ಮುಂಬೈ: ಅಂತರ್ಜಾಲ ಸೇವೆಗೆ ವಿವಿಧ ದರ ನಿಗದಿಪಡಿಸುವ ಕ್ರಮವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೋಮವಾರ ತಳ್ಳಿಹಾಕಿದೆ. ಇದರಿಂದ, ದೇಶದಲ್ಲಿ ಜನಸಾಮಾನ್ಯರಿಗೆ ಉಚಿತ ಇಂಟರ್ನೆಟ್ ಸೇವೆ ಒದಗಿಸುವ ಫೇಸ್ ಬುಕ್ ಕಂಪೆನಿಯ ಯೋಜನೆಗೆ ಹಿನ್ನಡೆಯಾಗಿದೆ.
ಇಂಟರ್ನೆಟ್ ನಲ್ಲಿ ಎಲ್ಲಾ ವೆಬ್ ಸೈಟ್ ಗಳಿಂದ ಸಿಗುವ ಎಲ್ಲಾ ವಿಷಯಗಳು ಒಂದೇ ದರದಲ್ಲಿ ಸಿಗುವಂತಾಗಬೇಕು. ಇದರ ಉಲ್ಲಂಘನೆಯಾದರೆ ಪ್ರತಿ ದಿನಕ್ಕೆ 50 ಸಾವಿರ ರೂಪಾಯಿಯಂತೆ ದಂಡ ಕಟ್ಟಬೇಕಾಗುತ್ತದೆ ಎಂದು ಟ್ರಾಯ್ ಎಚ್ಚರಿಕೆ ನೀಡಿದೆ. ವಿವಿಧ ವೆಬ್ ಸೇವೆಗಳಿಗೆ ಬೇರೆ ಬೇರೆ ದರ ನಿಗದಿಪಡಿಸುವ ಮೂಲಕ ತಾರತಮ್ಯ ತೋರಬಾರದು ಎಂದು ಟ್ರಾಯ್ ಹೇಳಿದೆ.
ಫೇಸ್ ಬುಕ್ ಭಾರತದಲ್ಲಿ ರಿಲಯನ್ಸ್ ಟೆಲಿಕಾಂ ಕಂಪೆನಿ ಜೊತೆ ಸೇರಿ ಮೊಬೈಲ್ ಫೋನ್ ಗಳಲ್ಲಿ, ಫೇಸ್ ಬುಕ್ ಸಾಮಾಜಿಕ ಜಾಲತಾಣದ ಉಚಿತ ಬಳಕೆಯನ್ನು ಜನಸಾಮಾನ್ಯರಿಗೆ ನೀಡಲು ಯೋಜನೆ ಹಾಕಿಕೊಂಡಿತ್ತು.
ಟ್ರಾಯ್, ಕೆಲವು ವಾರಗಳ ಫ್ರೀ ಬೇಸಿಕ್ಸ್ ಸೌಲಭ್ಯವನ್ನು ನಿಲ್ಲಿಸಿತ್ತು. ಕೆಲವೊಂದು ಅಪ್ಲಿಕೇಶನ್ ಮತ್ತು ವೆಬ್ ಸೈಟ್ ಗಳನ್ನು ಉಚಿತವಾಗಿ ಜನರಿಗೆ ನೀಡಿದರೆ ನೆಟ್ ನ್ಯೂಟ್ರಾಲಿಟಿಯ ಮೂಲ ತತ್ವಗಳನ್ನು ಉಲ್ಲಂಘಿಸಿದಂತಾಗುತ್ತದೆ. ಇಂಟರ್ನೆಟ್ ನಲ್ಲಿ ಎಲ್ಲಾ ವೆಬ್ ಸೈಟ್ ಮತ್ತು ಡಾಟಾಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಇಂಟರ್ನೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ವಿವಿಧ ದರದಲ್ಲಿ ಸೇವೆ ಒದಗಿಸುವುದರಿಂದ ಸಣ್ಣ ಮತ್ತು ಹೊಸ ವೆಬ್ ಹೂಡಿಕೆದಾರರಿಗೆ ಅನಾನುಕೂಲವೇ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತವಾಗಿತ್ತು.