ಮುಂಬೈ

ನಕಲಿ ಫ್ಲ್ಯಾಟ್‌ ಮಾರಾಟ: ಬುರ್ಖಾಧಾರಿ ಮಹಿಳೆಯಿಂದ ಗ್ರಾಹಕನಿಗೆ ಬಿತ್ತು 30 ಲಕ್ಷ ರೂ ‘ಟೋಪಿ’…!

Pinterest LinkedIn Tumblr


ಮುಂಬಯಿ: ಬಾಲಿವುಡ್‌ ಚಿತ್ರ ‘ಖೋಸ್ಲಾ ಕಾ ಘೋಸ್ಲಾ’ದ ಚಿತ್ರಕತೆಯನ್ನೇ ಹೋಲುವ ವಂಚನೆಯ ಪ್ರಕರಣವೊಂದು ಮುಂಬಯಿಯ ಡೋಂಗ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತನ್ನದಲ್ಲದ ಫ್ಲ್ಯಾಟ್‌ ಒಂದರ ಮಾಲಕಿ ಎಂದು ಹೇಳಿಕೊಂಡು 37 ವರ್ಷದ ಬುರ್ಖಾಧಾರಿ ಮಹಿಳೆಯೊಬ್ಬಳು ಫ್ಲ್ಯಾಟ್‌ ಅನ್ನು ಮಾರುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 30 ಲಕ್ಷ ರೂ ವಂಚಿಸಿ ಪರಾರಿಯಾಗಿದ್ದಾಳೆ.

ತುರ್ತು ಹಣದ ಅಗತ್ಯವಿದೆ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ ಫ್ಲ್ಯಾಟ್‌ ಅನ್ನು ಮಾರಾಟ ಮಾಡುವುದಾಗಿ ನಂಬಿಸಿ 30 ಲಕ್ಷ ರೂ ಪಡೆದುಕೊಂಡು ತನ್ನ ಮೂವರು ಸಹಾಯಕರೊಂದಿಗೆ ಪಲಾಯನ ಮಾಡಿದ್ದಾಳೆ. ಡೋಂಗ್ರಿ ಠಾಣಾ ಪೊಲೀಸರು ಇದೀಗ ಈ ಡೋಂಗಿ ಮಹಿಳೆಯ ಪತ್ತೆಗೆ ಬಲೆ ಬೀಸಿದ್ದಾರೆ.

ಡೋಂಗ್ರಿಯ ಖಾದಕ್‌ ಪ್ರದೇಶದಲ್ಲಿ ಒಂದು ಕೊಠಡಿಯ ಫ್ಲ್ಯಾಟ್‌ನಲ್ಲಿ ತಂದೆ-ತಾಯಿ, ಪತ್ನಿ ಹಾಗೂ ಸೋದರರ ಜತೆ ವಾಸಿಸುತ್ತಿರುವ ಅನ್ವರ್‌ ಶೇಖ್‌ ಎಂಬಾತ 1 ಬಿಎಚ್‌ಕೆ (ಬೆಡ್‌ರೂಂ, ಹಾಲ್‌, ಕಿಚನ್‌) ಫ್ಲ್ಯಾಟ್‌ಗಾಗಿ ಹುಡುಕಾಟ ನಡೆಸಿದ್ದರು. ಇದಕ್ಕಾಗಿ ರಿಯಲ್ ಎಸ್ಟೇಟ್‌ ಏಜೆಂಟರಾದ ಖಾದರ್‌ ಶೇಖ್‌ ಮತ್ತು ಸಾಜಿದ್‌ ಅನ್ಸಾರಿ ಎಂಬವರನ್ನು ಭೇಟಿ ಮಾಡಿದಾಗ, ಡೋಂಗ್ರಿಯಲ್ಲಿರುವ ಅನ್ಸಾರಿ ಹೈಟ್ಸ್‌ನ 11ನೇ ಮಹಡಿಯ ಮನೆಯೊಂದನ್ನು ತೋರಿಸಿದ್ದರು. ನವೆಂಬರ್‌ 6ರಂದು ಈ ಘಟನೆ ನಡೆದಿತ್ತು.

450 ಚದರ ಅಡಿಯ ಆ ಮನೆಗೆ ಏಜೆಂಟರು 65 ಲಕ್ಷ ರೂ ಬೆಲೆ ಕೇಳಿದಾಗ, ಅದು ತನ್ನ ಬಜೆಟ್‌ಗೆ ಮೀರಿದ್ದು ಎಂದು ಅನ್ವರ್‌ ಹೇಳಿದ್ದರು. ಆಗ ಬೆಲೆಯ ಬಗ್ಗೆ ಚೌಕಾಶಿ ಮಾಡಬಹುದು ಎಂದು ಏಜೆಂಟರು ಹೇಳಿದ್ದಾಗಿ ಅನ್ವರ್‌ ತಿಳಿಸಿದರು.

ಎರಡು ದಿನಗಳ ಬಳಿಕ ಇಬ್ಬರೂ ಏಜೆಂಟರು ಅನ್ವರ್‌ ಅನ್ನು ಭೇಟಿಯಾಗಿ, ಫ್ಲ್ಯಾಟ್‌ ಮಾಲೀಕರೆಂದು ಸಬೀನಾ ಖಯ್ಯೂಮ್‌ ಎಂಬ ಮಹಿಳೆಯನ್ನು ಪರಿಚಯಿಸಿದ್ದರು. ಈಕೆ ಫ್ಲ್ಯಾಟ್‌ನ ಬೆಲೆಯನ್ನು 45 ಲಕ್ಷಕ್ಕೆ ಇಳಿಸಿರುವುದಾಗಿ ಆಕೆ ಹೇಳಿದಳು. ದಕ್ಷಿಣ ಮುಂಬಯಿಯಲ್ಲಿ ಒಂದು ಫ್ಲ್ಯಾಟ್‌ ಹೊಂದಲೇಬೇಕಾದ ತುರ್ತು ಅಗತ್ಯ ಅನ್ವರ್‌ಗಿದೆ ಎಂಬುದನ್ನು ಅರಿತ ಈ ವಂಚಕರು ತಕ್ಷಣವೇ 30 ಲಕ್ಷ ಪಾವತಿಸಿ; ಉಳಿದ 15 ಲಕ್ಷ ರೂ.ಗಳನ್ನು ನಂತರ ನೀಡಬಹುದು ಎಂದು ಮನವೊಲಿಸಿದರು.

ವಂಚಕರ ಬಣ್ಣದ ಮಾತುಗಳನ್ನು ನಂಬಿದ ಅನ್ವರ್‌, ಅದೇ ದಿನ 2 ಲಕ್ಷ ರೂ.ಗಳನ್ನು ಟೋಕನ್‌ ಮೊತ್ತವಾಗಿ ಪಾವತಿಸಿದ್ದರು. ಮರುದಿನ ಉಳಿದ 28 ಲಕ್ಷ ರೂ.ಗಳನ್ನು ಪಾವತಿಸಿದರು. ಖಯ್ಯೂಮ್‌ ನಿಮ್ಮನ್ನು ಭೇಟಿ ಮಾಡಲು ಬಯಸಿದ್ದಾರೆ ಎಂದು ಹೇಳಿ ಅನ್ವರ್‌ ಅವರನ್ನು ಸಾಜಿದ್‌ ತನ್ನ ಮನೆಗೆ ಕರೆಸಿಕೊಂಡಿದ್ದ.

‘ಅದರಂತೆ ನಾವು ಝಕಾರಿಯಾ ಮಸೀದಿ ಸಮೀಪವಿರುವ ಸಾಜಿದ್‌ ನಿವಾಸಕ್ಕೆ ತೆರಳಿದೆವು. ಬುರ್ಖಾ ಧರಿಸಿದ್ದ ಖಯ್ಯೂಮ್‌ ಳನ್ನು ಸಾಜಿದ್‌ ಪರಿಚಯಿಸಿದ. ನನ್ನ ಜತೆಗೆ ನನ್ನ ತಂದೆ ಮತ್ತು ಸ್ನೇಹಿತರೊಬ್ಬರು ಬಂದಿದ್ದರು. ನನ್ನ ತಂದೆಯೇ ಹಣವನ್ನು ಎಣಿಸಿ ಖಯ್ಯೂಮ್‌ಗೆ ನೀಡಿದರು. ಬುರ್ಖಾ ತೆಗೆದು ನಿಮ್ಮ ಮುಖ ತೋರಿಸಿ, ನಾವು ಯಾರಿಗೆ ಹಣ ಕೊಟ್ಟಿದ್ದೇವೆ ಎಂಬುದು ನಮಗೆ ತಿಳಿಯಬೇಕಲ್ಲವೆ? ಎಂದು ನಾವು ಕೋರಿದೆವು. ಆದರೆ ಆಕೆ ಮುಖ ತೋರಿಸಲು ನಿರಾಕರಿಸಿದಳು’ ಎಂದು ಅನ್ವರ್‌ ತಮಗಾದ ವಂಚನೆಯನ್ನು ವಿವರಿಸಿದರು.

‘ಹಣ ಪಡೆದುಕೊಂಡ ಬಳಿಕ ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಎರಡು ಮೂರು ದಿನಗಳಲ್ಲಿ ಫ್ಲ್ಯಾಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡುವುದಾಗಿ ಹೇಳಿ ಹೋದರು. ನಂತರ ನನ್ನ ಕರೆಗಳನ್ನು ಸ್ವೀಕರಿಸದೇ ತಪ್ಪಿಸಿಕೊಂಡರು. ಆಗ ಏನೋ ವಂಚನೆ ನಡೆದಿದೆ ಎಂದು ಗೊತ್ತಾಯಿತು’ ಎಂದು ಅನ್ವರ್‌ ಹೇಳಿದರು.

ಅನ್ವರ್‌ ಮತ್ತು ಅವರ ಸ್ನೇಹಿತರು ಸಾಜಿದ್‌ನ ಮನೆಗೆ ತೆರಳಿದಾಗ ಆತ ಮನೆ ಖಾಲಿ ಮಾಡಿ ಹೋಗಿರುವುದು ಪತ್ತೆಯಾಯಿತು. ನಂತರ ಅನ್ಸಾರಿ ಹೈಟ್ಸ್‌ಗೆ ಹೋಗಿ ಅಲ್ಲಿನ ನಿವಾಸಿಗಳನ್ನು ಭೇಟಿಯಾಗಿ ವಿಚಾರಿಸಿದಾಗ ವಂಚಕರು ತನಗೆ ಮಾರಿದ ಫ್ಲ್ಯಾಟ್‌ ತೀರ್ಥಯಾತ್ರೆಗೆ ತೆರಳಿದ್ದ ಹಮೀದ್‌ ಶೇಖ್‌ ಎಂಬವರದ್ದು ಎಂದು ತಿಳಿಯಿತು. ಹಮೀದ್‌ ಈ ಫ್ಲ್ಯಾಟ್‌ ಮಾರಲು ಬಯಸಿದ್ದು ನಿಜ; ಮನೆಯ ಕೀಯನ್ನು ಮನ್ಸೂರ್‌ ಚಾಂಡಿವಾಲಾ ಎಂಬ ರಿಯಲ್‌ ಎಸ್ಟೇಟ್‌ ಏಜೆಂಟ್‌ಗೆ ನೀಡಿದ್ದರು. ಸಾಜಿದ್‌ ಮತ್ತು ಖಾದರ್‌ ಗ್ರಾಹಕರಿಗೆ ಮನೆಯನ್ನು ತೋರಿಸುವುದಾಗಿ ಹೇಳಿ ಚಾಂಡಿವಾಲಾರಿಂದ ಕೀ ಪಡೆದುಕೊಂಡಿದ್ದರು. ಅನ್ಸಾರಿಯ ಪತ್ನಿ ಸಬೀನಾ ಫ್ಲ್ಯಾಟ್‌ ಮಾಲಕಿಯಂತೆ ನಟಿಸಿದ್ದಳು ಎಂದು ಪೊಲೀಸರು ವಿವರಿಸಿದರು.

ಡೋಂಗ್ರಿ ಪೊಲೀಸರು ಇದೀಗ ಈ ನಾಲ್ವರು ಖದೀಮ ವಂಚಕರ ವಿರುದ್ಧ ವಂಚನೆ, ಫೋರ್ಜರಿ, ವಿಶ್ವಾಸ ದ್ರೋಹದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂತಹ ವಂಚನೆಗಳಿಗೆ ಬಲಿಯಾಗದಿರಲು ಇಂತಹ ವ್ಯವಹಾರಗಳ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳುವಂತೆ ಪೊಲೀಸರು ಮುಂಬಯಿ ನಿವಾಸಿಗರಿಗೆ ಸಲಹೆ ನೀಡಿದ್ದಾರೆ.

Comments are closed.