ಮುಂಬೈ

ಒಆರ್‌ಒಪಿ: ಮೊದಲ ಕಂತಿನಲ್ಲಿ ₹1,465 ಕೋಟಿ ವಿತರಿಸಿದ ಎಸ್‌ಬಿಐ

Pinterest LinkedIn Tumblr

SBIಮುಂಬೈ(ಪಿಟಿಐ): ಸರ್ಕಾರಿ ನಿಯಮಗಳಂತೆ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಅಡಿಯಲ್ಲಿ ರಕ್ಷಣಾ ಇಲಾಖೆಯ 7.75 ಲಕ್ಷ ಪಿಂಚಣಿದಾರರಿಗೆ ಮೊದಲ ಕಂತಿನಲ್ಲಿ ₹1,465 ಕೋಟಿ ಬಟವಾಡೆ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ತಿಳಿಸಿದೆ.

ಸುಮಾರು 24 ಲಕ್ಷ ಮಾಜಿ ಯೋಧರು ಹಾಗೂ 6 ಲಕ್ಷ ಹುತಾತ್ಮ ಯೋಧರ ಪತ್ನಿಯರಿಗೆ ಅನ್ವಯಿಸುವಂತೆ ಕಳೆದ ನವೆಂಬರ್‌ನಲ್ಲಿ ಸರ್ಕಾರವು ಒಆರ್‌ಒಪಿ ಯೋಜನೆ ಜಾರಿಗೊಳಿಸಿತ್ತು.

‘ಸರ್ಕಾರದ ಸಲಹಾಸೂತ್ರಗಳನ್ವಯ ಮೊದಲ ಕಂತಿನಲ್ಲಿ, ಸೇವಾ ಪಿಂಚಣಿದಾರರಿಗೆ ಒಟ್ಟು ಬಾಕಿ ಮೊತ್ತದ ನಾಲ್ಕನೇ ಒಂದರಷ್ಟು (2016ರ ಫೆಬ್ರುವರಿ ತನಕದ ಲೆಕ್ಕಾಚಾರ) ಹಣವನ್ನು 2016ರ ಮಾರ್ಚ್ 14ರಂದು ವಿತರಿಸಲಾಗುವುದು. ಅಂತೆಯೇ ವಿಧಿವಶರಾದ ಯೋಧರ ಕುಟುಂಬಗಳಿಗೆ ಹಾಗೂ ಶೌರ್ಯ ಪ್ರಶಸ್ತಿ ಪುರಸ್ಕೃತ ಪಿಂಚಣಿದಾರರಿಗೆ‍ ಪೂರ್ಣ ಪ್ರಮಾಣದಲ್ಲಿ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲಾಗುವುದು’ ಎಂದು ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ, ‘2016ರ ಮಾರ್ಚ್‌ ಬಳಿಕ ಎಲ್ಲಾ ಪಿಂಚಣಿದಾರರಿಗೆ ಪರಿಷ್ಕೃತ ಪಿಂಚಣಿ ದೊರೆಯಲಿದೆ. ಮೊದಲ ಕಂತಿನಲ್ಲಿ ಸುಮಾರು ₹1,456 ಕೋಟಿ ಬಾಕಿ ಹಣವನ್ನು ಬಟವಾಡೆ ಮಾಡಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

Write A Comment