ಮುಂಬೈ

ಐಪಿಎಲ್‌ ಪಂದ್ಯಗಳ ಸ್ಥಳಾಂತರದಿಂದ ತೊಂದರೆ ಏನೂ ಇಲ್ಲ’

Pinterest LinkedIn Tumblr

IPLLLLಮುಂಬೈ (ಪಿಟಿಐ): ಐಪಿಎಲ್‌ ಪಂದ್ಯಗಳು ನಡೆಯುವ ಕ್ರಿಕೆಟ್‌ ಮೈದಾನಗಳಿಗೆ ಬೃಹತ್‌ ಪ್ರಮಾಣದಲ್ಲಿ ನೀರನ್ನು ಬಳಸುವ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಐಪಿಎಲ್‌ ಪಂದ್ಯಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿದರೆ ತೊಂದರೆ ಏನೂ ಇಲ್ಲ ಎಂದಿದ್ದಾರೆ.
‘ಈ ಬಾರಿಯ ಐಪಿಎಲ್‌ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಬೇರೆ ಕಡೆಗೆ ಸ್ಥಳಾಂತರಿಸಿದರೆ ನಮಗೆ ತೊಂದರೆ ಏನೂ ಇಲ್ಲ. ಆದರೆ, ಕ್ರಿಕೆಟ್‌ ಮೈದಾನಗಳ ನಿರ್ವಹಣೆಗೆ ಕುಡಿಯುವ ನೀರು ಪೂರೈಕೆ ಸಾಧ್ಯವಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕ್ರಿಕೆಟ್ ಮೈದಾನಗಳಿಗೆ ಪೂರೈಕೆ ಮಾಡುತ್ತಿರುವುದು ಕುಡಿಯುವ ನೀರೋ ಅಥವಾ ಕುಡಿಯಲು ಯೋಗ್ಯವಲ್ಲದ ನೀರೋ ಎಂದು ಬಾಂಬೆ ಹೈಕೋರ್ಟ್‌ ರಾಜ್ಯ ಸರ್ಕಾರ ಮತ್ತು ಮುಂಬೈ ಮಹಾನಗರ ಪಾಲಿಕೆಯಿಂದ ಮಾಹಿತಿ ಕೇಳಿದೆ.
ರಾಜ್ಯದಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಇದೆ. ದೇಶದಲ್ಲಿ ತೀವ್ರ ಬರಗಾಲವಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಇಂತಹ ಸಂದರ್ಭದಲ್ಲಿ ಕ್ರಿಕೆಟ್‌ ಮೈದಾನಗಳ ನಿರ್ವಹಣೆಗೆ 60 ಲಕ್ಷ ಲೀಟರ್‌ ನೀರು ಪೂರೈಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಸರ್ಕಾರೇತರ ಸಂಸ್ಥೆಯೊಂದು ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಐಪಿಎಲ್‌ನ ಒಟ್ಟು ಪಂದ್ಯಗಳ ಪೈಕಿ 20 ಪಂದ್ಯಗಳು ಮುಂಬೈ, ಪುಣೆ ಮತ್ತು ನಾಗಪುರಗಳಲ್ಲಿ ನಡೆಯಲಿವೆ. ಈ ನಗರಗಳು ತೀವ್ರ ನೀರಿನ ತೊಂದರೆಯನ್ನು ಎದುರಿಸುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ನೀರು ಲಭ್ಯವಿರುವ ರಾಜ್ಯಗಳಿಗೆ ಐಪಿಎಲ್‌ ಪಂದ್ಯಗಳನ್ನು ಸ್ಥಳಾಂತರ ಮಾಡುವಂತೆ ಬಾಂಬೆ ಹೈಕೋರ್ಟ್‌ ಬಿಸಿಸಿಐಗೆ ಸಲಹೆ ನೀಡಿದೆ.
ಕ್ರಿಕೆಟ್‌ ಮೈದಾನಗಳ ನಿರ್ವಹಣೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲು ಮಾಡುತ್ತಿರುವ ಬಗ್ಗೆ ಬಾಂಬೆ ಹೈಕೋರ್ಟ್‌ ಬಿಸಿಸಿಐ ಸೇರಿದಂತೆ ಇತರೆ ಕ್ರಿಕೆಟ್‌ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿತ್ತು.
ಕುಡಿಯಲು ಯೋಗ್ಯವಲ್ಲದ ನೀರನ್ನು ಮೈದಾನಗಳ ನಿರ್ವಹಣೆಗಾಗಿ ಕೊಂಡುಕೊಳ್ಳುಲಾಗುತ್ತಿದೆ. ಕುಡಿಯಲು ಯೋಗ್ಯವಲ್ಲದ ನೀರನ್ನು ಮೈದಾನಗಳ ನಿರ್ವಹಣೆಗೆ ಬಳಕೆ ಮಾಡಲಾಗುತ್ತಿದೆ ಎಂದು ಬಿಸಿಸಿಐ ಹೈಕೋರ್ಟ್‌ಗೆ ತಿಳಿಸಿದೆ.

Write A Comment