹೀಗಾಗಿ ಸೇನಾಪಡೆ, ಅರೆಸೇನಾಪಡೆ, ಶಾರ್ಪ್‍ಶೂಟರ್ಸ್, ಕಮಾಂಡೋ ಸೇರಿದಂತೆ ವಿವಿಧ ಶ್ರೇಣಿಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ರಾಜಧಾನಿ ಲಖ್ನೋ, ಜಾನ್ಸಿ, ಅಲಹಾಬಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಮಮಂದಿರ ನಿರ್ಮಾಣದ ಅಭಿಯಾನ ಮುಂಚೂಣಿಗೆ ಬಂದಾಗ 1992ರಲ್ಲಿ 16ನೇ ಶತಮಾನದ ಬಾಬರಿ ಮಸೀದಿಯನ್ನು ನಿರ್ನಾಮ ಮಾಡಲಾಯಿತು. ಬಳಿಕ ಈ ಸ್ಥಳ ಹಿಂದೂ ದೇವರ ಜನ್ಮಸ್ಥಾನ ಎಂದು ಹೇಳಲಾಗುತ್ತಿತ್ತು. ಈ ಸಂಬಂಧ ಪ್ರಕರಣ ಕೋರ್ಟ್​ ಮೆಟ್ಟಿಲೇರಿತು. ಈಗಾಗಲೇ ಸುಪ್ರೀಂಕೋರ್ಟ್​​ ಜನವರಿಗೆ ಉನ್ನತ ನ್ಯಾಯಪೀಠವೊಂದು ಅಂತಿಮ ತೀರ್ಪು ನೀಡುವುದಾಗಿ ತಿಳಿಸಿದೆ.

ಆದರೆ, ಸುಪ್ರೀಂಕೋರ್ಟ್​ ಹೇಳಿಕೆಯಿಂದ ಶಿವಸೇನೆ ಕೆಂಡಮಂಡಲವಾಗಿದೆ. ಲೋಕಸಭಾ ಚುನಾವಣೆಗೆ ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ಅವರು, ತಮ್ಮ ಪಕ್ಷದ ಘೋಷ ವಾಕ್ಯವನ್ನು ಪ್ರಕಟಿಸಿದ್ದಾರೆ. ಮುಂಬರುವ 2019 ರ ಲೋಕಸಭಾ ಚುನಾವಣೆಗೆ ರಾಮಮಂದಿರ ಮೊದಲು, ಸರ್ಕಾರ ರಚನೆ ನಂತರ ಎಂದು ಉದ್ದವ್​​ ಠಾಕ್ರೆ ಘೋಷಿಸಿದ್ಧಾರೆ. ಈ ಮೂಲಕ ರಾಮಮಂದಿರ ನಿರ್ಮಾಣಕ್ಕೆ ತಮ್ಮ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ: ಇಸ್ಮಾಯಿಲ್ ಫರೂಕಿ ವರ್ಸಸ್ ಭಾರತ ಸರಕಾರದ ನಡುವಿನ ಪ್ರಕರಣದ ವಿಚಾರಣೆ ವೇಳೆ 1994ರಲ್ಲಿ ಸುಪ್ರೀಂ ಕೋರ್ಟ್, ನಮಾಜ್ ಎಲ್ಲಿ ಬೇಕಾದರೂ ಸಲ್ಲಿಸಬಹುದು. ಮಸೀದಿಯೇ ಆಗಬೇಕೆಂದಿಲ್ಲ. ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ. ಈ ಕಾರಣಕ್ಕೆ ಮಸೀದಿ ನಿರ್ಮಿಸಿರುವ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. ಅಷ್ಟೇ ಅಲ್ಲದೇ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪನ್ನು ಪರಿಶೀಲನೆಗಾಗಿ ದೊಡ್ಡ ಸಾಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು.

Comments are closed.