ಮುಂಬೈ: ಇಸ್ಲಾಮ್ ಧರ್ಮದ ವಿವಾದಾತ್ಮಕ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಜಾಕಿರ್ ನಾಯಕ್ ನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಗೆ ಕಳೆದ ಮೂರು ವರ್ಷಗಳಲ್ಲಿ ವಿದೇಶಗಳಿಂದ 60 ಕೋಟಿ ರೂ ದೇಣಿಗೆ ಬಂದಿರುವುದನ್ನು ಮುಂಬೈ ಪೊಲೀಸರು ಪತ್ತೆ ಮಾಡಿದ್ದಾರೆ.
ಮೂರು ವರ್ಷಗಳಲ್ಲಿ ಮೂರು ಬೇರೆ ಬೇರೆ ದೇಶಗಳಿಂದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಗೆ ದೇಣಿಗೆ ಬಂದಿರುವುದನ್ನು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ ದೇಣಿಗೆ ಬಂದಿರುವ ಹಣವನ್ನು ಜಾಕಿರ್ ನಾಯಕ್ ಕುಟುಂಬ ಸದಸ್ಯರಿಗೆ ಸೇರಿದ 5 ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮಾವಣೆ ಮಾಡಲಾಗಿದ್ದು ಈ ಹಣ ಜಾಕಿರ್ ನಾಯಕ್ ಗೆ ಸೇರಿದೆಯೇ ಹೊರತು, ಆತನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಗೆ ಅಲ್ಲ ಎಂದು ತಿಳಿದುಬಂದಿದೆ.
ಮುಂಬೈ ಪೊಲೀಸರು ಜಾಕಿರ್ ನಾಯಕ್ ನ ಅಕ್ರಮ ಚಟುವಟಿಕೆಗಳು ಹಾಗೂ ಉಗ್ರರೊಂದಿಗೆ ನಂಟು ಹೊಂದಿರುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದು, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಜಾಕಿರ್ ನಾಯಕ್ ನನ್ನ ಗಡಿಪಾರು ಮಾಡಲು ಶಿಫಾರಸ್ಸು ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಾಕಿರ್ ನಾಯಕ್ ನ ಐಆರ್ ಎಫ್ ಸುಮಾರು 800 ಜನರನ್ನು ಮತಾಂತರ ಮಾಡಿದ್ದು, ಮತಾಂತರ ಮಾಡಲು ವಿದೇಶದಿಂದ ಬರುತ್ತಿರಿರುವ ದೇಣಿಗೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ವರದಿ ಪ್ರಕಟವಾಗಿತ್ತು.
Comments are closed.