ಮುಂಬೈ: ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಬಗ್ಗೆ ಅವಸರದಿಂದ ತೀರ್ಮಾನಕ್ಕೆ ಬಂದಿರಲಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿಪಾದಿಸಿದೆ.
ಒಂದು ತಿಂಗಳ ಅವಧಿಯಲ್ಲಿ ರದ್ದಾದ ನೋಟುಗಳ ಶೇ 76ರಷ್ಟು ಅಂದರೆ ಸರಿ ಸುಮಾರು ₹ 11.85 ಲಕ್ಷ ಕೋಟಿಗಳಷ್ಟು ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಹರಿದು ಬಂದಿದೆ. ನೋಟುಗಳ ಚಲಾವಣೆಯಲ್ಲಿ ತೀವ್ರ ಕೊರತೆ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ನೋಟುಗಳ ಪೂರೈಕೆಗೆ ಅಗತ್ಯ ಕ್ರಮಗಳನ್ನೆಲ್ಲ ಕೈಗೊಳ್ಳಲಾಗಿದೆ ಎಂದೂ ಆರ್ಬಿಐ ತಿಳಿಸಿದೆ.
‘ಸರ್ಕಾರ ಮತ್ತು ಆರ್ಬಿಐಮಟ್ಟದಲ್ಲಿ ವಿಸ್ತೃತವಾದ ಚರ್ಚೆ ನಂತರವೇ ಈ ಅಸಾಮಾನ್ಯ ನಿರ್ಧಾರಕ್ಕೆ ಬರಲಾಗಿತ್ತು. ಹಣಕಾಸು ವ್ಯವಸ್ಥೆಯಲ್ಲಿ ಕರೆನ್ಸಿ ನೋಟುಗಳ ಪೂರೈಕೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನೆಲ್ಲ ಕೈಗೊಳ್ಳಲಾಗಿದೆ. ಜನರು ವಿನಾಕಾರಣ ನೋಟುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಮುಂದಾಗಬಾರದು’ ಎಂದು ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ 5ನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಚಲಾವಣೆಯಲ್ಲಿದ್ದ ಕರೆನ್ಸಿಗಳ ಪೈಕಿ ಶೇ 86ರಷ್ಟಿದ್ದ ₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರ ಮತ್ತು ಆರ್ಬಿಐ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ವ್ಯಾಪಕ ಟೀಕೆ ಕೇಳಿಬಂದಿತ್ತು. ನೋಟು ರದ್ದಾದ ಒಂದು ತಿಂಗಳ ನಂತರವೂ ಗ್ರಾಹಕರ ನಗದು ಅಗತ್ಯ ಪೂರೈಸಲು ಬ್ಯಾಂಕ್ಗಳು ಹೆಣಗಾಡುತ್ತಿವೆ.
‘ನೋಟು ರದ್ದತಿ ನಿರ್ಧಾರದ ಪರಿಣಾಮಗಳನ್ನು ಮುಂಚಿತವಾಗಿಯೇ ಸಮಗ್ರವಾಗಿ ಚರ್ಚಿಸಲಾಗಿತ್ತು. ನಿರ್ಧಾರ ಜಾರಿಗೆ ಬರುತ್ತಿದ್ದಂತೆ ಜನಸಾಮಾನ್ಯರಿಗೆ ಎದುರಾಗಲಿರುವ ಸಂಕಷ್ಟಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿತ್ತು. ಆ ಪರಿಣಾಮಗಳ ತೀವ್ರತೆ ತಗ್ಗಿಸಲು ಸರ್ವ ಪ್ರಯತ್ನ ಮಾಡಲಾಗಿತ್ತು. ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ನಿರ್ಧಾರ ಜಾರಿ ಬಗ್ಗೆ ಗರಿಷ್ಠ ಗೋಪ್ಯತೆ ಕಾಯ್ದುಕೊಳ್ಳಲಾಗಿತ್ತು’ ಎಂದು ಹೇಳಿದ್ದಾರೆ.
ನವೆಂಬರ್ 10ರಿಂದ ಡಿಸೆಂಬರ್ 5ರವರೆಗೆ ವಿವಿಧ ಮುಖಬೆಲೆಯ ₹ 4 ಲಕ್ಷ ಕೋಟಿಗಳಷ್ಟು ಮೊತ್ತದ ನೋಟುಗಳನ್ನು ಚಲಾವಣೆಗೆ ಬಿಡುಗಡೆ ಮಾಡಲಾಗಿದೆ ಎಂದೂ ಆರ್ಬಿಐ ತಿಳಿಸಿದೆ.
*
₹ 11.85 ಲಕ್ಷ ಕೋಟಿ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಂದಿರುವ ರದ್ದಾದ ನೋಟುಗಳು
₹ 4 ಲಕ್ಷ ಕೋಟಿ ಚಲಾವಣೆಗೆ ಬಿಡುಗಡೆ ಮಾಡಿರುವ ನೋಟುಗಳ ಮೊತ್ತ
1,900 ಕೋಟಿ ತಿಂಗಳಲ್ಲಿ ಪೂರೈಕೆಯಾಗಿರುವ ಕಡಿಮೆ ಮುಖಬೆಲೆಯ ನೋಟುಗಳ ಸಂಖ್ಯೆ
*
ಬದಲಾಗದ ಬಡ್ಡಿ ದರ
ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿ ನಡೆಯುತ್ತಿದ್ದರೂ, ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ಅಚ್ಚರಿ ಮೂಡಿಸಿದೆ.
*
ಕೊಳ್ಳೆಗಾಲದಲ್ಲಿ ₹ 1.51 ಕೋಟಿ ಕಪ್ಪುಹಣ
ಬೆಂಗಳೂರು: ಹಳೆ ನೋಟು ರದ್ದತಿ ಬಳಿಕ ಆರ್ಬಿಐ ನಿಯಮ ಉಲ್ಲಂಘಿಸಿ ₹ 1.51 ಕೋಟಿ ಕಪ್ಪು ಹಣವನ್ನು ಸಕ್ರಮ ಮಾಡಿರುವ ಪ್ರಕರಣ ಕೊಳ್ಳೆಗಾಲದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಬಿಎಂ ಶಾಖೆಯ ಮುಖ್ಯ ಕ್ಯಾಷಿಯರ್ ಪರಶಿವಮೂರ್ತಿ ಮತ್ತಿತರರ ವಿರುದ್ಧ ಸಿಬಿಐ ಬುಧವಾರ ಎಫ್ಐಆರ್ ದಾಖಲಿಸಿದೆ. ನ.10ರಿಂದ 13ರವರೆಗೆ ನಾಲ್ಕೇ ದಿನದಲ್ಲಿ ಕೆಲವೇ ವ್ಯಕ್ತಿಗಳಿಗೆ ₹ 1,51,24,000 ಹಣ ಬದಲಾಯಿಸಿಕೊಡಲಾಗಿದೆ. ಅಷ್ಟೂ ಹಣವನ್ನು ₹ 1000 ಮತ್ತು ₹ 500ರ ಹಳೇ ನೋಟುಗಳನ್ನು ಪಡೆದು ಬದಲಿಗೆ ₹ 100 ನೋಟುಗಳನ್ನು ನೀಡಲಾಗಿದೆ.
*
ಬೆಂಗಳೂರಿನಲ್ಲೂ ನಾಲ್ಕು ಕಡೆ ಶೋಧ
ಬೆಂಗಳೂರು: ಹಳೆ ನೋಟು ರದ್ದತಿ ನಂತರ ಆರ್.ಬಿ.ಐ ನಿಯಮ ಪಾಲನೆ ಆಗುತ್ತಿದೆಯೇ ಎಂದು ಪರಿಶೀಲಿಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು(ಇಡಿ) ಬುಧವಾರ ನಗರದಲ್ಲಿ ಮೂರು ಬ್ಯಾಂಕ್ಗಳ ನಾಲ್ಕು ಶಾಖೆಗಳಲ್ಲಿ ಶೋಧನೆ ನಡೆಸಿದರು. ಎಂ.ಜಿ. ರಸ್ತೆ, ಮಲ್ಲೇಶ್ವರಂ ಮತ್ತು ಕಗ್ಗದಾಸನಪುರದಲ್ಲಿ ಅಧಿಕಾರಿಗಳ ತಂಡ ಶೋಧನೆ ನಡೆಸಿದೆ. ಕೆನರಾ ಬ್ಯಾಂಕಿನ ಒಂದು ಶಾಖೆ, ಆ್ಯಕ್ಸಿಸ್ ಬ್ಯಾಂಕಿನ ಎರಡು ಶಾಖೆ ಮತ್ತು ಐಸಿಐಸಿಐ ಬ್ಯಾಂಕಿನ ಒಂದು ಶಾಖೆಯಲ್ಲಿ ತಪಾಸಣೆ ನಡೆಸಲಾಗಿದೆ.