ಮುಂಬೈ

ವಿಚಾರವಾದಿ ಧಾಬೋಲ್ಕರ್‌ ಹತ್ಯೆ ಪ್ರಕರಣ: ಸಿಬಿಐನಿಂದ ಶಂಕಿತ ಪ್ರಮುಖ ಆರೋಪಿ ಸಚಿನ್‌ ಪ್ರಕಾಶರಾವ್‌ ಬಂಧನ

Pinterest LinkedIn Tumblr

ಮುಂಬಯಿ: ದೇಶಾದ್ಯಂತ ಸದ್ದು ಮಾಡಿದ ವಿಚಾರವಾದಿ, ಪ್ರಗತಿಪರ ಚಿಂತಕ ನರೇಂದ್ರ ಧಾಬೋಲ್ಕರ್‌ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ತರುವಾಯ ಸಿಬಿಐ ಶಂಕಿತ ಪ್ರಮುಖ ಆರೋಪಿ ಸಚಿನ್‌ ಪ್ರಕಾಶರಾವ್‌ ಅಂದುರೆಯನ್ನು ಶನಿವಾರ ಔರಂಗಾಬಾದ್‌ನಲ್ಲಿ ಬಂಧಿಸಿದೆ.

ಪುಣೆಯಲ್ಲಿ 2013ರ ಆಗಸ್ಟ್‌ 20ರಂದು ನಡೆದ ಪ್ರಕರಣದಲ್ಲಿ ಧಾಬೋಲ್ಕರ್‌ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳ ಪೈಕಿ ಅಂದುರೆ ಪ್ರಧಾನ ಶೂಟರ್‌ ಆಗಿರುವ ಸಾಧ್ಯತೆಗಳಿವೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಅಧಿಕಾರಿಗಳ ತಂಡವು ಆತನ ವಿಚಾರಣೆಯನ್ನು ತೀವ್ರಗೊಳಿಸಿದೆ. ವಿಚಾರವಾದಿ ಧಾಬೋಲ್ಕರ್‌ ಹತ್ಯೆಯ ನಂತರ 2015ರ ಫೆಬ್ರವರಿ 16ರಂದು ಕೊಲ್ಹಾಪುರದಲ್ಲಿ ಮತ್ತೊಬ್ಬ ಚಿಂತಕ ಗೋವಿಂದ ಪನ್ಸಾರೆ ಅವರ ಹತ್ಯೆ ನಡೆದಿತ್ತು.

ಈ ಎರಡೂ ಹತ್ಯೆ ಪ್ರಕರಣಗಳ ತನಿಖೆ ವಿಳಂಬ ಗತಿಯಲ್ಲಿ ಸಾಗುತ್ತಿರುವ ಬಗ್ಗೆ ಬಾಂಬೆ ಹೈಕೋರ್ಟ್‌ ಇತ್ತೀಚೆಗಷ್ಟೇ ಮಹಾರಾಷ್ಟ್ರ ಹಾಗೂ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಅಂದುರೆಯ ಬಂಧನವಾಗಿರುವುದು ಗಮನಾರ್ಹವಾಗಿದೆ.

Comments are closed.